ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಧಿಕಾರಿಗಳೊಂದಿಗೆ HDK ಮೊದಲ ಸಭೆ: Compete With China ಪರಿಕಲ್ಪನೆ ಪ್ರಸ್ತಾಪ

Published 11 ಜೂನ್ 2024, 8:03 IST
Last Updated 11 ಜೂನ್ 2024, 8:03 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕಾ ಸಚಿವರಾಗಿ ಅಧಿಕಾರ ವಹಿಸಿಕೊಂಡ ಎಚ್‌. ಡಿ ಕುಮಾರಸ್ವಾಮಿ ಅವರು ಉಕ್ಕು ಸಚಿವಾಲಯದ ಉನ್ನತ ಅಧಿಕಾರಿಗಳ ಜತೆ ಮಂಗಳವಾರ ಸಭೆ ನಡೆಸಿದರು.

ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಪುನಶ್ಚೇತನದ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ನಡೆಸಿದ ಅವರು, ಅದರ ಸಾಧ್ಯಾಸಾಧ್ಯತೆಗಳ ಬಗ್ಗೆ ಶೀಘ್ರವೇ ಸಮಗ್ರ ಮಾಹಿತಿ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕುದುರೆಮುಖದಲ್ಲಿ ಸಿಗುತ್ತಿದ್ದ ಕಬ್ಬಿಣದ ಅದಿರು ಜಗತ್ತಿನಲ್ಲಿಯೇ ಶ್ರೇಷ್ಠ ಗುಣಮಟ್ಟದ ಅದಿರು ಎಂದ ಅಧಿಕಾರಿಗಳು, ಬೆಂಗಳೂರಿನಲ್ಲಿ ಉಕ್ಕು ಸಂಶೋಧನಾ ಕೇಂದ್ರ ಸ್ಥಾಪನೆ ಪ್ರಸ್ತಾಪಿಸಿದರು. ಉಕ್ಕು ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟರೆ ಕೈಗಾರಿಕೆಗಳಿಗೆ ಅನುಕೂಲ ಎಂದು ಕೇಂದ್ರ ಸಚಿವ ಕುಮಾರಸ್ವಾಮಿಯವರೊಂದಿಗೆ ಚರ್ಚೆ ನಡೆಸಿದರು.

ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಕುಮಾರಸ್ವಾಮಿ ಅವರು, ಕರ್ನಾಟಕದ ಸಿಎಂ ಆಗಿದ್ದ ವೇಳೆ ಕೈಗಾರಿಕೆ ಕ್ಷೇತ್ರದಲ್ಲಿ ತಾವು ಮಾಡಿದ್ದ ಕೆಲಸಗಳ ಮಾಹಿತಿ ಹಂಚಿಕೊಂಡರು. ಬೃಹತ್ ಕೈಗಾರಿಕೆ ಖಾತೆಯನ್ನು ತಮಗೇ ಕೊಟ್ಟಿರುವ ಕಾರಣ ಉಕ್ಕು ಖಾತೆಗೆ ಹೆಚ್ಚು ಸಹಾಯ ಆಗುತ್ತಿದೆ. ಇಡೀ ದೇಶದ ಎಲ್ಲ ರಾಜ್ಯಗಳ ಅಭಿವೃದ್ಧಿ ನನ್ನ ಗುರಿ. ಮೋದಿ ಅವರ ಕನಸು, ಮೆಕ್ ಇನ್ ಇಂಡಿಯಾ ಪರಿಕಲ್ಪನೆ ಉತ್ಪಾದನೆ ಹೆಚ್ಚಳ, ಉದ್ಯೋಗ ಸೃಷ್ಟಿ, ಭಾರತವನ್ನು 3ನೇ ಆರ್ಥಿಕ ಶಕ್ತಿ ಮಾಡುವ ಪ್ರಧಾನಿಗಳ ಗುರಿಗೆ ಸಾಥ್ ನೀಡೋಣ. ಅವಕಾಶ ಇರುವ ಕೈಗಾರಿಕೆಗಳನ್ನು ಪುನಃಶ್ಚೇತನ ಮಾಡೋಣ. ಅನಗತ್ಯವಾಗಿ ಜನರ ತೆರಿಗೆ ಹಣ ಪೋಲು ಮಾಡುವುದು ಬೇಡ. ಪ್ರಧಾನಿಗಳು ಬಹಳ ವಿಶ್ವಾಸ ಇಟ್ಟು ಮಹತ್ವದ ಖಾತೆಗಳನ್ನು ಕೊಟ್ಟಿದ್ದಾರೆ. ಅವರ ನಿರೀಕ್ಷೆ ಹುಸಿ ಆಗಬಾರದು ಎಂದ ಅವರು ಇಲಾಖೆಗೆ ಸಂಬಂಧಿಸಿದ ಎಲ್ಲ ವಿಷಯಗಳ ಬಗ್ಗೆ ಕೂಲಂಕಷ ಚರ್ಚೆ ನಡೆಸಿದರು.

ಇದೇ ವೇಳೆ ‘ಕಾಂಪೀಟ್ ವಿತ್‌ ಚೀನಾ’ (ಚೀನಾದೊಂದಿಗೆ ಸ್ಪರ್ಧೆ) ಪರಿಕಲ್ಪನೆ ಬಗ್ಗೆ ವಿವರಿಸಿದ ಕುಮಾರಸ್ವಾಮಿ ಅವರ ಮಾತಿಗೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಸಭೆಯಲ್ಲಿ ಉಕ್ಕು ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಸುಕೃತಿ ಲಿಖಿ, ಜಂಟಿ ಕಾರ್ಯದರ್ಶಿ ವಿನೋದ್ ಕುಮಾರ್ ತ್ರಿಪಾಠಿ, ಆರ್ಥಿಕ ಸಲಹೆಗಾರರಾದ ಅಶ್ವಿನಿ ಕುಮಾರ್, ಉಪ ಕಾರ್ಯದರ್ಶಿ ಸುಭಾಷ್ ಕುಮಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT