ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯೇಂದ್ರಗೆ ಕಾಲವೇ ಉತ್ತರ ಕೊಡಲಿದೆ: ಸೋಮಣ್ಣ

Published 16 ನವೆಂಬರ್ 2023, 15:46 IST
Last Updated 16 ನವೆಂಬರ್ 2023, 15:46 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಬಗ್ಗೆ ಮಾತನಾಡಲು ಕಾಲ ಬಂದಿಲ್ಲ. ಮುಂದಿನ ದಿನಗಳಲ್ಲಿ ಕಾಲವೇ ಉತ್ತರ ಕೊಡಲಿದೆ’ ಎಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಪ್ರಸಿದ್ಧಿ ಪಡೆದವರಿಗೆ, ಕೆಲಸಗಾರರಿಗೆ ಕೆಲವು ಸಂದರ್ಭಗಳಲ್ಲಿ ಮುಜುಗರದ ಸಂಗತಿ ಎದುರಾಗುತ್ತದೆ. ಕೆಲವೇ ದಿನಗಳಲ್ಲಿ ಸವಿಸ್ತಾರವಾಗಿ ಮಾತನಾಡುತ್ತೇನೆ. ಕಾಂಗ್ರೆಸ್ ನನ್ನನ್ನು ಸಂಪರ್ಕಿಸಬೇಕಾದ ಅವಶ್ಯಕತೆ ಇಲ್ಲ’ ಎಂದರು.

‘ನಾನು ಲೋಕಸಭೆ ಚುನಾವಣೆಗೆ ಅಭ್ಯರ್ಥಿಯಲ್ಲ. ನನ್ನದೇ ಆದ ಭಾವನೆ ವ್ಯಕ್ತಪಡಿಸಲು ಕಾಲ ಕೂಡಿಬಂದಿಲ್ಲ. ರಸ್ತೆಯಲ್ಲಿ ಬೇಕಾದಷ್ಟು ಚರ್ಚೆಗಳು ಆಗುತ್ತವೆ. ಅದಕ್ಕೆ ನಾನು ಹೊಣೆಯಲ್ಲ. ಕಷ್ಟಪಟ್ಟು ಮೇಲೆ ಬಂದಿದ್ದೇನೆ. ಬೆಂಗಳೂರಿನಂತಹ ಮಹಾನಗರದಲ್ಲಿ ಗೆದ್ದು ಬಂದಿದ್ದೇನೆ. ನೇರವಾಗಿ ಮಾತನಾಡುತ್ತೇನೆ. ಇಬ್ಬಗೆತನ ನನಗೆ ಗೊತ್ತಿಲ್ಲ’ ಎಂದು ಹೇಳಿದರು.

‘ಸಿದ್ಧಗಂಗಾ ಮಠಕ್ಕೂ ನನಗೂ ನಾಲ್ಕೈದು ದಶಕಗಳ ಅವಿನಾಭಾವ ಸಂಬಂಧವಿದೆ. ಹಿಂದಿನ ಸ್ವಾಮೀಜಿ ಅವರ ಅಣತಿ ಮೇರೆಗೆ ಅಲ್ಲಿ ಸಣ್ಣ ಕಟ್ಟಡ ಕಟ್ಟಿದ್ದು, ಅದನ್ನು ಮಠಕ್ಕೆ ಹಸ್ತಾಂತರಿಸುತ್ತಿದ್ದೇನೆ. ಎರಡು ತಿಂಗಳ ಹಿಂದೆಯೇ ಈ ಕಾರ್ಯಕ್ರಮ ನಿರ್ಧಾರವಾಗಿತ್ತು. ಸಿದ್ಧಗಂಗಾ ಕ್ಷೇತ್ರ ರಾಜಕಾರಣ, ಶಕ್ತಿ ಪ್ರದರ್ಶನಕ್ಕೆ ಅಲ್ಲ. ಹಿಂದಿನ ಶ್ರೀಗಳ ಸೂಚನೆಯನ್ನು ನಮ್ಮ ಕುಟುಂಬ ನೆರವೇರಿಸಿದೆ. ಅಧಿಕಾರದಲ್ಲಿ ಇರುವವರನ್ನು ಕಾರ್ಯಕ್ರಮಕ್ಕೆ ಕರೆಯುವುದು ಸಹಜ. ಸಚಿವರಾದ ಜಿ.ಪರಮೇಶ್ವರ, ಕೆ.ಎನ್‌. ರಾಜಣ್ಣ, ಸಂಸದ ಜಿ.ಎಸ್‌. ಬಸವರಾಜ, ಶಾಸಕ ಸುರೇಶ್ ಗೌಡ ಸೇರಿ ಎಲ್ಲ ಪಕ್ಷದವರನ್ನು ಕರೆದಿದ್ದೇನೆ. ಸಿದ್ಧಗಂಗಾ ಮಠ ಜಾತಿಯನ್ನು ಮೀರಿದ್ದು’ ಎಂದು ಸೋಮಣ್ಣ ಹೇಳಿದರು.

‘ರಾಜಕಾರಣಕ್ಕೆ ಮಠವನ್ನು ಬಳಸಿಕೊಳ್ಳುವ ಸಣ್ಣತನ ನನ್ನದಲ್ಲ. ಎರಡು ತಿಂಗಳ ಹಿಂದೆಯೇ ಕಾರ್ಯಕ್ರಮ ನಿಗದಿಪಡಿಸಲಾಗಿತ್ತು’ ಎಂದೂ ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT