ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲ್ಮೀಕಿ ನಿಗಮದ ಅವ್ಯವಹಾರ: ವೇತನಕ್ಕಾಗಿ ‘ಟ್ರೈ ಮಳಿಗೆ’ ಸಿಬ್ಬಂದಿ ಅಲೆದಾಟ

ವಾಲ್ಮೀಕಿ ಅಭಿವೃದ್ಧಿ ನಿಗಮ-ಲ್ಯಾಂಪ್ಸ್‌ ಫೆಡರೇಷನ್‌ ಸಂಸ್ಥೆಗಳ ವೈಫಲ್ಯ
Published 30 ಮೇ 2024, 23:14 IST
Last Updated 30 ಮೇ 2024, 23:14 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ‘ಕಿರು ಅರಣ್ಯ ಉತ್ಪನ್ನಗಳು ಮತ್ತು ಕರಕುಶಲ ವಸ್ತುಗಳ ಮಾರಾಟ ಮಳಿಗೆ’ಗಳಲ್ಲಿ (ಟ್ರೈ ಮಳಿಗೆ) ಕೆಲಸ ಮಾಡುವ ಸಿಬ್ಬಂದಿಗೆ ಎಂಟು ತಿಂಗಳಿನಿಂದ ವೇತನವನ್ನೇ ನೀಡಿಲ್ಲ.

ಅರಣ್ಯವಾಸಿಗಳು, ಬುಡಕಟ್ಟು ಜನರು ಜೀವನೋಪಾಯಕ್ಕಾಗಿ ಸಂಗ್ರಹಿಸುತ್ತಿದ್ದ ಕಿರು ಅರಣ್ಯ ಉತ್ಪನ್ನಗಳು ಹಾಗೂ ಕರಕುಶಲ ವಸ್ತುಗಳಿಗೆ ಸ್ಪರ್ಧಾತ್ಮಕ ಬೆಲೆ ದೊರಕಿಸಲು ಮುಂದಾಗಿದ್ದ ನಿಗಮ, ಅದಕ್ಕಾಗಿ ನಗರ ಪ್ರದೇಶಗಳಲ್ಲಿ ತನ್ನದೇ ಆದ ಮಾರಾಟ ಮಳಿಗೆಗಳನ್ನು ತೆರೆಯುವ ನಿರ್ಧಾರ ಮಾಡಿತ್ತು. 2022–2023ನೇ ಸಾಲಿನಲ್ಲಿ ₹ 2 ಕೋಟಿ, 2023–24ರಲ್ಲಿ ₹5 ಕೋಟಿ ಮೀಸಲಿಟ್ಟಿತ್ತು.

ಮೊದಲ ಹಂತದಲ್ಲಿ ಬೆಂಗಳೂರು ನಗರ, ಚಿತ್ರದುರ್ಗ, ದಾವಣಗೆರೆ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಮೈಸೂರು, ಚಿಕ್ಕಮಗಳೂರು, ಬೆಳಗಾವಿ, ಬಳ್ಳಾರಿ, ರಾಯಚೂರಿನಲ್ಲಿ ‘ಟ್ರೈ ಮಳಿಗೆ’ಗಳನ್ನು ತೆರೆಯಲಾಗಿದೆ. ಉತ್ಪನ್ನಗಳ ಖರೀದಿ, ಮಾರಾಟ, ಸಿಬ್ಬಂದಿ ನಿರ್ವಹಣೆಯ ಹೊಣೆಗಾರಿಕೆಯನ್ನು ಮೈಸೂರಿನ ಲ್ಯಾಂಪ್ಸ್‌ ಫೆಡರೇಷನ್‌ ಸಂಸ್ಥೆಗೆ ನೀಡಲಾಗಿದ್ದು, ಮುಂಗಡವಾಗಿ ₹45 ಲಕ್ಷ ಬಿಡುಗಡೆ ಮಾಡಲಾಗಿತ್ತು. 

‘ಸದರಿ ಮಳಿಗೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗೆ ಆರಂಭದ ದಿನಗಳಲ್ಲಿ ಪ್ರತಿ ತಿಂಗಳೂ ವೇತನ ನೀಡಲಾಗುತ್ತಿತ್ತು. ಕಳೆದ ಸೆಪ್ಟೆಂಬರ್‌ನಿಂದ ಇದುವರೆಗೂ ವೇತನ ಪಾವತಿಯಾಗಿಲ್ಲ. ಮಳಿಗೆಗಳಲ್ಲಿ ಕೆಲಸ ಮಾಡುವುದನ್ನು ಬಿಟ್ಟು ನಿಗಮದ ಕಚೇರಿಗೆ ಹಾಗೂ ಮೈಸೂರಿನ ಲ್ಯಾಂಪ್ಸ್‌ ಫೆಡರೇಷನ್‌ ಸಂಸ್ಥೆಗೆ ಅಲೆಯುವುದನ್ನೇ ಕಾಯಂ ಕೆಲಸ ಮಾಡಿದ್ದೇವೆ’ ಎಂದು ಸಿಬ್ಬಂದಿಯೊಬ್ಬರು ಹೇಳಿದರು.

‘ತಾಂತ್ರಿಕ ಸಮಸ್ಯೆ ಇರಬಹುದು ಎಂದು ಮೊದಲ ಮೂರು ತಿಂಗಳು ಸುಧಾರಿಸಿಕೊಂಡೆವು. ಮನೆ ಬಾಡಿಗೆ, ಮಕ್ಕಳ ಶಾಲಾ ಶುಲ್ಕ, ನಿತ್ಯದ ಖರ್ಚಿಗೂ ಹಣವಿಲ್ಲದೆ ಪರದಾಡಿದೆವು. ಮತ್ತೆ ಅದೇ ಸ್ಥಿತಿ ಮುಂದುವರಿದ ಕಾರಣ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಬಳಿಗೆ ಹೋದೆವು. ಅವರು ಲ್ಯಾಂಪ್ಸ್‌ ಫೆಡರೇಷನ್‌ ಸಂಸ್ಥೆಗೆ ಹೋಗಲು ಸೂಚಿಸಿದರು. ನಿಗಮದಿಂದ ಹಣ ಬಿಡುಗಡೆಯಾಗಿಲ್ಲ. ಉತ್ಪನ್ನಗಳನ್ನು ನೀಡಿದ್ದ ಅರಣ್ಯವಾಸಿಗಳಿಗೂ ಹಣ ಸಂದಾಯ ಮಾಡಲು ಸಾಧ್ಯವಾಗಿಲ್ಲ ಎಂದು ಸಂಸ್ಥೆಯ ಮುಖ್ಯಸ್ಥರು ಹೇಳುತ್ತಾರೆ. ನಿತ್ಯ ಅಲೆದರೂ ವೇತನ ಮಾತ್ರ ದೊರೆಯಲಿಲ್ಲ’ ಎಂದು ಟ್ರೈ ಮಳಿಗೆ ಸಿಬ್ಬಂದಿ ಕವಿತಾ ‘ಪ್ರಜಾವಾಣಿ’ಗೆ ವಿವರ ನೀಡಿದರು.

ಹಣ ಬಳಕೆಯ ವರದಿಯನ್ನೇ ನೀಡದ ಸಂಸ್ಥೆ!

ಅರಣ್ಯ ಕಿರು ಉತ್ಪನ್ನ ಖರೀದಿ, ಮಾರಾಟ, ಸಿಬ್ಬಂದಿ ನಿರ್ವಹಣೆಯ ಗುತ್ತಿಗೆ ಪಡೆದ ಲ್ಯಾಂಪ್ಸ್‌ ಫೆಡರೇಷನ್‌ ಸಂಸ್ಥೆ ಎರಡು ವರ್ಷಗಳಿಂದ ನಿಗಮಕ್ಕೆ ಹಣ ಬಳಕೆಯ ವರದಿಯನ್ನೇ ಸಲ್ಲಿಸಿಲ್ಲ.

‘ಖರ್ಚು–ವೆಚ್ಚದ ವಿವರ ಸಲ್ಲಿಸುವಂತೆ ನಿಗಮದ ಅಧಿಕಾರಿಗಳು ಹಲವು ಬಾರಿ ಸಂಸ್ಥೆಗೆ ನೆನಪಿನ ಸುತ್ತೋಲೆ ಹೊರಡಿಸಿದರೂ ಲೆಕ್ಕ ಪತ್ರ ಸಲ್ಲಿಸಿಲ್ಲ. ಸಿಬ್ಬಂದಿಗೆ ಪ್ರತಿ ತಿಂಗಳು ನೀಡಬೇಕಾದ ವೇತನದ ವಿವರಗಳನ್ನೂ ನೀಡಿಲ್ಲ. ಹಾಗಾಗಿ, ಬಾಕಿ ಅನುದಾನವನ್ನು ತಡೆಹಿಡಿಯಲಾಗಿದೆ’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಜೆ.ಜೆ. ಪದ್ಮನಾಭ ಎರಡು ತಿಂಗಳ ಹಿಂದೆ ಸಂಸ್ಥೆಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. 

‘ವೇತನ ಕೇಳಿದ್ದಕ್ಕೆ ಕೆಲಸದಿಂದಲೇ ತೆಗೆದರು’

‘ಜೀವನ ನಿರ್ವಹಣೆಗಾಗಿ ಟ್ರೈ ಮಳಿಗೆಯ ಕೆಲಸವನ್ನೇ ನಂಬಿಕೊಂಡಿದ್ದೆವು. ಸಂಸ್ಥೆ ಮತ್ತು ನಿಗಮದ ನಡುವಿನ ಕಿತ್ತಾಟದಲ್ಲಿ ನಮ್ಮನ್ನು ಬಲಿಪಶು ಮಾಡಿದ್ದಾರೆ. ಯಾರು ವೇತನಕ್ಕಾಗಿ ಒತ್ತಡ ಮಾಡಿದರೋ ಅವರನ್ನೆಲ್ಲ ಕೆಲಸದಿಂದಲೇ ತೆಗೆದುಹಾಕಿದ್ದಾರೆ. ಅವರ ಜಾಗಕ್ಕೆ ನಿಗಮದ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಂಡಿದ್ದಾರೆ’ ಎಂದು ಸಿಬ್ಬಂದಿ ರವಿ ಮತ್ತು ಶಿವು ದೂರಿದರು.

‘ನಿಗಮದ ನಿಯಮಗಳ ಪ್ರಕಾರ ಪರಿಶಿಷ್ಟ ಸಮುದಾಯಕ್ಕೆ ಸೇರಿದ ನಿರುದ್ಯೋಗಿಗಳನ್ನೇ ನೇಮಕ ಮಾಡಿಕೊಳ್ಳಬೇಕು. ಆದರೆ, ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ ಅವರು ಇತರೆ ಸಮುದಾಯಗಳ ಸಿಬ್ಬಂದಿಯನ್ನೂ ನೇಮಕ ಮಾಡಿದ್ದಾರೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT