ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲ್ಮೀಕಿ ಅಭಿವೃದ್ಧಿ ನಿಗಮದ ₹89 ಕೋಟಿ ಯಾವ ಕಂಪನಿಗಳಿಗೆ ಹೋಗಿದೆ? ಇಲ್ಲಿದೆ ವಿವರ

₹89.62 ಕೋಟಿ ಹಣ ಯಾರಾರ ಖಾತೆಗೆ ಜಮಾ ಆಗಿದೆ ಎಂಬುದರ ಕುರಿತು ವಿವರಗಳು ಲಭ್ಯವಾಗಿವೆ. ಅದರ ಮಾಹಿತಿ ಇಲ್ಲಿದೆ.
Published 1 ಜೂನ್ 2024, 6:55 IST
Last Updated 1 ಜೂನ್ 2024, 6:55 IST
ಅಕ್ಷರ ಗಾತ್ರ

ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್‌ ಖಾತೆಯಿಂದ ಹಲವು ಖಾಸಗಿ ಕಂಪನಿಗಳು ಮತ್ತು ವ್ಯಕ್ತಿಗಳ ಖಾತೆಗಳಿಗೆ ಅಕ್ರಮವಾಗಿ ₹89.62 ಕೋಟಿ ವರ್ಗಾವಣೆ ಮಾಡಿರುವ ಹಗರಣದ ತನಿಖೆ ಸಿಬಿಐಗೆ ವರ್ಗಾವಣೆಯಾಗುವುದು ಬಹುತೇಕ ಖಚಿತವಾಗಿದೆ.

₹89.62 ಕೋಟಿ ಹಣ ಯಾರಾರ ಖಾತೆಗೆ ಜಮಾ ಆಗಿದೆ ಎಂಬುದರ ಕುರಿತು ವಿವರಗಳು ಲಭ್ಯವಾಗಿವೆ. ಅದರ ಮಾಹಿತಿ ಇಲ್ಲಿದೆ.

ಸಿಬಿಐ ತನಿಖೆಗೆ ಯೂನಿಯನ್‌ ಬ್ಯಾಂಕ್‌ನಿಂದ ಮನವಿ

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್‌ ಆತ್ಮಹತ್ಯೆಗೆ ಸಂಬಂಧಿಸಿದಂತೆ ಶಿವಮೊಗ್ಗದ ವಿನೋಬನಗರ ಪೊಲೀಸ್‌ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ನಿಗಮದ ಅಧಿಕಾರಿಗಳು ನೀಡಿರುವ ದೂರನ್ನು ಆಧರಿಸಿ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಇತರ ಅಧಿಕಾರಿಗಳ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.

ಆದರೆ, ಈ ವಂಚನೆ ಪ್ರಕರಣದ ತನಿಖೆ ಕೈಗೆತ್ತಿಕೊಳ್ಳುವಂತೆ ಕೋರಿ ಯೂನಿಯನ್‌ ಬ್ಯಾಂಕ್‌ ಆಡಳಿತ ಮಂಡಳಿ ಸಿಬಿಐ ಅನ್ನು ಕೋರಿದೆ. ₹3 ಕೋಟಿ ಅಥವಾ ಅದಕ್ಕಿಂತ ಹೆಚ್ಚು ಮೌಲ್ಯದ ಬ್ಯಾಂಕ್‌ ವಂಚನೆ ಪ್ರಕರಣಗಳನ್ನು ಸಿಬಿಐ ತನಿಖೆಗೆ ವರ್ಗಾಯಿಸ ಬೇಕೆಂಬ ಆದೇಶವಿದೆ. ಬ್ಯಾಂಕ್‌ ವಂಚನೆ ಪ್ರಕರಣವು ₹50 ಕೋಟಿಯನ್ನು ಮೀರಿದ್ದರೆ ಆ ಬ್ಯಾಂಕ್‌ನ ವಿಚಕ್ಷಣ ಅಧಿಕಾರಿಯೇ ಸಿಬಿಐ ಅಧಿಕಾರಿಗಳಿಗೆ ದೂರು ಸಲ್ಲಿಸಬೇಕೆಂದು 2019ರ ನವೆಂಬರ್‌ 6ರಂದು ಕೇಂದ್ರ ಹಣಕಾಸು ಸಚಿವಾಲಯ ಸುತ್ತೋಲೆ ಹೊರಡಿಸಿತ್ತು. ಈ ಎರಡೂ ಕ್ರಮಗಳು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದ ಅಕ್ರಮ ವರ್ಗಾವಣೆ ಹಗರಣಕ್ಕೆ ಅನ್ವಯವಾ ಗುತ್ತವೆ ಎಂದು ಸಿಬಿಐನಲ್ಲಿ ದೀರ್ಘ ಕಾಲ ಕಾರ್ಯನಿರ್ವಹಿಸಿದ ಅನುಭವವಿರುವ ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಖರ್ಬೀಕರ್ ನೇತೃತ್ವದಲ್ಲಿ ಎಸ್‌ಐಟಿ

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಪಿ. ಚಂದ್ರಶೇಖರನ್‌ ಆತ್ಮಹತ್ಯೆಗೆ ಸಂಬಂಧಿಸಿದಂತೆ ಶಿವಮೊಗ್ಗದ ವಿನೋಬನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಮತ್ತು ನಿಗಮದ ಹಣದ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಹೈಗ್ರೌಂಡ್ಸ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳ ತನಿಖೆಗೆ ಸಿಐಡಿ ಆರ್ಥಿಕ ಅಪರಾಧಗಳ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಮನೀಷ್ ಖರ್ಬೀಕರ್‌ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿ ಗೃಹ ಇಲಾಖೆ ಶುಕ್ರವಾರ ಆದೇಶ ಹೊರಡಿಸಿದೆ.

ಬೆಂಗಳೂರು ದಕ್ಷಿಣ ಸಂಚಾರ ವಿಭಾಗದ ಡಿಸಿಪಿ ಶಿವಪ್ರಕಾಶ್‌ ದೇವರಾಜು, ರಾಜ್ಯ ಗುಪ್ತದಳದ ಎಸ್‌ಪಿ ಹರಿರಾಮ್‌ ಶಂಕರ್‌ ಮತ್ತು ಸಿಐಡಿ ಎಸ್‌ಪಿ ರಾಘವೇಂದ್ರ ಕೆ. ಹೆಗಡೆ ಅವರನ್ನು ಎಸ್‌ಐಟಿ ಸದಸ್ಯರನ್ನಾಗಿ ನೇಮಿಸಲಾಗಿದೆ.

ಈ ಎರಡು ಪ್ರಕರಣಗಳ ಜತೆ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಆರ್ಥಿಕ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ದಾಖಲಾಗಬಹುದಾದ ಎಲ್ಲ ಪ್ರಕರಣಗಳ ತನಿಖೆಯ ಹೊಣೆಯನ್ನು ಎಸ್‌ಐಟಿಗೆ ವಹಿಸಲಾಗಿದೆ. ಅವ್ಯವಹಾರಗಳ ಕುರಿತು ಸಮಗ್ರ ತನಿಖೆ ನಡೆಸಿ ಸಿಐಡಿ ಡಿಜಿಪಿ ಮೂಲಕ ವರದಿ ಸಲ್ಲಿಸುವಂತೆ ಎಸ್‌ಐಟಿಗೆ ಸೂಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT