ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲೆಯನ್ನೇ ಹಾಸಿ ಹೊದ್ದು ಉಸಿರಾಡಿದ ವೀರಣ್ಣ

ನು‌ಡಿ ನಮನ
Last Updated 3 ಏಪ್ರಿಲ್ 2023, 4:21 IST
ಅಕ್ಷರ ಗಾತ್ರ

ಪೌರಾಣಿಕ ಕಥೆಗಳಿಗಷ್ಟೇ ಸೀಮಿತವಾಗಿದ್ದ ತೊಗಲು ಗೊಂಬೆಯಾಟಕ್ಕೆ ಐತಿಹಾಸಿಕ ಹಾಗೂ ಸಾಮಾಜಿಕ ಸ್ಪರ್ಶ ನೀಡಿ, ಜನ ಸಮುದಾಯದ ಬಳಿಗೆ ಕಲೆಯನ್ನು ಕೊಂಡೊಯ್ದ ಹಿರಿಯ ಕಲಾವಿದ ಬೆಳಗಲ್‌ ವೀರಣ್ಣ ಕೊನೆಯವರೆಗೂ ತಾವು ನಂಬಿದ್ದ ಕಲೆಯನ್ನೇ ಹಾಸು, ಹೊದ್ದು ಉಸಿರಾಡಿದರು.

‘ನನ್ನ ಬದುಕು ಕಲೆಗೆ ಅರ್ಪಿತವಾಗಿದೆ. ಬಡತನ, ಕಷ್ಟ, ಪಡಿಪಾಟಲು, ಸನ್ಮಾನ, ಪ್ರವಾಸ, ದುಡಿದ ಹಣ, ತೊಗಲು ಗೊಂಬೆಯಾಟ ಕೊಟ್ಟ ಸಂತಸ ಎಲ್ಲವೂ ಜೀವ ಕಲೆಯಲ್ಲಿ ಲೀನವಾಗಲಿ’ ಎಂದು ವೀರಣ್ಣನವರು ಯಾವಾಗಲೂ ಹೇಳುತ್ತಿದ್ದರು.

ಕಲೆ ನೆಚ್ಚಿಕೊಂಡು ಬದುಕು ಕಟ್ಟಿಕೊಳ್ಳುವುದು ಅಷ್ಟು ಸುಲಭವಲ್ಲ ಎಂಬ ವಾಸ್ತವ ಹಿರಿಯ ಕಲಾವಿದನಿಗೆ ಗೊತ್ತಿತ್ತು. ಕಲಾವಿದ, ವೃತ್ತಿ ಕಲಾವಿದನಾದರೆ ಕಲೆ ಉಳಿಯಬಹುದು. ಆದರೆ, ಕಲಾವಿದ ಉಳಿಯಲಾರ ಎನ್ನುವ ವಾಸ್ತವದ ಅರಿವೂ ಅವರಿಗಿತ್ತು. ಆದರೂ ಇಡೀ ಬದುಕನ್ನು ಕಲಾ ಕ್ಷೇತ್ರಕ್ಕೆ ಅರ್ಪಿಸಿ, ದೇಶ– ವಿದೇಶಗಳಲ್ಲಿ ಮಿಂಚಿ ಮರೆಯಾದರು.

ಪೌರಾಣಿಕ ಕಥೆಗಳಿಗಷ್ಟೇ ಸೀಮಿತವಾಗಿದ್ದ ತೊಗಲು ಗೊಂಬೆಯಾಟಕ್ಕೆ ಸಾಮಾಜಿಕ ಸಮಸ್ಯೆ, ಸ್ವಾತಂತ್ರ್ಯ ಸಂಗ್ರಾಮದ ಸ್ಪರ್ಷ ನೀಡಿದ ಕೀರ್ತಿ ವೀರಣ್ಣ ಅವರಿಗೇ ಸಲ್ಲಬೇಕು. ಜಗಜ್ಯೋತಿ ಬಸವೇಶ್ವರ, ಕಿತ್ತೂರು ರಾಣಿ ಚೆನ್ನಮ್ಮ, ಗಾಂಧೀಜಿ ಜೀವನ ಚರಿತ್ರೆ ಜೊತೆಗೆ ಸಾಕ್ಷರತಾ ಆಂದೋಲನ, ಜನಸಂಖ್ಯೆ ನಿಯಂತ್ರಣಾ ಯೋಜನೆ, ತಾಯಿ-ಮಗುವಿನ ಆರೋಗ್ಯ, ಪಲ್ಸ್ ಪೋಲಿಯೊ, ಏಡ್ಸ್ ಕುರಿತ ಜಾಗೃತಿಗೂ ಈ ಕಲೆಯನ್ನು ಪ್ರಯೋಗಿಸಿ ಯಶಸ್ಸು ಕಂಡರು.

ಬಳ್ಳಾರಿ ಬಳಿಯ ಬೆಳಗಲ್ಲು, ವೀರಣ್ಣನವರ ಸ್ವಂತ ಊರು. ತಂದೆ ದೊಡ್ಡ ಹನುಮಂತಪ್ಪ. ತಾಯಿ ಈರಮ್ಮ. ದಂಪತಿಗಿದ್ದ 12 ಮಕ್ಕಳಲ್ಲಿ ವೀರಣ್ಣನವರು ಮಾತ್ರ ಬದುಕುಳಿದ ಗಂಡು ಮಗ. ಹೀಗಾಗಿ, ವರುಷ ಎಂಟಾದರೂ ತಾಯಿ ಮಮತೆಯಿಂದ ಸೊಂಟದ ಮೇಲೆ ಹೊತ್ತು ಬೆಳೆಸಿದರು. ಮಗನ ಮೇಲಿನ ಮುದ್ದು ವೀರಣ್ಣ ಶಾಲೆಯಿಂದ ದೂರ ಉಳಿಯುವಂತೆ ಮಾಡಿತು.

ಅಪ್ಪ ಹನುಮಂತಪ್ಪ ಅವರಿಗೆ ಮಗನಿಗೆ ಬಯಲಾಟ ಕಲಿಸುವ ಹುಚ್ಚು. ಪಿಟೀಲು ವಾದಕರಾಗಿದ್ದ ಅವರು ಖ್ಯಾತ ರಂಗ ನಟ-ನಟಿಯರನ್ನು ಕರೆಸಿ ಬಯಲಾಟ ಆಡಿಸುತ್ತಿದ್ದರು. ಬಯಲಾಟದ ಹುಚ್ಚಿನಿಂದ 22 ಎಕರೆ ಜಮೀನು, ಇದ್ದೊಂದು ಮನೆಯೂ ಕೈಬಿಟ್ಟಿತು. ಆಗ ವೀರಣ್ಣನವರಿಗೆ ಆರು ವರ್ಷ ವಯಸ್ಸು. ತಂದೆಯ ಪ್ರೇರಣೆಯಂತೆ ಆರು ವರ್ಷ ಇರುವಾಗಲೇ ಸಖಿ ಪಾತ್ರಕ್ಕೆ ಬಯಲಾಟ ಪ್ರವೇಶಿಸಿದರು. ಇದಾದ ಎರಡು ವರ್ಷಗಳಲ್ಲಿ ಅನಾರೋಗ್ಯದಿಂದ ವೀರಣ್ಣನವರ ತಂದೆ-ತಾಯಿ ಇಬ್ಬರೂ ತೀರಿಕೊಂಡರು.

ಬದುಕಿನ ಅರಿವೇ ಇಲ್ಲದೆ ಬೆಳೆದ ವೀರಣ್ಣ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾದರು.

ದೇವರ ಗುಡಿಯಲ್ಲಿ ಭಜನೆ, ಬಯಲಾಟ ಅಭ್ಯಾಸ, ಅವರಿವರು ಕೊಟ್ಟ ಊಟ-ಉಪಾಹಾರ ಸೇವಿಸಿ ಬದುಕು ದೂಡಿದರು. ರಂಗದ ನಂಟು ಬೆಳೆಸಿಕೊಂಡು ಊರೂರು ಸುತ್ತಿದರು. ಭಕ್ತ ಪ್ರಹ್ಲಾದ ನಾಟಕದಲ್ಲಿ ಪ್ರಹ್ಲಾದನ ಪಾತ್ರದ ಮೂಲಕ ರಂಗಭೂಮಿಗೂ ಕಾಲಿಟ್ಟರು.

ವೀರಣ್ಣನವರ ಪ್ರತಿಭೆ ಕಂಡು ಯಾರೋ ಒಬ್ಬರು ಗದುಗಿನ ವೀರೇಶ್ವರ ಪುಣ್ಯಾಶ್ರಮಕ್ಕೆ ಸೇರಿಸಿದರು. ಬಳಿಕ ಸಂಗೀತ- ರಂಗ ದಿಗ್ಗಜ ಬಳ್ಳಾರಿಯ ಶಿಡಗಿನಮೊಳ ವೈ.ಎಂ.ಚಂದ್ರಯ್ಯ, ಜೋಳದರಾಶಿ ದೊಡ್ಡನಗೌಡರ ಶಿಷ್ಯರಾಗಿ ಹಾರ್ಮೋನಿಯಂ, ಸಂಗೀತ, ಹಾಡುಗಾರಿಕೆ ಕಲಿತರು. ಜೀವನ ನಿರ್ವಹಣೆಗೆ ಗುಬ್ಬಿ ವೀರಣ್ಣ ನಾಟಕ ಕಂಪನಿ ಸೇರಿದಂತೆ ಅನೇಕ ವೃತ್ತಿರಂಗಭೂಮಿ ನಾಟಕಗಳಲ್ಲಿ ಸ್ತ್ರೀಪಾತ್ರಧಾರಿಯಾಗಿ, ಖಳ ನಾಯಕನಾಗಿ, ಹಾಸ್ಯ ಕಲಾವಿದನಾಗಿ ಕೆಲಸ ಮಾಡಿದರು. ‘ರಕ್ತರಾತ್ರಿ ನಾಟಕ’ದ ಶಕುನಿ ಪಾತ್ರ ವೀರಣ್ಣನವರಿಗೆ ದೊಡ್ಡ ಹೆಸರು ತಂದುಕೊಟ್ಟಿತು. ಅವರಂತೆ ಶಕುನಿ ಪಾತ್ರ ನಿರ್ವಹಿಸುವ ಮತ್ತೊಬ್ಬ ಕಲಾವಿದನಿಲ್ಲ ಎಂದೇ ಬಳ್ಳಾರಿ ಜನ ಹೇಳುತ್ತಾರೆ.

ಬಯಲಾಟ ಕಲಾ ಕ್ಷೇತ್ರದಲ್ಲೇ ಮುಂದುವರಿಯಬೇಕು ಎಂದುಕೊಂಡಿದ್ದ ವೀರಣ್ಣನವರು ತೊಗಲುಗೊಂಬೆ ಕ್ಷೇತ್ರಕ್ಕೆ ಬಂದಿದ್ದೇ ಆಕಸ್ಮಿಕ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಯೊಬ್ಬರು ನೀಡಿದ ಸಲಹೆಯಂತೆ ಅಪರೂಪದ ಕಲಾ ಪ್ರಕಾರ ತೊಗಲುಗೊಂಬೆ ಪ್ರದರ್ಶನದ ಕಡೆ ಮನಸ್ಸು ವಾಲಿಸಿದ ವೀರಣ್ಣನವರು, ಪಾರಂಪರಿಕ ಕಲೆಗೆ ತಾಂತ್ರಿಕ ಕೌಶಲ್ಯಗಳನ್ನು ಅಳವಡಿಸಿ ಸೈ ಎನಿಸಿಕೊಂಡರು. ಈ ಕಲಾ ಪ್ರಕಾರದ ಕಡೆಗೇ ಹೆಚ್ಚಿನ ಗಮನ ಹರಿಸಿದರು.

‘ಶ್ರೀರಾಮಾಂಜನೇಯ ತೊಗಲುಗೊಂಬೆ ತಂಡ’ದ ಮೂಲಕ ದೇಶ-ವಿದೇಶಗಳಲ್ಲಿ ತೊಗಲುಗೊಂಬೆ ಪ್ರದರ್ಶನ ನೀಡಿ ಬಳ್ಳಾರಿ ಜಿಲ್ಲೆಗೆ ಕೀರ್ತಿ ತಂದರು. ತೊಗಲುಗೊಂಬೆ ಪ್ರದರ್ಶನಕ್ಕೆ ಹಿಂದಿನ ಲಿಂಗೈಕ್ಯ ಗದುಗಿನ ತೋಂಟದಾರ್ಯ ಶ್ರೀಗಳು ಸೇರಿದಂತೆ ಅನೇಕರು ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸಿದರು.

ವೀರಣ್ಣನವರಿಗೆ ರಾಜ್ಯೋತ್ಸವ, ಕರ್ನಾಟಕ ನಾಟಕ ಅಕಾಡೆಮಿ ಸೇರಿದಂತೆ ಅನೇಕ ಪ್ರಶಸ್ತಿ, ಪುರಸ್ಕಾರಗಳು ಸಂದಿವೆ. ಹಂಪಿ ವಿ.ವಿಯ ನಾಡೋಜ ಗೌರವ ನೀಡಿ ಸತ್ಕರಿಸಿತ್ತು. ಬಯಲಾಟ ಅಕಾಡೆಮಿ ಅಧ್ಯಕ್ಷರಾಗಿಯೂ ವೀರಣ್ಣ ಕೆಲಸ ಮಾಡಿದ್ದಾರೆ. ವೀರಣ್ಣ ಅಕ್ಷರ ಕಲಿಯದಿದ್ದರೂ, ರಂಗಭೂಮಿ ಒಡನಾಟ ಅಕ್ಷರ, ಅರಿವು, ಆಶ್ರಯ ಎಲ್ಲವನ್ನೂ ನೀಡಿತು. ಅವರಿಗೆ ಪೌರಾಣಿಕ, ಆಧುನಿಕ ಸಾಹಿತ್ಯವನ್ನು ಅರಿಯುವಷ್ಟು ಶಕ್ತಿ ನೀಡಿತು.

ವೀರಣ್ಣನವರ ಶ್ರದ್ಧೆ, ಸರಳತೆ, ವಿನಯ ಹಾಗೂ ಕ್ರೀಯಾಶೀಲತೆ ಯುರೋಪ್, ಜರ್ಮನಿ, ಸ್ವಿಟ್ಜರ್ಲೆಂಡ್‌ ‌ಮುಂತಾದ ದೇಶಗಳಿಗೂ ಕರೆದೊಯ್ಯಿತು. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯರಾದ ವೀರಣ್ಣ ಇಳಿ ವಯಸ್ಸಿನಲ್ಲೂ ಚಟುವಟಿಕೆಯಿಂದ ಇರುತ್ತಿದ್ದರು.

ಶ್ರದ್ಧೆಯಿಂದ ಮಾತ್ರ ಕಲಾವಿದ ಬೆಳೆಯಲು- ಬೆಳಗಲು ಸಾಧ್ಯ ಎಂದು ನಂಬಿದ್ದ ಅವರು ತಮ್ಮ ಇಡೀ ಬದುಕನ್ನು ತೆರೆದ ಪುಸ್ತಕದಂತೆ ಇಟ್ಟು ಮರೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT