ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಪರಿಷತ್‌: ಸಂಘದ ಹಿನ್ನೆಲೆ, ಪಕ್ಷ ನಿಷ್ಠೆ, ಹಿಂದುಳಿದವರಿಗೆ ಅವಕಾಶ; ಬಿಜೆಪಿ

ವಿಧಾನಸಭೆಯಿಂದ ಪರಿಷತ್‌ಗೆ ಚುನಾವಣೆ
Published 24 ಮೇ 2024, 15:41 IST
Last Updated 24 ಮೇ 2024, 15:41 IST
ಅಕ್ಷರ ಗಾತ್ರ

ಬೆಂಗಳೂರು: ಈ ಬಾರಿ ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಸಂಘ ಪರಿವಾರದ ಹಿನ್ನೆಲೆ, ಪಕ್ಷ ನಿಷ್ಠೆ ಹೊಂದಿರುವವರಿಗೆ ಮತ್ತು ರಾಜಕೀಯವಾಗಿ ಹೆಚ್ಚು ಪ್ರಾತಿನಿಧ್ಯ ಸಿಗದ ಹಿಂದುಳಿದ ವರ್ಗದವರಿಗೆ ಆದ್ಯತೆ ನೀಡಲು ಬಿಜೆಪಿ ಚಿಂತನೆ ನಡೆಸಿದೆ.

11 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಯಿಂದ ಮೂವರಿಗೆ ಮಾತ್ರ ಅವಕಾಶ ಸಿಗಲಿದೆ. 40 ಮಂದಿ ಆಕಾಂಕ್ಷಿಗಳಿದ್ದಾರೆ. ಘಟಾನುಘಟಿ ನಾಯಕರು ಲಾಬಿ ನಡೆಸುತ್ತಿದ್ದರೂ ಈ ಬಾರಿ ಆಯ್ಕೆಯ ಮಾನದಂಡವೇ ಬೇರೆ ಆಗಿದೆ. ಆಯ್ಕೆ ಆದವರು ಪಕ್ಷಕ್ಕೆ ಹೆಚ್ಚಿನ ಶಕ್ತಿ ತುಂಬುವ ಮತ್ತು ತಮ್ಮ ಸಮುದಾಯಗಳಲ್ಲಿ ಪಕ್ಷದ ಪರ ಪರಿಣಾಮ ಬೀರುವ ಸಾಮರ್ಥ್ಯ ಹೊಂದಿರಬೇಕು ಎಂಬ ಚಿಂತನೆ ಪಕ್ಷದೊಳಗೆ ಬಲವಾಗುತ್ತಿದೆ ಎಂದು ಆ ಪಕ್ಷದ ಮೂಲಗಳು ಹೇಳಿವೆ.

ಈ ಹಿಂದಿನ ಹಲವರ ಆಯ್ಕೆಗಳು ಪಕ್ಷಕ್ಕೆ ಯಾವುದೇ ರೀತಿಯಲ್ಲಿ ಪ್ರಯೋಜನ ಆಗಲಿಲ್ಲ ಎಂಬುದು ಮನವರಿಕೆಯಾಗಿದೆ. ಇತರ ಪಕ್ಷಗಳಿಂದ ಬಂದವರಿಗೆ ಹಿಂದು–ಮುಂದು ನೋಡದೇ ಅವಕಾಶ ನೀಡಲಾಯಿತು. ಆದರೆ, ಅವರು ತಮ್ಮ ಅವಧಿ ಮುಗಿಯುತ್ತಿದ್ದಂತೆ ಗಂಟುಮೂಟೆ ಕಟ್ಟಿಕೊಂಡು ಕಾಂಗ್ರೆಸ್‌ಗೆ ಹೋದರು. ಇನ್ನು ಮುಂದೆ ಆ ರೀತಿ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ತೇಜಸ್ವಿನಿ ಮತ್ತು ಕೆ.ಪಿ.ನಂಜುಂಡಿ ಅವರನ್ನು ಉಲ್ಲೇಖಿಸಿ ಪಕ್ಷದಲ್ಲಿ ಚರ್ಚೆ ನಡೆಯಿತು ಎಂದು ಮೂಲಗಳು ತಿಳಿಸಿವೆ.

ಲೋಕಸಭಾ ಚುನಾವಣೆ ವೇಳೆಯಲ್ಲಿ ಟಿಕೆಟ್‌ ಸಿಗದೇ ಮುನಿಸಿಕೊಂಡವರಲ್ಲಿ ಕೆಲವರಿಗೆ ವಿಧಾನಪರಿಷತ್‌ನಲ್ಲಿ ಅವಕಾಶ ನೀಡಲಾಗುವುದು ಎಂದು ಭರವಸೆ ನೀಡಲಾಗಿತ್ತು. ಅಂತಹವರ ಪೈಕಿ ಜೆ.ಸಿ.ಮಾಧುಸ್ವಾಮಿ ಅವರಿಗೂ ಭರವಸೆ ನೀಡಲಾಗಿದೆ. ಅವರೂ ಕೂಡ ಪರಿಷತ್‌ ಪ್ರವೇಶಕ್ಕೆ ಆಕಾಂಕ್ಷಿಯಾಗಿದ್ದಾರೆ. ಆದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತವರಿಗೆ ಅವಕಾಶ ಕೊಡುವುದಿಲ್ಲ ಎಂಬ ನಿಯಮ ಅನುಸರಿಸಿದರೆ ಘಟಾನುಘಟಿಗಳಿಗೆ ಅವಕಾಶ ಸಿಗುವ ಸಾಧ್ಯತೆ ಇಲ್ಲ ಎಂದು ಮೂಲಗಳು ಹೇಳಿವೆ.

ಸದಸ್ಯತ್ವದ ಅವಧಿ ಮುಗಿಯಲಿರುವ ಸದಸ್ಯರ ಪೈಕಿ, ವಿರೋಧ ಪಕ್ಷದ ಮುಖ್ಯಸಚೇತಕರಾಗಿರುವ ಎನ್‌.ರವಿಕುಮಾರ್ ಅವರ ನಿರ್ವಹಣೆ ಬಗ್ಗೆ ಪಕ್ಷಕ್ಕೆ ತೃಪ್ತಿ ಇದೆ. ಸದನದ ಒಳಗೆ ಮತ್ತು ಹೊರಗೆ ಹೆಚ್ಚು ಸಕ್ರಿಯರಾಗಿರುವುದರಿಂದ ಅವರೊಬ್ಬರಿಗೆ ಮಾತ್ರ ಮತ್ತೊಮ್ಮೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚು ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT