ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮಣ್ಣ ಜೊತೆ ವೈಮನಸ್ಸು ಇಲ್ಲ: ವಿಜಯೇಂದ್ರ

Published 22 ಏಪ್ರಿಲ್ 2023, 15:21 IST
Last Updated 22 ಏಪ್ರಿಲ್ 2023, 15:21 IST
ಅಕ್ಷರ ಗಾತ್ರ

ಮೈಸೂರು: ‘ವರುಣ ಕ್ಷೇತ್ರದ ಪಕ್ಷದ ಅಭ್ಯರ್ಥಿ ವಿ.ಸೋಮಣ್ಣ ಪರ ‍ಪ್ರಚಾರ ನಡೆಸುವೆ. ಅವರೊಂದಿಗೆ ಯಾವುದೇ ವೈಮನಸ್ಸು ಇಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಅವರು, ‘ವರುಣದಲ್ಲಿ ಕಣಕ್ಕಿಳಿಯದಿರಲು ಯಡಿಯೂರಪ್ಪ– ಸಿದ್ದರಾಮಯ್ಯ ಜೊತೆ ಆಂತರಿಕ ಒಪ್ಪಂದ ಕಾರಣ ಎಂಬುದು ಸಲ್ಲ. ನನ್ನನ್ನು ರಾಜ್ಯಕ್ಕೆ ಪರಿಚಯ ಮಾಡಿಕೊಟ್ಟಿದ್ದು ಕ್ಷೇತ್ರದ ಕಾರ್ಯಕರ್ತರು. ಅವರ ಪ್ರೀತಿ– ವಿಶ್ವಾಸಕ್ಕೆ ಬೆಲೆ ಕಟ್ಟಲು ಆಗದು. ಮುಂದಿನ ದಿನಗಳಲ್ಲಿ ಅವರು ಹೆಮ್ಮೆ ಪಡುವಂತೆ ದುಡಿಯುತ್ತೇನೆ’ ಎಂದರು.

‘ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿಯೇ ನಿಲ್ಲಬೇಕು ಎಂಬುದು ಅಲ್ಲಿಯ ಕಾರ್ಯಕರ್ತರ ತೀರ್ಮಾನ. 30–40 ವರ್ಷದಿಂದ ಯಡಿಯೂರಪ್ಪ ಅವರಿಗೆ ಶಕ್ತಿ ನೀಡಿದ ತಾಲ್ಲೂಕು. ಅವರ ಅಭಿಪ್ರಾಯಕ್ಕೆ ಗೌರವ ನೀಡಿ ನನಗೇ ಟಿಕೆಟ್‌ ನೀಡಿದ್ದಾರೆ. ಶಿಕಾರಿಪುರವಷ್ಟೇ ಅಲ್ಲದೇ ರಾಜ್ಯದಾದ್ಯಂತ ಪ್ರಚಾರ ಕಾರ್ಯ ನಡೆಸಿರುವೆ. ಹಳೆ ಮೈಸೂರು ಭಾಗದಲ್ಲಿ ಪಕ್ಷವನ್ನು ಸಂಘಟನೆ ಬಲಪಡಿಸುವ ಗುರಿಯನ್ನೂ ವರಿಷ್ಠರು ನೀಡಿದ್ದಾರೆ’ ಎಂದು ಹೇಳಿದರು.

‘ಮುಖ್ಯಮಂತ್ರಿ ಸ್ಥಾನದಿಂದ ಇಳಿದ ಮೇಲೆಯೂ ಬಿ.ಎಸ್‌.ಯಡಿಯೂರಪ್ಪ ಅವರ ಜನಪ್ರಿಯತೆ ಇನ್ನಷ್ಟು ಹಿಗ್ಗಿದೆ. ಚುನಾವಣಾ ರಾಜಕಾರಣದಿಂದ ನಿವೃತ್ತಿಯಾಗಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ್ದಾರೆ. ಅವರಿಗೆ ರಾಜ್ಯಪಾಲರಾಗಬೇಕು, ಪುತ್ರನನ್ನು ಸಚಿವನನ್ನಾಗಿ ಮಾಡಬೇಕೆಂಬ ಆಸೆಯೇನೂ ಇಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನೋವು ತಂದಿದೆ: ‘ವೀರೇಂದ್ರ ಪಾಟೀಲರಿಗೆ ದ್ರೋಹ ಬಗೆದ, ವೀರಶೈವ– ಲಿಂಗಾಯತ ಸಮುದಾಯವನ್ನು ಧರ್ಮದ ಹೆಸರಿನಲ್ಲಿ ಒಡೆಯಲು ಮುಂದಾದ ಕಾಂಗ್ರೆಸ್‌ಗೆ ಹಿರಿಯರಾದ ಜಗದೀಶ್‌ ಶೆಟ್ಟರ್‌ ಸೇರ್ಪಡೆಯಾಗಿರುವುದು ನೋವು ತಂದಿದೆ. ಅವರು ಪಕ್ಷೇತರರಾಗಿ ನಿಂತಿದ್ದರೂ ಗೆಲ್ಲುತ್ತಿದ್ದರು. ಎಲ್ಲ ಸಮುದಾಯಗಳ ನಡುವೆ ಬೆಂಕಿ ಹಚ್ಚುವ ‍ಪಕ್ಷಕ್ಕೆ ಹೋಗಿರುವುದು ದುರಂತ’ ಎಂದು ವಿಜಯೇಂದ್ರ ಬೇಸರ ವ್ಯಕ್ತಪಡಿಸಿದರು.

‘ಕಾಂಗ್ರೆಸ್‌ ದೇಶದಲ್ಲೇ ದಿವಾಳಿಯಾಗಿದೆ. ಹೇಗಾದರೂ ಆಡಳಿತಕ್ಕೆ ಬಂದು ಪಕ್ಷಕ್ಕೆ ಎಟಿಎಂ ಆಗುವ ಹುನ್ನಾರ ನಡೆಸಿದೆ. ಅತಂತ್ರ ವಿಧಾನಸಭೆ ಸೃಷ್ಟಿಸುವ ಕನಸನ್ನು ಜೆಡಿಎಸ್‌ ಕಂಡಿದೆ. ಅದಕ್ಕೆ ಜನರು ಅವಕಾಶ ನೀಡುವುದಿಲ್ಲ. ರಾಜ್ಯದ ಪ್ರಜ್ಞಾವಂತ ಮತದಾರರು ಡಬಲ್ ಎಂಜಿನ್‌ ಸರ್ಕಾರವನ್ನು ಮತ್ತೆ ತರಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಬೆಲೆ ಏರಿಕೆಯು ತಾತ್ಕಾಲಿಕ ಸಮಸ್ಯೆಯಾಗಿದ್ದು, ಜನರು ಮನ್ನಣೆ ನೀಡುವುದಿಲ್ಲ. ನರೇಂದ್ರ ಮೋದಿ ಅವರ ದೂರದೃಷ್ಟಿ ಯೋಜನೆಗಳ ಮೇಲೆ ಜನರು ವಿಶ್ವಾಸ ಇಟ್ಟಿದ್ದಾರೆ. ವಿಶ್ವವೇ ಆರ್ಥಿಕ ಮುಗ್ಗಟ್ಟಿನಲ್ಲಿದ್ದರೂ ದೇಶವನ್ನು ಸಂಕಷ್ಟದಿಂದ ಪಾರು ಮಾಡಿದ್ದಾರೆ. ಅದಕ್ಕೆ ಕೋವಿಡ್‌ ನಿರ್ವಹಣೆಯೇ ಸಾಕ್ಷಿ’ ಎಂದು ಹೇಳಿದರು.

‘ಕಾರ್ಯಕರ್ತರೇ ಕಟ್ಟಿರುವ ಪಕ್ಷವಾಗಿದ್ದು, ಬೂತ್ ಮಟ್ಟದ ಕಾರ್ಯಕರ್ತರ ಅಭಿಪ್ರಾಯಗಳಿಗೆ ಮನ್ನಣೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಹೊಸಮುಖಗಳಿಗೆ ಅವಕಾಶ ನೀಡಿದ್ದಾರೆ. ಉತ್ತರ ಪ್ರದೇಶ, ಗುಜರಾತ್‌ನಲ್ಲೂ ಈ ಪ್ರಯೋಗ ನಡೆದಿತ್ತು. ರಾಜ್ಯದಲ್ಲೂ ಅದೇ ಫಲಿತಾಂಶ ಪುನರಾವರ್ತನೆಯಾಗಲಿದೆ’ ಎಂದರು.

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ರಾಜೇಂದ್ರ , ಮೇಯರ್ ಶಿವಕುಮಾರ್, ಕೆ.ಆರ್.ಕ್ಷೇತ್ರದ ಅಭ್ಯರ್ಥಿ ಟಿ.ಎಸ್‌.ಶ್ರೀವತ್ಸ, ಬಿಜೆಪಿ ಜಿಲ್ಲಾ ವಕ್ತಾರ ವಸಂತ್ ಕುಮಾರ್, ನಗರ ಘಟಕದ ಕಾರ್ಯಾಧ್ಯಕ್ಷ ಗಿರಿಧರ್, ನಗರ ವಕ್ತಾರ ಎಂ.ಎ.ಮೋಹನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT