ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ದರಾಮಯ್ಯ ಬೆಂಬಲಕ್ಕೆ ನಾವೆಲ್ಲ ಇದ್ದೇವೆ: ಮಲ್ಲಿಕಾರ್ಜುನ ಖರ್ಗೆ

Published : 27 ಸೆಪ್ಟೆಂಬರ್ 2024, 15:56 IST
Last Updated : 27 ಸೆಪ್ಟೆಂಬರ್ 2024, 15:56 IST
ಫಾಲೋ ಮಾಡಿ
Comments

ಬೆಂಗಳೂರು: ‘ಮುಡಾ ಹಗರಣ ಸಣ್ಣ ಪ್ರಕರಣ. ಆದರೆ, ಈ ಬಗ್ಗೆ ಪ್ರತಿನಿತ್ಯ ಚರ್ಚಿಸಲಾಗುತ್ತಿದೆ. ಸಿದ್ದರಾಮಯ್ಯ ಕಾಂಗ್ರೆಸ್‌ ಪಕ್ಷವನ್ನು ಪ್ರತಿನಿಧಿಸುತ್ತಾರೆ. ಅವರ ಬೆಂಬಲಕ್ಕೆ ನಾನೂ ಸೇರಿದಂತೆ ಹೈಕಮಾಂಡ್‌ ನಿಂತಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ‘ಎಫ್‌ಐಆರ್ ಆದ ಕೂಡಲೇ ಅವರು (ಸಿದ್ದರಾಮಯ್ಯ) ರಾಜೀನಾಮೆ ನೀಡಬೇಕು ಎನ್ನುವುದಾದರೆ, ಗೋಧ್ರಾ ನಂತರದ ಹತ್ಯಾಕಾಂಡದ ನೈತಿಕ ಹೊಣೆ ಹೊತ್ತು ಅಂದು ನರೇಂದ್ರ ಮೋದಿ ರಾಜೀನಾಮೆ ನೀಡಿದ್ದರಾ? ಅಮಿತ್ ಶಾ ಅವರ ಮೇಲೆ ಎಷ್ಟು ಪ್ರಕರಣ ದಾಖಲಾಗಿತ್ತು’ ಎಂದು ಪ್ರಶ್ನಿಸಿದರು.

‘ಯಾರನ್ನೇ ಆಗಲಿ ವೈಯಕ್ತಿಕವಾಗಿ ಗುರಿ ಮಾಡಬಾರದು. ಸಿದ್ದರಾಮಯ್ಯ ವರ್ಚಸ್ಸಿಗೆ ಕಳಂಕ ಹಚ್ಚುವ ಮೂಲಕ ಕಾಂಗ್ರೆಸ್‌ ಪಕ್ಷಕ್ಕೂ ಹಾನಿ ಮಾಡುವುದು ಬಿಜೆಪಿ ಉದ್ದೇಶ. ಯಾರೇ ಆದರೂ ಇಂದು ಇರಬಹುದು, ನಾಳೆ ಬದಲಾಗಬಹುದು. ಆದರೆ, ಪಕ್ಷ ಮುಂದುವರಿಯುತ್ತದೆ’ ಎಂದು ಖರ್ಗೆ ಹೇಳಿದರು.

‘ಕಾನೂನು ಅದರದೇ ಆದ ಕ್ರಮಗಳನ್ನು ಕೈಗೊಳ್ಳುತ್ತದೆ‌. ಪರಿಸ್ಥಿತಿ ಏನು ಬರುತ್ತದೆ ಎನ್ನುವುದರ ಮೇಲೆ ಪರಿಶೀಲನೆ ನಡೆಯಲಿದೆ. ಏನೂ ಇಲ್ಲದಿದ್ದರೂ ಮುಡಾ ಮುಡಾ ಎನ್ನುತ್ತಿದ್ದಾರೆ. ತನಿಖೆಯೇ ನಡೆದಿಲ್ಲ; ದೋಷಾರೋಪ ಪಟ್ಟಿ ಆಗಿಲ್ಲ; ಶಿಕ್ಷೆಯೂ ಆಗಿಲ್ಲ. ಹಾಗಿದ್ದರೂ ಹೋರಾಟ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ಎಫ್ಐಆರ್‌ ದಾಖಲಾದ ಮೇಲೆ ಅವರ ಪರ ಪಕ್ಷ ನಿಲ್ಲುತ್ತದೆಯೇ ಎಂಬುದು ಊಹಾತ್ಮಕ ಪ್ರಶ್ನೆ. ನಾವು ಅವರ ಜೊತೆ ನಿಂತಿದ್ದೇವೆ. ಅವರಿಗೆ ಬೆಂಬಲ ಕೊಟ್ಟಿದ್ದೇವೆ. ಯಾಕೆಂದರೆ ಅವರು ಪಕ್ಷವನ್ನು ಪ್ರತಿನಿಧಿಸುತ್ತಾರೆ; ಅವರು ಈಗ ಒಬ್ಬ ವ್ಯಕ್ತಿ ಮಾತ್ರ ಅಲ್ಲ’ ಎಂದರು.

‘ಪ್ರಧಾನಿ ನರೇಂದ್ರ ಮೋದಿ‌ ದಲಿತ ನಾಯಕರು ಹಾಗೂ ದಲಿತರ ನಿಧಿಯ ಬಗ್ಗೆ ಹರಿಯಾಣದಲ್ಲಿ ಮಾತನಾಡಿದ್ದಾರೆ. ಅವರಿಗೆ ಅಲ್ಲೇ ಉತ್ತರ ಕೊಡುತ್ತೇನೆ’ ಎಂದು ಹೇಳಿದರು.

ಮುಡಾ: ಸಿಬಿಐ ತನಿಖೆಗೆ ಕೋರಿ ರಿಟ್‌

ಬೆಂಗಳೂರು: ‘ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧದ ತನಿಖೆಯನ್ನು ಸಿಬಿಐಗೆ ವಹಿಸಬೇಕು’ ಎಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಮೈಸೂರಿನ ಸ್ನೇಹಮಯಿ ಕೃಷ್ಣ ಶುಕ್ರವಾರ ದಾಖಲಿಸಿರುವ ಈ ರಿಟ್‌ ಅರ್ಜಿ ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ. ಅರ್ಜಿಯಲ್ಲಿ ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ರಾಜ್ಯ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಿಬಿಐ ನಿರ್ದೇಶಕ ಮೈಸೂರು ಜಿಲ್ಲಾ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ರಾಜ್ಯ ಡಿಜಿ–ಐಜಿಪಿ ಲೋಕಾಯುಕ್ತ ಎಡಿಜಿಪಿ ವಿಜಯನಗರ ಪೊಲೀಸ್‌ ಠಾಣಾಧಿಕಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿ.ಎಂ.ಪಾರ್ವತಿ ಮಲ್ಲಿಕಾರ್ಜುನ ಸ್ವಾಮಿ ಮತ್ತು ಜೆ.ದೇವರಾಜು ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT