ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯವನ್ನು ಮಂಗಳೂರು ಮಾಡಲು ಬಿಡಲ್ಲ: ಎಚ್‌ಡಿಕೆ ವಿರುದ್ಧ ಚಲುವರಾಯಸ್ವಾಮಿ ಕಿಡಿ

Published : 2 ಫೆಬ್ರುವರಿ 2024, 7:30 IST
Last Updated : 2 ಫೆಬ್ರುವರಿ 2024, 7:30 IST
ಫಾಲೋ ಮಾಡಿ
Comments

ಮೈಸೂರು: ‘ಜೆಡಿಎಸ್‌–ಬಿಜೆಪಿಯವರು ಮಂಡ್ಯವನ್ನು ಮತ್ತೊಂದು ಮಂಗಳೂರು ಮಾಡುವುದಕ್ಕೆ ಬಿಡುವುದಿಲ್ಲ’ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಗುಡುಗಿದರು.

ಇಲ್ಲಿ ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಎಚ್‌.ಡಿ. ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್‌ನವರು ಹಾಗೂ ಬಿಜೆಪಿಯವರು ಮಂಡ್ಯದಲ್ಲಿ ಯಾವ ಪುರುಷಾರ್ಥಕ್ಕೆ ಹೋರಾಟ ಅಥವಾ ಬಂದ್ ಮಾಡುತ್ತಿದ್ದಾರೆ. ಧ್ವಜದ ವಿಚಾರದಲ್ಲಿ ಕರೆ ಕೊಟ್ಟಿರುವ ಮಂಡ್ಯ ಬಂದ್‌ಗೆ ಜನರೇ ತಿರುಗಿ ಬಿದ್ದಿದ್ದಾರೆ’ ಎಂದರು.

ಕುಮಾರಸ್ವಾಮಿ ವಿರುದ್ಧ ಕೆಂಡಮಂಡಲವಾದ ಸಚಿವರು, ‘ವಿನಯದ ಬಗ್ಗೆ ನಾನು ಅವರಿಂದ ಕಲಿಯಬೇಕಿಲ್ಲ. ಅವರಿಂದ ನಾಯಕನಾದವನಲ್ಲ ನಾನು. ಎಚ್‌.ಡಿ. ದೇವೇಗೌಡರ ಮೇಲಿನ ಗೌರವದಿಂದಾಗಿ ಸುಮ್ಮನಿದ್ದೇನೆ. ಇಲ್ಲದಿದ್ದರೆ ದೊಡ್ಡ ಪ್ರಮಾಣದಲ್ಲೇ ಉತ್ತರ ಕೊಡುತ್ತಿದ್ದೆ. ಗೌರವ ಬೇಡ ಎಂದಾದರೆ, ಬೇರೆ ರೀತಿಯಲ್ಲೇ ಮಾತನಾಡುತ್ತೇನೆ’ ಎಂದು ಹೇಳಿದರು.

‘ನಾನೇನು ಕುಮಾರಸ್ವಾಮಿ ಮನೆಯ ಋಣದಲ್ಲಿದ್ದೇನೆಯೇ, ಅವರ ಆಸ್ತಿ ತಿಂದಿದ್ದೇನೆಯೇ?’ ಎಂದು ಕೇಳಿದ ಅವರು, ‘ಅವರೇನು ನನ್ನ ಹಣೆಬರಹ ಬರೆಯಲಾಗುತ್ತದೆಯೇ’ ಎಂದು ಪ್ರಶ್ನಿಸಿದರು.

‘ರಾಮಕೃಷ್ಣ ಹೆಗಡೆ, ಜೆ.ಎಚ್. ಪಟೇಲ್, ಭೈರೇಗೌಡ ಅವರನ್ನು ಜೆಡಿಎಸ್‌ನಿಂದ ಹೊರ ಕಳುಹಿಸಿದ್ದು ಯಾರೆಂದು ಕುಮಾರಸ್ವಾಮಿ ಹೇಳಲಿ’ ಎಂದು ಸವಾಲೆಸೆದರು.

‘ಮಂಡ್ಯದ ಜನರು ಇವರಿಗೆ ಕೊಟ್ಟ ಗೌರವಕ್ಕೆ ಪ್ರತಿಯಾಗಿ ಅಶಾಂತಿ, ಗಲಭೆಯನ್ನು ವಾಪಸ್ ಕೊಡುತ್ತಿದ್ದಾರಾ?’ ಎಂದರು.

ಮಂಡ್ಯದ ಅಭಿವೃದ್ಧಿ ಬಗ್ಗೆ ಚರ್ಚೆಗೆ ಬರಲೆಂಬ ಜೆಡಿಎಸ್‌ ಆಹ್ವಾನದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ‘ನಾಚಿಕೆ ಆಗಬೇಕು ಅವರಿಗೆ. ಒಂದು ಅಂಗನವಾಡಿ ಕಟ್ಟಡ ಕಟ್ಟಲೂ ಆಗದವರು ಏನು ಚರ್ಚಿಸುತ್ತಾರೆ? ಅವರದ್ದು ಕೇವಲ ಹಿಟ್ ಅಂಡ್ ರನ್ ಕೇಸ್. ಚರ್ಚೆ ಮಾಡುವುದಿದ್ದರೆ ಮಂಡ್ಯಕ್ಕೆ ಬರಲಿ ಅಥವಾ ವಿಧಾನಮಂಡಲ ಅಧಿವೇಶನದಲ್ಲೇ ನಡೆಸಲು ಸಿದ್ಧವಿದ್ದೇನೆ. ಮಂಡ್ಯಕ್ಕೆ ಅವರ ಕೊಡುಗೆ ಶೂನ್ಯ. ಅಭಿವೃದ್ಧಿ ಮಾಡಿದ್ದರೆ ಆ ಪಕ್ಷದವರು ಸೋಲುತ್ತಿದ್ದರೇಕೆ?’ ಎಂದು ಕೇಳಿದರು.

‘ರೈತರಿಗಾಗಿ, ಕಾವೇರಿ ನೀರಿಗಾಗಿ ಹೋರಾಟ ಅಥವಾ ಬಂದ್ ಮಾಡಿದರೆ ನಾವೂ ಬೆಂಬಲಿಸುತ್ತೇವೆ. ಆದರೆ, ಧ್ವಜದ ವಿಚಾರದಲ್ಲಿ ಬಂದ್‌ಗೆ ಕರೆ ನೀಡಿರುವುದಕ್ಕೆ ಬಿಜೆಪಿ–ಜೆಡಿಎಸ್‌ನವರಿಗೆ ನಾಚಿಕೆಯಾಗಬೇಕು. ರಾಷ್ಟ್ರಧ್ವಜ ತೆಗೆಯಿರಿ ಎನ್ನುವುದು ಅವರ ಹೋರಾಟವೇ?’ ಎಂದು ಕೇಳಿದರು.

‘ಹಿಂದುತ್ವ ಎಂಬುದು ಅವರಿಗಿಂತ ನಮಲ್ಲೇ ಜಾಸ್ತಿ ಇದೆ. ಯಾರೋ ಪುಟ್ಟರಾಜನೋ ಬೊಮ್ಮಪ್ಪನಿಂದಲೋ ಪತ್ರಿಕಾಗೋಷ್ಠಿ ಮಾಡಿಸುತ್ತಾ ಹೋದರೆ ಜನರು ಪಾಠ ಕಲಿಸುತ್ತಾರೆ’ ಎಂದು ಕುಮಾರಸ್ವಾಮಿ ವಿರುದ್ಧ ಗುಡುಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT