ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಏನು ಮಾಡಿದ್ದಾರೆ: ಪ್ರತಾಪ ಸಿಂಹ ಪ್ರಶ್ನೆ

Published 29 ಜನವರಿ 2024, 8:27 IST
Last Updated 29 ಜನವರಿ 2024, 8:27 IST
ಅಕ್ಷರ ಗಾತ್ರ

ಮಡಿಕೇರಿ: ‘ಕಳೆದ 7 ತಿಂಗಳುಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಡಗು ಜಿಲ್ಲೆಗೆ ಮಾಡಿರುವು ದಾದರೂ ಏನು’ ಎಂದು ಸಂಸದ ಪ್ರತಾಪಸಿಂಹ ಪ್ರಶ್ನಿಸಿದರು.

ಇಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿದ ಅವರು, ‘14 ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರಿಗೆ ಸುಳ್ಳು ಹೇಳಲು ಏನೂ ಅನ್ನಿಸುವುದಿಲ್ಲವೇ’ ಎಂದು ಹೇಳುವ ಮೂಲಕ ತೀವ್ರ ವಾಗ್ದಾಳಿ ನಡೆಸಿದರು.

ಬಿಜೆಪಿ ಸರ್ಕಾರವಿದ್ದಾಗ ಜಾರಿಗೆ ತಂದಿದ್ದ ಯೋಜನೆಗಳನ್ನು ಈಗ ಉದ್ಘಾಟಿಸಿ ಬಿಜೆಪಿಯ ಎಂ.ಪಿ.ಅಪ್ಪಚ್ಚುರಂಜನ್, ಕೆ.ಜಿ.ಬೋಪಯ್ಯ ಹಾಗೂ ಪ್ರತಾಪಸಿಂಹ ಕೊಡಗಿಗೆ ಏನೂ ಮಾಡಿಲ್ಲ ಎಂದು ಹೇಳಿರುವುದು ಸರಿಯಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ನೂತನ ಕಟ್ಟಡವನ್ನು ನಿರ್ಮಿಸಿದ್ದು ಬಿಜೆಪಿ ಸರ್ಕಾರ. ಅದನ್ನು ಉದ್ಘಾಟಿಸಿ ಏನೂ ಮಾಡಿಲ್ಲ ಎಂದು ಹೇಳುವುದಕ್ಕಾದರೂ ಅವರಿಗೆ ಮನಸ್ಸಾದರೂ ಹೇಗೆ ಬಂತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಮೃತ್ 1 ಮತ್ತು 2ರಲ್ಲಿ 2023ರ ಜನವರಿ ಮತ್ತು ಫೆಬ್ರುವರಿಯಲ್ಲೇ ಮಂಜೂರಾತಿ ದೊರೆತಿದೆ. ಅದಕ್ಕೆ ಈಗ ಭೂಮಿಪೂಜೆ ನೆರವೇರಿಸಿ ಅದರ ಶ್ರೇಯ ಪಡೆಯಲು ಕಾಂಗ್ರೆಸ್ ಹೊರಟಿದೆ ಎಂದು ಅವರು ಆರೋಪಿಸಿದರು.

ಬರ ಪರಿಹಾರ ಹಣವನ್ನು ಪ್ರತಾಪಸಿಂಹ ಕೊಡಿಸಲಿಲ್ಲ ಎಂದು ಸಿದ್ದರಾಮಯ್ಯ ದೂರುತ್ತಾರೆ. ಆದರೆ, ಕೇಂದ್ರ ಸರ್ಕಾರ ಇದುವರೆಗೂ ದೇಶದಲ್ಲಿರುವ ಯಾವುದೇ ರಾಜ್ಯಕ್ಕೂ ಬರ ಪರಿಹಾರ ಹಣ ಬಿಡುಗಡೆ ಮಾಡಿಲ್ಲ. ಹಿಂದೆ ಇದ್ದ ಬಸವರಾಜ ಬೊಮ್ಮಾಯಿಯಂತಹ ಅಂತಃಕರಣ ಇರುವ ಮುಖ್ಯಮಂತ್ರಿಗಳು ರಾಜ್ಯ ಸರ್ಕಾರದಿಂದಲೇ ಹಣ ಬಿಡುಗಡೆ ಮಾಡಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ನಂತರ ತೆಗೆದುಕೊಳ್ಳುತ್ತಿದ್ದರು. ಆದರೆ, ಸಿದ್ದರಾಮಯ್ಯ ಕೇವಲ ₹ 105 ಕೋಟಿ ಬಿಡುಗಡೆ ಮಾಡಿದ್ದಾರೆ ಎಂದರು.

‘ಪ್ರತಾಪಸಿಂಹ ಕೊಡಗಿಗೆ ಏನೂ ತಂದಿಲ್ಲ ಎಂದು ಸಿದ್ದರಾಮಯ್ಯ ಸುಳ್ಳು ಹೇಳಿದ್ದಾರೆ. ಕುಶಾಲನಗರಕ್ಕೆ ಚತುಷ್ಪಥ ರಸ್ತೆಗಾಗಿ ₹ 4,130 ಕೋಟಿ ಮೊತ್ತದ ಯೋಜನೆಯನ್ನು ಜಾರಿಗೆ ತಂದಿದ್ದು, 15 ತಿಂಗಳಲ್ಲಿ ಲೋಕಾರ್ಪಣೆ ಮಾಡಲಿದ್ದೇನೆ. 65 ಮೊಬೈಲ್ ಟವರ್‌ಗಳನ್ನು ತಂದಿರುವೆ. ರಾಷ್ಟ್ರೀಯ ಹೆದ್ದಾರಿಯ ತಡೆಗೋಡೆಗಾಗಿ ₹ 100 ಕೋಟಿ ತಂದಿರುವೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮಂಜೂರು ಮಾಡಿಸಿರುವೆ. ಇಷ್ಟೆಲ್ಲ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವುದರಿಂದಲೇ ಜನರು ನನ್ನನ್ನು ಎರಡೂ ಬಾರಿ ಗೆಲ್ಲಿಸಿದ್ದಾರೆ’ ಎಂದು ತಮ್ಮ ಸಾಧನೆಗಳನ್ನು ಪ್ರಸ್ತಾಪಿಸಿದರು.

ಜತೆಗೆ, ಸಿದ್ದರಾಮಯ್ಯ ಸಂಚರಿಸುವ ಮೈಸೂರು– ಬೆಂಗಳೂರು ರಸ್ತೆಯನ್ನು ಕೇಂದ್ರ ಸರ್ಕಾರದಿಂದ ಮಾಡಿಸಿರುವುದು ಇದೇ ಪ್ರತಾಪಸಿಂಹ ಎಂಬುದನ್ನು ಅವರು ಮರೆಯಬಾರದು ಎಂದೂ ಹೇಳಿದರು.

‘ಕೊಡಗಿನಲ್ಲಿ ನಡೆಯುವ ಕೌಟುಂಬಿಕ ಹಾಕಿ ಪಂದ್ಯಾವಳಿಗಳಿಗೆ ಹಣ ಕೊ‌ಟಿದ್ದು ಬಿಜೆಪಿ ಸರ್ಕಾರ. ಕಾಂಗ್ರೆಸ್ ಸರ್ಕಾರ ಬಂದಾಗ ಈ ಪರಿಪಾಠವನ್ನು ನಿಲ್ಲಿಸಿತು. ಆಗ ನಾನೇ ಸಂಸದರ ನಿಧಿಯಿಂದ ಹಣ ನೀಡಿದೆ. ಮತ್ತೆ ಬಿಜೆಪಿ ಸರ್ಕಾರ ಬಂದಾಗ ಅದನ್ನು ಮುಂದುವರೆಸಿದವು’ ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಬಿಜೆಪಿ ವಕ್ತಾರರಾದ ಸುಬ್ರಹ್ಮಣ್ಯ ಉಪಾಧ್ಯಾಯ, ಮಹೇಶ್ ಜೈನಿ, ಮುಖಂಡ ರವೀಂದ್ರ ಭಾಗವಹಿಸಿದ್ದರು.

‘ಮಂತರ್‌ಗೌಡರನ್ನು ನೋಡಿ ಪೊನ್ನಣ್ಣ ಕಲಿಯಲಿ’

ಶಾಸಕ ಡಾ.ಮಂತರ್‌ಗೌಡ ಅವರನ್ನು ನೋಡಿ ಶಾಸಕ ಎ.ಎಸ್.ಪೊನ್ನಣ್ಣ ಕಲಿಯಬೇಕು. ಅವರು ತಮ್ಮದಲ್ಲದ ಕಾರ್ಯದ ಶ್ರೇಯ ಪಡೆಯಲು ಹೋಗುವುದಿಲ್ಲ. ಮುಕ್ತವಾಗಿ ಇದು ಹಿಂದಿನ ಸರ್ಕಾರ ಕೆಲಸ ಎಂದು ಹೇಳುತ್ತಾರೆ. ಆದರೆ, ಎ.ಎಸ್.ಪೊನ್ನಣ್ಣ ಹಿಂದಿನ ಬಿಜೆಪಿ ಸರ್ಕಾರದ ಸಾಧನೆಯನ್ನು ತಮ್ಮ ಕೆಲಸ ಎಂದು ಹೇಳಿಕೊಳ್ಳುತ್ತಾರೆ ಎಂದು ಟೀಕಿಸಿದರು.

ಆನೆ ದಾಳಿ ಮಾಡಿದಾಗ ಪೊನ್ನಣ್ಣ ಅವರು ತಮ್ಮ ದೂತನನ್ನು ಕಳುಹಿಸುವಂತಹ ಸಣ್ಣ ರಾಜಕಾರಣ ಮಾಡಬಾರದು. ಪೊನ್ನಣ್ಣ ಮುಖ್ಯಮಂತ್ರಿಗೆ ಕಾನೂನು ಸಲಹೆಗಾರರಾಗಿದ್ದರೂ, ಕಾವೇರಿ ವಿಷಯದಲ್ಲಿ ರಾಜ್ಯದ ಪರ ಒಂದೂ ತೀರ್ಪೂ ಬರಲಿಲ್ಲ ಏಕೆ ಎಂದೂ ಪ್ರಶ್ನಿಸಿದರು.

ವೈಯಕ್ತಿಕ , ಏಕವಚನದ ಟೀಕೆ ಬೇಡ

ಬಿಜೆಪಿ ಮುಖಂಡ ಕೆ.ಜಿ.ಬೋಪಯ್ಯ ಮಾತನಾಡಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೈಯಕ್ತಿಕವಾದ ಹಾಗೂ ಏಕವಚನದ ಟೀಕೆಗಳನ್ನು ಮಾಡಬಾರದು. ನಮಗೂ ಆ ರೀತಿ ಮಾತನಾಡಲು ಬರುತ್ತದೆ. ಆದರೆ, ಅದು ನಮ್ಮ ಸಂಸ್ಕೃತಿ ಅಲ್ಲ. ನಿಮಗೆ ಗೌರವ ಕೊಟ್ಟು ಹೇಳುತ್ತಿದ್ದೇವೆ. ಮತ್ತೆ ಇಂತಹ ಟೀಕೆಗಳನ್ನು ಮಾಡದಿರಿ’ ಎಂದು ಹೇಳಿದರು.

‘ಜಮ್ಮಾಬಾಣೆ ವಿಷಯದಲ್ಲಿ ನಮ್ಮ ಜೊತೆ ಎ.ಕೆ.ಸುಬ್ಬಯ್ಯ ಅವರೂ ಕೈಜೋಡಿಸಿದ್ದರು. ಅದನ್ನು ನಾವು ಇಂದಿಗೂ ಮುಕ್ತವಾಗಿ ಶ್ಲಾಘಿಸುತ್ತೇವೆ’ ಎಂದರು. ‘ವೈದ್ಯಕೀಯ ಕಾಲೇಜು, ಲೋಕೋಪಯೋಗಿ ರಸ್ತೆಗಳು, ಮಿನಿ ವಿಧಾನಸೌಧ, ಕುಟ್ಟ, ಬಾಳೆಲೆ, ನಿಟ್ಟೂರು ಭಾಗದಲ್ಲಿ ರೈಲ್ವೆ ಬ್ಯಾರಿಕೇಡ್‌ಗಳು, ಎಸ್‌.ಪಿ ಕಚೇರಿ... ಹೀಗೆ ಹಲವು ಕೆಲಸಗಳನ್ನು ನಾವು ಮಾಡಿದ್ದೇವೆ’ ಎಂದು ತಿಳಿಸಿದರು.

ಸಿದ್ದರಾಮಯ್ಯ 2013ರಲ್ಲಿ ಮುಖ್ಯಮಂತ್ರಿಯಾದಾಗಲೂ ಬರ ಬಂದಿತ್ತು. ಈಗಲೂ ಅವರು ಮುಖ್ಯಮಂತ್ರಿಯಾದಾಗ ಬರ ಬಂದಿದೆ. ಜೊತೆಗೆ, ನಾವು ಮಾಡಿರುವ ಯೋಜನೆಗಳನ್ನು ಉದ್ಘಾಟಿಸುವ ಭಾಗ್ಯವೂ ಅವರಿಗೆ ದೊರೆತಿದೆ ಎಂದರು. ಕಾಂಗ್ರೆಸ್‌ನವರು ಎಲ್ಲ ಭರವಸೆಗಳನ್ನೂ ಸಮರ್ಪಕವಾಗಿ ಈಡೇರಿಸಿದ್ದರೆ ಇಂದಿಗೂ ಜನಸಾಮಾನ್ಯರು ರಾಶಿ ರಾಶಿ ಸಮಸ್ಯೆಗಳನ್ನು ಹೊತ್ತು ಬರುವುದಾದರೂ ಏಕೆ ಎಂದೂ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT