ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಳಿ ಶಿಲೀಂಧ್ರ ಸೋಂಕಿನಿಂದ ಶ್ವಾಸಕೋಶಕ್ಕೆ ಹಾನಿ: ವೈದ್ಯರ ಕಳವಳ

ರಾಜ್ಯದಲ್ಲಿಯೂ ಕಾಣಿಸಿಕೊಂಡಿರುವ ಸೋಂಕು
Published : 22 ಮೇ 2021, 19:31 IST
ಫಾಲೋ ಮಾಡಿ
Comments

ಬೆಂಗಳೂರು: ಕೋವಿಡ್ ಕಾಯಿಲೆ ಜಯಿಸಿದ ಕೆಲವರಿಗೆ ಕಪ್ಪು ಶಿಲೀಂಧ್ರ ಸೋಂಕಿನ (ಮ್ಯುಕರ್‌ ಮೈಕೋಸಿಸ್‌-‌ಬ್ಯ್ಲಾಕ್ ಫಂಗಸ್‌) ಜತೆಗೆ ಅಪರೂಪವಾಗಿ ಕಾಣಿಸಿಕೊಳ್ಳುತ್ತಿದ್ದ ಬಿಳಿ ಶಿಲೀಂಧ್ರ ಸೋಂಕು (ವೈಟ್‌ ಫಂಗಸ್ ಅಥವಾ ಕ್ಯಾಂಡಿಡಾ) ಕೂಡ ಅಪಾಯವನ್ನು ತಂದೊಡ್ಡುವ ಬಗ್ಗೆ ವೈದ್ಯಕೀಯ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಬಿಹಾರದ ಪಟ್ನಾದಲ್ಲಿ ಕೋವಿಡ್‌ನಿಂದ ಚೇತರಿಸಿಕೊಂಡವರಲ್ಲಿ ಬಿಳಿ ಶಿಲೀಂಧ್ರ ಸೋಂಕು ಕಾಣಿಸಿಕೊಂಡಿದೆ. ಕೋವಿಡ್‌ ಕಾಣಿಸಿಕೊಳ್ಳುವ ಪೂರ್ವದಲ್ಲಿಯೂ ಕ್ಯಾನ್ಸರ್‌ ಪೀಡಿತರು, ಎಚ್‌ಐವಿ ಸೋಂಕಿತರು, ಅನಿಯಂತ್ರಿತ ಮಧುಮೇಹ ಹೊಂದಿರುವವರು, ಸ್ಟೀರಾಯಿಡ್‌ ಥೆರಪಿಗೆ ಒಳಗಾದವರಲ್ಲಿ ಹೆಚ್ಚಾಗಿ ಇದು ಕಾಣಿಸಿಕೊಳ್ಳುತ್ತಿತ್ತು. ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಬಾಯಿ, ಚರ್ಮ, ಉದರ, ಜನನಾಂಗಗಳು ಶ್ವಾಸಕೋಶ ಸೇರಿದಂತೆ ವಿವಿಧ ಭಾಗಗಳಲ್ಲಿ ಕಾಣಿಸಿಕೊಳ್ಳುವ ಇದು, ಕಪ್ಪು ಶಿಲೀಂಧ್ರದಷ್ಟು ತೀವ್ರತೆ ಹೊಂದಿರುವುದಿಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.

ವೈದ್ಯಕೀಯ ವಿಶ್ಲೇಷಣೆ ಅಗತ್ಯ: ರಾಜ್ಯದಲ್ಲಿ ‌ಈವರೆಗೂ ಕೋವಿಡ್‌ ಜಯಿಸಿದವರಿಗೆ ಶಿಲೀಂಧ್ರ ಸೋಂಕು ಕಾಣಿಸಿಕೊಂಡ ಬಗ್ಗೆ ಅಧಿಕೃತವಾಗಿ ಪ್ರಕರಣಗಳು ದೃಢಪಟ್ಟಿಲ್ಲ. ಆದರೆ, ಈ ವರ್ಷ ಕೂಡ ಕೆಲವರು ಬಿಳಿ ಶಿಲೀಂಧ್ರ ಸೋಂಕಿಗೆ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಅವರಿಗೆ ಅರಿವಿಲ್ಲದೆಯೇ ಕೊರೊನಾ ಸೋಂಕು ಬಂದು ಹೋಗಿತ್ತೇ ಎನ್ನುವುದರ ಬಗ್ಗೆ ವೈದ್ಯಕೀಯ ವಿಶ್ಲೇಷಣೆ ನಡೆಸಿದ ಬಳಿಕವಷ್ಟೇ ಸ್ಪಷ್ಟತೆ ದೊರೆಯಲಿದೆ ಎಂದು ವೈದ್ಯರು ಹೇಳಿದ್ದಾರೆ.

‘ಕಪ್ಪು ಶಿಲೀಂಧ್ರ ಸೋಂಕಿಗೆ ಹೋಲಿಸಿದಲ್ಲಿ ಬಿಳಿ ಶಿಲೀಂಧ್ರ ಸೋಂಕು ತೀವ್ರತೆ ಕಡಿಮೆ ಇರುತ್ತದೆ. ಇದು ಹೆಚ್ಚಾಗಿ ಮೂಗಿನಲ್ಲಿ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಚಿಕಿತ್ಸೆ ಒದಗಿಸುವುದು ಕೂಡ ಸುಲಭ. ಸೋಂಕಿಗೆ ಒಳಗಾದವರು ಬೇಗ ಚೇತರಿಸಿಕೊಳ್ಳುತ್ತಾರೆ. ಇದಕ್ಕೆ ಶಸ್ತ್ರಚಿಕಿತ್ಸೆ ಅಗತ್ಯವಿಲ್ಲ. ಎರಡು ವಾರಗಳ ಹಿಂದೆ ಇಬ್ಬರಲ್ಲಿ ಬಿಳಿ ಶಿಲೀಂಧ್ರ ಸೋಂಕು ಕಾಣಿಸಿಕೊಂಡಿತ್ತು. ದ್ರಾವಣ ರೂಪದ ಔಷಧದಲ್ಲಿ ಬಾಯಿಯನ್ನು ಸ್ವಚ್ಛಗೊಳಿಸಲು ಸೂಚಿಸಲಾಗುತ್ತದೆ’ ಎಂದು ಪೀಪಲ್ ಟ್ರೀ ಆಸ್ಪತ್ರೆಯ ಇಎನ್‌ಟಿ ಶಸ್ತ್ರಚಿಕಿತ್ಸಕ ಡಾ. ರವಿ ಸಚ್ಚಿದಾನಂದ ತಿಳಿಸಿದರು.

‘ಅಂಗಾಂಗ ಕಸಿಗೆ ಒಳಗಾದವರು, ದೀರ್ಘಕಾಲಿನ ಕಾಯಿಲೆ ಎದುರಿಸುತ್ತಿರುವವರು, ಸ್ಟೀರಾಯಿಡ್‌ ಪಡೆದುಕೊಳ್ಳುತ್ತಿರುವವರಲ್ಲಿ ಹೆಚ್ಚಾಗಿ ಬಿಳಿ ಶಿಲೀಂಧ್ರ ಸೋಂಕು ಕಾಣಿಸಿಕೊಳ್ಳುತ್ತದೆ. ಸ್ಟೀರಾಯಿಡ್‌ ಬಳಕೆಯನ್ನು ಕಡಿಮೆ ಮಾಡಬೇಕು. ಮಧುಮೇಹ ನಿಯಂತ್ರಣದಲ್ಲಿ ಇರುವಂತೆ ನೋಡಿಕೊಳ್ಳಬೇಕು. ರೋಗನಿರೋಧಕ ಶಕ್ತಿ ವೃದ್ಧಿಗೆ ಉತ್ತಮ ಪೌಷ್ಟಿಕ ಆಹಾರ ಸೇವಿಸಬೇಕು’ ಎಂದು ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಕ್ರಿಟಿಕಲ್ ಕೇರ್ ವಿಭಾಗದ ಹಿರಿಯ ಸಲಹೆಗಾರ ಡಾ. ಪ್ರದೀಪ್ ರಂಗಪ್ಪ ಹೇಳಿದರು.

‘ಶ್ವಾಸಕೋಶದಲ್ಲಿ ಗೂಡು ಕಟ್ಟುವ ಸೋಂಕು’

‘ಕೋವಿಡ್‌ ಸಂದರ್ಭದಲ್ಲಿ ಸ್ಟೀರಾಯಿಡ್‌ಗಳನ್ನು ಹೆಚ್ಚಾಗಿ ಬಳಸುತ್ತಿರುವ ಕಾರಣ ಶಿಲೀಂಧ್ರ ಸೋಂಕು ಕಾಣಿಸಿಕೊಳ್ಳುತ್ತಿದೆ. ಬಿಳಿ ಶಿಲೀಂಧ್ರವು ಶ್ವಾಸಕೋಶ ಹಾನಿಯಾದ ಜಾಗದಲ್ಲಿ ಗೂಡು ಮಾಡಿಕೊಳ್ಳುತ್ತದೆ. ರೋಗನಿರೋಧಕ ಶಕ್ತಿ ಕಡಿಮೆ ಆದ ಬಳಿಕ ಅದು ರಕ್ತದ ಮೂಲಕ ವಿವಿಧ ಅಂಗಗಳಿಗೆ ಹರಡಿಕೊಳ್ಳುತ್ತದೆ. ಇದರ ಲಕ್ಷಣಗಳು ಪ್ರಾರಂಭಿಕ ಹಂತದಲ್ಲಿ ಬಹಿರಂಗವಾಗಿ ಗೋಚರಿಸುವುದಿಲ್ಲ’ ಎಂದು ಪೀಪಲ್ ಟ್ರೀ ಆಸ್ಪತ್ರೆಯ ಶ್ವಾಸಕೋಶ ತಜ್ಞ ಡಾ. ವಿವೇಕ್ ಜಿ. ತಿಳಿಸಿದರು.

‘ಲಕ್ಷಣಗಳು ಉಲ್ಭಣವಾದ ಬಳಿಕ ಕೆಮ್ಮಿದಾಗ ರಕ್ತ ಹೊರಹೊಮ್ಮುವುದು ಸೇರಿದಂತೆ ವಿವಿಧ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಎಕ್ಸ್‌–ರೇ, ಸಿ.ಟಿ. ಸ್ಕ್ಯಾನ್ ಮೂಲಕ ಪತ್ತೆ ಮಾಡಬೇಕಾಗುತ್ತದೆ’ ಎಂದು ವಿವರಿಸಿದರು.

ಶಿಲೀಂಧ್ರ ಸೋಂಕಿನ ಪ್ರಮುಖ ಲಕ್ಷಣಗಳು

ಕಪ್ಪು ಶಿಲೀಂಧ್ರ ಸೋಂಕು: ಅತಿಯಾದ ತಲೆನೋವು, ಕಣ್ಣು ನೋವು, ಕಣ್ಣು ಕೆಂಪಾಗುವುದು, ಕಿವಿಯ ಹಿಂದೆ ಊತ, ಕಣ್ಣು ಗುಡ್ಡೆ ಮುಂದೆ ಬರುವುದು, ಕಣ್ಣಿನ ಸುತ್ತಲಿನ ಭಾಗದಲ್ಲಿ ನೋವು, ಚರ್ಮ ಕಪ್ಪಾಗುವಿಕೆ

ಬಿಳಿ ಶಿಲೀಂಧ್ರ ಸೋಂಕು: ಕೆಮ್ಮು, ಜ್ವರ, ಅತಿಸಾರ, ಶ್ವಾಸಕೋಶ ಸಮಸ್ಯೆ, ದೇಹದಲ್ಲಿನ ಆಮ್ಲಜನಕ ಪ್ರಮಾಣ ಇಳಿಕೆ

ಬಿಳಿ ಶಿಲೀಂಧ್ರ ಪತ್ತೆಯಾಗಿದ್ದ ಆರು ಜನ ಗುಣಮುಖ

ರಾಯಚೂರು: ಕೋವಿಡ್‌ನಿಂದ ಗುಣಮುಖರಾಗಿದ್ದ ಜಿಲ್ಲೆಯ ಆರು ಜನರಿಗೆ ಬಿಳಿ ಶಿಲೀಂಧ್ರ (ವೈಟ್‌ ಫಂಗಸ್‌) ಕಾಣಿಸಿಕೊಂಡಿದ್ದು, ನಗರದ ಸಿದ್ಧಾರ್ಥ ಹೇಲ್ತ್‌ಕೇರ್‌ ಆಸ್ಪತ್ರೆಯ ಗ್ಯಾಸ್ಟ್ರೋ ಎಂಟ್ರಾಲಾಜಿ ವೈದ್ಯ ಡಾ.ಮಂಜುನಾಥ ಅವರು ಚಿಕಿತ್ಸೆ ನೀಡಿ ಗುಣಪಡಿಸಿದ್ದಾರೆ.

‘ಈ ಕಾಯಿಲೆ ಹೊಸದಲ್ಲ. ಮೊದಲಿನಿಂದಲೂ ಇದ್ದು, ಮುಂದೆಯೂ ಇರುತ್ತದೆ. ಜನರು ಭಯಪಡುವ ಅಗತ್ಯವಿಲ್ಲ. 14 ದಿನಗಳವರೆಗೆ ಮಾತ್ರೆಗಳನ್ನು ತೆಗೆದುಕೊಂಡರೆ ರೋಗ ವಾಸಿಯಾಗುತ್ತದೆ. ಸ್ಟಿರಾಯ್ಡ್‌ ಚುಚ್ಚುಮದ್ದು ತೆಗೆದುಕೊಂಡ 100 ರೋಗಿಗಳಲ್ಲಿ ಒಬ್ಬರಲ್ಲಿ ಇದು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಇದು ಸಾಮಾನ್ಯ ಕಾಯಿಲೆ’ ಎಂದು ಡಾ. ಮಂಜುನಾಥ ತಿಳಿಸಿದರು.

‘ಈರುಳ್ಳಿ ಬಹಳ ದಿನಗಳವರೆಗೆ ಇಟ್ಟಾಗ, ಅದರೊಳಗೂ ಶಿಲೀಂಧ್ರ ಕಾಣಿಸುತ್ತದೆ. ಅದೇ ರೀತಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಂದಿದಾಗ ಅನ್ನನಾಳದಲ್ಲಿ ಆಸ್ಪರ್‌ ಜಿಲೋಸಿಸ್‌ ಕಾಣಿಸಿಕೊಳ್ಳುತ್ತದೆ. ಇದು ಮಾರಣಾಂತಿಕ ಕಾಯಿಲೆ
ಯಲ್ಲ. 1000 ರೋಗಿಗಳಲ್ಲಿ ಒಬ್ಬರಿಗೆ ಮಾತ್ರ ಗಂಭೀರ ಪರಿಣಾಮ ಬೀರಬಹುದಷ್ಟೇ’ ಎಂದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌, ‘ಬಿಳಿ ಶಿಲೀಂಧ್ರ ಕಾಣಿಸಿಕೊಂಡಿದ್ದ ರೋಗಿಯೊಬ್ಬರು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ ಎನ್ನುವ ಮಾಹಿತಿ ಬಂದಿದೆ. ಬೇರೆ ಎಲ್ಲಿಯೂ ಕಂಡುಬಂದಿಲ್ಲ. ಇದರ ಚಿಕಿತ್ಸೆಗೆಎಂಫೋಟೆರಿಸಿನ್-ಬಿ ಚುಚ್ಚುಮದ್ದುಬೇಕಾಗಿಲ್ಲ. ಮಾತ್ರೆಗಳಿಂದ ಗುಣಮುಖವಾಗುತ್ತದೆ. ಈ ಮಾತ್ರೆಗಳು ಎಲ್ಲ ಕಡೆಗೂ ಲಭ್ಯವಿರುವುದಾಗಿ ವೈದ್ಯರು ತಿಳಿಸಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT