ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಸಂಪುಟದಲ್ಲಿ ಕರ್ನಾಟಕದ ಯಾರಿಗೆಲ್ಲ ಅವಕಾಶ? HDKಗೆ ಸಚಿವ ಸ್ಥಾನ ಖಚಿತ

Published 6 ಜೂನ್ 2024, 14:29 IST
Last Updated 6 ಜೂನ್ 2024, 14:29 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಜೆಡಿಎಸ್‌ನಿಂದ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದ್ದು, ಬಿಜೆಪಿಯಿಂದ ಗೆದ್ದಿರುವ ಯಾರಿಗೆ ಮತ್ತು ಎಷ್ಟು ಮಂದಿಗೆ ಮಂತ್ರಿ ಸ್ಥಾನ ಸಿಗಲಿದೆ ಎಂಬ ಲೆಕ್ಕಾಚಾರ ಶುರುವಾಗಿದೆ.

ಎನ್‌ಡಿಎ ಮಿತ್ರ ಪಕ್ಷಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಚಿವ ಸ್ಥಾನಗಳನ್ನು ನೀಡಬೇಕಾಗಿರುವ ಕಾರಣ ಬಿಜೆಪಿಗೆ ಈ ಬಾರಿ ಹೆಚ್ಚಿನ ಸಚಿವ ಸ್ಥಾನ ಸಿಗುವ ಸಾಧ್ಯತೆ ಕಡಿಮೆ. ಹೀಗಾಗಿ, ರಾಜ್ಯದಿಂದ ಗೆದ್ದಿರುವ ಕೇಂದ್ರದ ಮಾಜಿ ಸಚಿವ ಪ್ರಲ್ಹಾದ ಜೋಶಿ, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ  ಶೆಟ್ಟರ್‌, ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ವಿ.ಸೋಮಣ್ಣ, ‍ಪಿ.ಸಿ. ಗದ್ದಿಗೌಡರ್  ಪೈಕಿ ಕನಿಷ್ಠ ಇಬ್ಬರು ಅಥವಾ ಮೂವರಿಗೆ ಸಚಿವ ಸ್ಥಾನ ಸಿಗಬಹುದು ಎಂಬ ಲೆಕ್ಕಾಚಾರ ನಡೆದಿದೆ.

ಲಿಂಗಾಯತರ ಕೋಟಾದಡಿ ಪಕ್ಷದಲ್ಲಿ ಅತ್ಯಂತ ಹಿರಿಯರಾದ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಗದ್ದಿಗೌಡರರಲ್ಲಿ ಒಬ್ಬರನ್ನು ಪರಿಗಣಿಸಬಹುದು. ಪರಿಶಿಷ್ಟ ಜಾತಿಯ ಎಡಗೈ ಪಂಗಡಕ್ಕೆ ಸೇರಿದ ಗೋವಿಂದ ಕಾರಜೋಳ ಅವರಿಗೂ ಅವಕಾಶ ಸಿಕ್ಕಿದರೆ ಅಚ್ಚರಿ ಇಲ್ಲ ಎಂಬ ಲೆಕ್ಕಾಚಾರವೂ ಇದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ವರಿಷ್ಠರ ಸೂಚನೆಯಂತೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಸೋತಿದ್ದ ವಿ.ಸೋಮಣ್ಣ ಅವರಿಗೆ ಸಚಿವ ಸ್ಥಾನ ಸಿಕ್ಕಿದರೂ ಆಶ್ಚರ್ಯವಿಲ್ಲ. ಹಿಂದಿ ಮತ್ತು ಇಂಗ್ಲಿಷ್‌ ಭಾಷೆಯ ಹಿಡಿತ, ಜನತಾಪರಿವಾರದ ಹಿನ್ನೆಲೆಯ ಕಾರಣಕ್ಕೆ ಬೊಮ್ಮಾಯಿ ಅವರಿಗೂ ಅವಕಾಶ ಸಿಗಬಹುದು ಎಂದೂ ಹೇಳಲಾಗುತ್ತಿದೆ.

ಯಾರಿಗೆಲ್ಲ ಸಚಿವ ಸ್ಥಾನ ನೀಡಬೇಕು ಎಂಬುದನ್ನು ವರಿಷ್ಠರೇ ತೀರ್ಮಾನಿಸಲಿರುವುದರಿಂದ ರಾಜ್ಯ ನಾಯಕರು ಸಲಹೆ ನೀಡುವ ಸಾಧ್ಯತೆಗಳಿಲ್ಲ. ಈ ಹಿಂದಿನ ಸರ್ಕಾರದಲ್ಲಿ ಪ್ರಲ್ಹಾದ ಜೋಶಿ, ನಾರಾಯಣಸ್ವಾಮಿ, ಭಗವಂತ ಖೂಬ ಮತ್ತು ಶೋಭಾ ಕರಂದ್ಲಾಜೆ ಸಚಿವರಾಗಿದ್ದರು. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಆಗಿದ್ದ ನಿರ್ಮಲಾ ಸೀತಾರಾಮನ್‌ ಮತ್ತು ರಾಜೀವ್ ಚಂದ್ರಶೇಖರ್ ಸಂಪುಟದಲ್ಲಿ ಸ್ಥಾನ ಪಡೆದಿದ್ದರು. ಈ ಬಾರಿ ನಿರ್ಮಲಾ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡರೆ, ಕರ್ನಾಟಕದಿಂದ ಬ್ರಾಹ್ಮಣ ಸಮುದಾಯದ ಮತ್ತೊಬ್ಬ ಪ್ರತಿನಿಧಿಗೆ ಅವಕಾಶ ಇರುವುದಿಲ್ಲ. ಈ ಕಾರಣಕ್ಕೂ ಜೋಶಿಯವರಿಗೆ ಅವಕಾಶ ತಪ್ಪಬಹುದು ಎನ್ನಲಾಗುತ್ತಿದೆ.

ಜೆಡಿಎಸ್‌ ಮೂರು ಸ್ಥಾನಗಳಲ್ಲಿ ಸ್ಪರ್ಧಿಸಿ ಎರಡು ಸ್ಥಾನಗಳಲ್ಲಿ ಗೆದ್ದಿದೆ. ಹೀಗಾಗಿ ಒಬ್ಬರಿಗೆ ಮಾತ್ರ ಸಚಿವ ಸ್ಥಾನ ಸಿಗಲಿದೆ. ‘ಕುಮಾರಸ್ವಾಮಿ ಅವರಿಗೆ ಕೃಷಿ ಖಾತೆ ಬಗ್ಗೆ ಆಸಕ್ತಿ ಇದ್ದರೂ, ಇಂತಹದ್ದೇ ಖಾತೆ ಕೊಡಿ ಎಂದು ಪಟ್ಟು ಹಿಡಿಯುವುದಿಲ್ಲ. ಅವರು ಯಾವುದನ್ನು ಕೊಡುತ್ತಾರೋ ಅದನ್ನು ಒಪ್ಪುವ ಸಾಧ್ಯತೆ ಇದೆ’ ಎಂದು ಜೆಡಿಎಸ್‌ ಮೂಲಗಳು ಹೇಳಿವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT