ಕೆಂಗೇರಿ: ‘ಅಧಿಕಾರಸ್ಥರು ವಿವೇಚನಾ ರಹಿತರಂತೆ ವರ್ತಿಸಿದರೆ, ಯಾವುದೇ ವ್ಯವಸ್ಥೆ ಜನಪೀಡಕವಾಗಿ ರೂಪುಗೊಳ್ಳುವ ಆತಂಕ ಸೃಷ್ಟಿಯಾಗುತ್ತದೆ’ ಎಂದು ಮೈಸೂರು–ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಎಚ್ಚರಿಸಿದರು.
ಕನಕಪುರ ರಸ್ತೆಯಲ್ಲಿರುವ ಜ್ಯೋತಿ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಕಾಲೇಜಿನ ಹೆಚ್ಚುವರಿ ಕಟ್ಟಡ ‘ಮಹಾರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಬ್ಲಾಕ್’ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ಮತ್ತು ಅರಸೊತ್ತಿಗೆ ಎರಡೂ ವ್ಯವಸ್ಥೆಯೂ ತನ್ನದೇ ಆದ ಸಾಧಕ ಬಾಧಕ ಅಂಶಗಳನ್ನು ಒಳಗೊಂಡಿದೆ. ಅರಸೊತ್ತಿಗೆಯಾಗಲಿ, ರಾಜಕಾರಣವಾಗಲಿ ರಾಜಧರ್ಮ ಪಾಲನೆಯಾಗಬೇಕು. ಆಗ ಮಾತ್ರ ಇತಿಹಾಸದ ಪುಟಗಳು ನಮ್ಮನ್ನು ಹೆಮ್ಮೆಯಿಂದ ಸ್ಮರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ವೃತ್ತಿ ಯಾವುದೇ ಆಗಿರಲಿ, ಧರ್ಮ ಪಾಲನೆಗೆ ಒತ್ತು ನೀಡಬೇಕು. ವ್ಯವಸ್ಥೆಯ ಯಶಸ್ಸು ಪರಿಪಾಲಕರ ಬದ್ದತೆಯ ಮೇಲೆ ಅವಲಂಬಿತವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಅದಮ್ಯ ಚೇತನ ಪ್ರತಿಷ್ಠಾನದ ತೇಜಸ್ವಿನಿ ಅನಂತ ಕುಮಾರ್ ಮಾತನಾಡಿದರು. ಇದೇ ವೇಳೆ 2023-24ನೇ ಸಾಲಿನ ಅತ್ಯುತ್ತಮ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜ್ಯೋತಿ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ಅಧ್ಯಕ್ಷೆ ಬಿ.ವಿ.ಸೀತಾ, ಎಂ.ನರಸಿಂಹನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.