ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2023 ಮರೆಯುವ ಮುನ್ನ: ರಾಜಕೀಯ ಪಲ್ಲಟಗಳಿಗೆ ಸಾಕ್ಷಿಯಾದ ವರ್ಷ

Published 30 ಡಿಸೆಂಬರ್ 2023, 20:36 IST
Last Updated 30 ಡಿಸೆಂಬರ್ 2023, 20:36 IST
ಅಕ್ಷರ ಗಾತ್ರ

ಬೆಂಗಳೂರು: ಈ ವರ್ಷದ ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಮುನ್ನ ಮತ್ತು ನಂತರ ರಾಜ್ಯವು ಹಲವು ರಾಜಕೀಯ ಪಲ್ಲಟಗಳಿಗೆ ಸಾಕ್ಷಿಯಾಯಿತು. ಭರ್ಜರಿ ಬಹುಮತದೊಂದಿಗೆ ಕಾಂಗ್ರೆಸ್‌ ಅಧಿಕಾರದ ಗದ್ದುಗೆಗೇರಿದರೆ, ಹೀನಾಯ ಸೋಲಿನ ಹೊಡೆತದಿಂದ ತತ್ತರಿಸಿ ಹೋದ ಬಿಜೆಪಿ ಇನ್ನೂ ಮೊದಲಿನ ಸ್ಥಿತಿಗೆ ಮರಳಿಲ್ಲ. ಬಲಹೀನಗೊಂಡಿರುವ ಜೆಡಿಎಸ್‌ ಪಕ್ಷದ ನಾಯಕರು ಬಿಜೆಪಿಯ ಆಸರೆಯಲ್ಲಿ ಶಕ್ತಿ ಹೆಚ್ಚಿಸಿಕೊಳ್ಳುವ ಕಸರತ್ತಿನಲ್ಲೇ ಇದ್ದಾರೆ.

ವರ್ಷದ ಆರಂಭದಲ್ಲೇ ಶೇಕಡ 40ರಷ್ಟು ಕಮಿಷನ್‌ ಆರೋಪ ಬಿಜೆಪಿ ನೇತೃತ್ವದ ಹಿಂದಿನ ಸರ್ಕಾರವನ್ನು ಬಲವಾಗಿ ಸುತ್ತಿಕೊಂಡಿತ್ತು. ಪೇ ಸಿ.ಎಂ ಪೋಸ್ಟರ್‌ನಂತಹ ಹೊಸ ದಾಳಗಳನ್ನು ಉರುಳಿಸಿದ್ದ ಕಾಂಗ್ರೆಸ್‌, ಬಿಜೆಪಿಯನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿತ್ತು. ಅಳೆದು ತೂಗಿ ಟಿಕೆಟ್‌ ಹಂಚಿಕೆ ಮಾಡಿದ್ದ ಬಿಜೆಪಿ, ಜೆಡಿಎಸ್‌ ಜತೆಗೂಡಿ ಮೈತ್ರಿ ಸರ್ಕಾರವನ್ನಾದರೂ ರಚಿಸುವ ನಿರೀಕ್ಷೆಯಲ್ಲಿತ್ತು. ಪ್ರಧಾನಿ ನರೇಂದ್ರ ಮೋದಿ ಪದೇ ಪದೇ ಕರ್ನಾಟಕಕ್ಕೆ ಬಂದು ಚುನಾವಣಾ ಪ್ರಚಾರ ನಡೆಸಿದ್ದರು.

ಮೇ 13ಕ್ಕೆ ಚುನಾವಣಾ ಫಲಿತಾಂಶ ಪ್ರಕಟವಾದಾಗ, ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಹೀನಾಯ ಸೋಲಿನೊಂದಿಗೆ ಪತನಗೊಂಡಿತು. ಕಾಂಗ್ರೆಸ್‌ 135 ಸ್ಥಾನಗಳೊಂದಿಗೆ ಅಧಿಕಾರದ ಗದ್ದುಗೆ ಹಿಡಿದರೆ, ಬಿಜೆಪಿಯ ಶಾಸಕರ ಸಂಖ್ಯೆ 66ಕ್ಕೆ ಕುಸಿಯಿತು. ಗೋವಿಂದ ಕಾರಜೋಳ, ಮುರುಗೇಶ ನಿರಾಣಿ, ಡಾ.ಕೆ. ಸುಧಾಕರ್‌, ಸಿ.ಟಿ. ರವಿ ಸೇರಿದಂತೆ ಬಿಜೆಪಿಯ ಘಟಾನುಘಟಿಗಳು ಸೋಲು ಕಂಡರು. ಜೆಡಿಎಸ್‌ನ ಶಾಸಕರ ಸಂಖ್ಯೆ 2018ರ ಚುನಾವಣೆಗೆ ಹೋಲಿಸಿದರೆ ಅರ್ಧದಷ್ಟಕ್ಕೆ ಕುಸಿಯಿತು. ಅತಂತ್ರ ವಿಧಾನಸಭೆ ಸೃಷ್ಟಿಯಾಗಬಹುದೆಂಬ ಬಯಕೆಯಲ್ಲೇ ಅಧಿಕಾರದ ಗದ್ದುಗೆಯ ಕನಸು ಕಂಡಿದ್ದ ಜೆಡಿಎಸ್‌ ನಾಯಕರು, ತಮ್ಮ ಸಾಂಪ್ರದಾಯಿಕ ನೆಲೆಗಳಲ್ಲೇ ಬಲ ಕಳೆದುಕೊಂಡರು.

ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕವೂ ಕರ್ನಾಟಕ ನಾಟಕೀಯ ರಾಜಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿ ಗಾದಿಗಾಗಿ ನಡೆಸಿದ ಪೈಪೋಟಿ ಕಾಂಗ್ರೆಸ್‌ ನಾಯಕರನ್ನು ತುಸು ಇಕ್ಕಟ್ಟಿಗೆ ಸಿಲುಕಿಸಿತು. ಕಾಂಗ್ರೆಸ್‌ ಹೈಕಮಾಂಡ್‌ನ ಸಂಧಾನ ಸೂತ್ರದಂತೆ ಸಿದ್ದರಾಮಯ್ಯ ಮುಖ್ಯಮಂತ್ರಿ ಕುರ್ಚಿ ಹಿಡಿದರು.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಲೆಲ್ಲ ಸಂಪುಟದಲ್ಲಿರುತ್ತಿದ್ದ ಆರ್‌.ವಿ. ದೇಶಪಾಂಡೆ ಸೇರಿದಂತೆ ಹಲವು ಹಿರಿಯರು ಈ ಬಾರಿ ಹೊರಗುಳಿದರು. ಆ ಮೂಲಕ ಹೊಸ ರಾಜಕೀಯ ಸಮೀಕರಣವೊಂದನ್ನು ಅನುಷ್ಠಾನಕ್ಕೆ ತರುವ ಕಸರತ್ತಿಗೆ ಕಾಂಗ್ರೆಸ್‌ ನಾಯಕರು ಕೈ ಹಾಕಿದರು.

ಅಧಿಕಾರ ಸ್ವೀಕರಿಸಿದ ಮರು ಗಳಿಗೆಯಿಂದಲೇ ‘ಗ್ಯಾರಂಟಿ’ಗಳ ಅನುಷ್ಠಾನಕ್ಕೆ ಚಾಲನೆ ನೀಡಿದ ಸಿದ್ದರಾಮಯ್ಯ, ಮತದಾರರಿಗೆ ಕೊಟ್ಟ ವಾಗ್ದಾನ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ನಾಲ್ಕು ‘ಗ್ಯಾರಂಟಿ’ಗಳ ಅನುಷ್ಠಾನ ಆಗಿದ್ದು, ‘ಯುವ ನಿಧಿ’ಗೆ ಹೊಸ ವರ್ಷದ ಆರಂಭದಲ್ಲೇ ಚಾಲನೆ ನೀಡಲು ಸಿದ್ಧತೆ ನಡೆಸಿದ್ದಾರೆ.

ಅಧಿಕಾರಕ್ಕೆ ಬಂದ ಆರು ತಿಂಗಳಲ್ಲೇ ಕಾಂಗ್ರೆಸ್‌ ನೇತೃತ್ವದ ಸರ್ಕಾರದ ವಿರುದ್ಧವೂ ಕಮಿಷನ್‌ ಆರೋಪ ಕೇಳಿಬಂದಿದೆ. ಕೆಲವು ಇಲಾಖೆಗಳಲ್ಲಿ ಮುಂದುವರಿದ ಕಮಿಷನ್‌ ಹಾವಳಿ ವಿರುದ್ಧ ಗುತ್ತಿಗೆದಾರರು ಧ್ವನಿ ಎತ್ತಿದ್ದಾರೆ.

‘ನಾಯಕ’ರಿಗಾಗಿ ಹುಡುಕಾಡಿದ ಬಿಜೆಪಿ

ಚುನಾವಣೆ ಮುಗಿದು ಆರು ತಿಂಗಳವರೆಗೂ ಬಿಜೆಪಿಯು ವಿಧಾನಸಭೆ ಮತ್ತು ವಿಧಾನ ಪರಿಷತ್‌ಗಳ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಲಿಲ್ಲ. ಈ ಹುದ್ದೆಗಳ ಮೇಲೆ ಕಣ್ಣಿಟ್ಟಿದ್ದ ಹಲವರು ಪದೇ ‍ಪದೇ ದೆಹಲಿ ಯಾತ್ರೆ ಮಾಡಿದರೂ ಪ್ರಯೋಜನವಾಗಿರಲಿಲ್ಲ.

ವಿಧಾನ ಮಂಡಲದ ಎರಡು ಅಧಿವೇಶನಗಳನ್ನು ವಿರೋಧ ಪಕ್ಷದ ನಾಯಕರಿಲ್ಲದೇ ಕಳೆದ ಬಿಜೆಪಿ, ಕಲಾಪದಲ್ಲೇ ಮುಜುಗರ ಎದುರಿಸಿತು. ವಿಧಾನಮಂಡಲದ ಬೆಳಗಾವಿ ಅಧಿವೇಶನದಲ್ಲಿ ಆರ್‌. ಅಶೋಕ ಅವರಿಗೆ ವಿಧಾನಸಭೆಯ ವಿರೋಧ ಪಕ್ಷದ ಸ್ಥಾನ ನೀಡಲಾಯಿತು. ವಿಧಾನ ಪರಿಷತ್‌ನಲ್ಲಿ ಮೂರನೇ ಅಧಿವೇಶನವೂ ವಿರೋಧ ಪಕ್ಷದ ನಾಯಕನಿಲ್ಲದೇ ಮುಗಿಯಿತು. ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಈಚೆಗೆ ಆ ಹುದ್ದೆಗೆ ನೇಮಿಸಲಾಗಿದೆ.

ಸುದೀರ್ಘ ಕಸರತ್ತಿನ ಬಳಿಕ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಅವರ ಮಗ, ಶಿಕಾರಿಪುರ ಕ್ಷೇತ್ರದ ಶಾಸಕ ಬಿ.ವೈ. ವಿಜಯೇಂದ್ರ ಅವರಿಗೆ ‘ಪಟ್ಟ’ ಕಟ್ಟಿದ್ದಾರೆ.

ವಿಜಯೇಂದ್ರ ನೇಮಕ, ಅಶೋಕ ಆಯ್ಕೆಯ ಅಪಸ್ವರ ಪಕ್ಷದ ಒಡಲನ್ನು ಸುಡುತ್ತಲೇ ಇದೆ.

ಮೈತ್ರಿ ಮೊರೆಹೋದ ಜೆಡಿಎಸ್‌

ವಿಧಾನಸಭಾ ಚುನಾವಣೆಯಲ್ಲಿ ಬಲವಾದ ಪೆಟ್ಟು ತಿಂದಿರುವ ಜೆಡಿಎಸ್‌, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜತೆ ಸಖ್ಯ ಬೆಳೆಸುವ ತೀರ್ಮಾನ ಕೈಗೊಂಡಿದೆ. ಬಿಜೆಪಿ ವಿರುದ್ಧ ಸೆಣಸಿ ಗೆದ್ದು ಬಂದ ಜೆಡಿಎಸ್‌ನ
ಹಲವು ಶಾಸಕರು ಆರಂಭದಲ್ಲಿ ಮೈತ್ರಿಯನ್ನು ವಿರೋಧಿಸಿದ್ದರು. ಸ್ವತಃ ಅಖಾಡಕ್ಕಿಳಿದು ಎಲ್ಲರ ಮನವೊಲಿಸಿದ ‍ಪಕ್ಷದ ವರಿಷ್ಠ ಎಚ್‌.ಡಿ. ದೇವೇಗೌಡ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು ಮೈತ್ರಿಯ ನಿರ್ಧಾರ ಅಂತಿಮಗೊಳಿಸಿದರು.

ಕಾಂಗ್ರೆಸ್‌ನಲ್ಲೂ ಇದೆ ಅತೃಪ್ತಿಯ ಹೊಗೆ

135 ಶಾಸಕರ ಬಲದ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಹೊಗೆ ತಣ್ಣಗಾಗಿಲ್ಲ. ತಮ್ಮ ಮಾತಿಗೆ ಕಿಮ್ಮತ್ತಿಲ್ಲ ಎಂಬ ಕಾರಣ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸಿಡಿಮಿಡಿಗೊಂಡಿದ್ದರು. ಅವರ ಅತೃಪ್ತಿಯನ್ನು ಶಮನ ಮಾಡುವ ಕೆಲಸ ಪೂರ್ಣಗೊಂಡಂತೆ ಕಾಣಿಸುತ್ತಿಲ್ಲ.  ಬಿ.ಆರ್. ಪಾಟೀಲ, ಬಸವರಾಜ ರಾಯರಡ್ಡಿ ಅಂತಹ ಹಿರಿಯ ನಾಯಕರು ಆರಂಭದಲ್ಲೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಪಾಟೀಲರಂತೂ ಪತ್ರ ಸಮರವನ್ನೇ ನಡೆಸಿದರು. ಬೆಂಗಳೂರಿನ ಪ್ರಭಾವಿ ಶಾಸಕ ಎಂ. ಕೃಷ್ಣಪ್ಪ, ಅವರ ಪುತ್ರ ಪ್ರಿಯಕೃಷ್ಣ ಪಕ್ಷದ ಚಟುವಟಿಕೆಯಿಂದ ದೂರವೇ ಉಳಿದಿದ್ದಾರೆ. 

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಮಧ್ಯದ ಅಧಿಕಾರದ ಪೈಪೋಟಿ ಮುಗಿದಿಲ್ಲ; ಮುಗಿಯುವ ಲಕ್ಷಣವೂ ಕಾಣಿಸುತ್ತಿಲ್ಲ. ಲೋಕಸಭೆ ಚುನಾವಣೆ ಬಳಿಕ ಈ ಪೈಪೋಟಿ ಮತ್ತೊಂದು ಸುತ್ತಿನ ಅಂತರ್‌ಸಮರಕ್ಕೆ ಕಾರಣವಾದರೂ ಅಚ್ಚರಿಯಿಲ್ಲ.

ಗ್ಯಾರಂಟಿ ಯೋಜನೆಗಳು

ಗೃಹಲಕ್ಷ್ಮಿ: 1.17 ಕೋಟಿ ಫಲಾನುಭವಿಗಳು ₹2,300 ಕೋಟಿ (ಮಾಸಿಕ) ವೆಚ್ಚ

ಗೃಹ ಜ್ಯೋತಿ: 1.62 ಕೋಟಿ ಫಲಾನುಭವಿಗಳು ₹800 ಕೋಟಿ (ಮಾಸಿಕ) ವೆಚ್ಚ

ಶಕ್ತಿ: 120 ಕೋಟಿ ಮಹಿಳೆಯರಿಗೆ ಉಚಿತ ಪ್ರಯಾಣ, ₹2,700 ಕೋಟಿ ವೆಚ್ಚ

ಅನ್ನ ಭಾಗ್ಯ: 1.28 ಕೋಟಿ ಪಡಿತರ ಚೀಟಿದಾರರು,₹ 656 ಕೋಟಿ ವೆಚ್ಚ(ಮಾಸಿಕ)

ಯುವನಿಧಿ; ₹1 ಸಾವಿರ ಕೋಟಿ ನಿಗದಿ

ಒಟ್ಟು 4.30 ಕೋಟಿ ಫಲಾನುಭವಿಗಳು,ಪ್ರಸಕ್ತ ವರ್ಷ ₹38 ಸಾವಿರ ಕೋಟಿ ವೆಚ್ಚ

ಪ್ರಮುಖ ನಿರ್ಣಯಗಳು

  • ಕಾರ್ಖಾನೆಗಳಲ್ಲಿ ಕೆಲಸದ ಅವಧಿಯನ್ನು 12 ಗಂಟೆಗಳಿಗೆ ಹೆಚ್ಚಿಸುವ, ಮಹಿಳೆಯರಿಗೆ ರಾತ್ರಿಪಾಳಿ ಕೆಲಸಕ್ಕೆ ಅನುವು ಮಾಡಿಕೊಟ್ಟಿರುವ ‘ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ) ಮಸೂದೆ.

  • ರಾಜ್ಯದಲ್ಲಿ ಕನ್ನಡಕ್ಕೆ ಅಗ್ರಸ್ಥಾನ, ಕನ್ನಡಿಗರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಉತ್ತಮ ಅವಕಾಶ ಕಲ್ಪಿಸಲು ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ.

  • ಪ‍ರಿಶಿಷ್ಟ ಜಾತಿ/ ಪಂಗಡಗಳ ಭೂಮಿ ವರ್ಗಾವಣೆ ನಿಷೇಧ(ಪಿಟಿಸಿಎಲ್‌) ಮಸೂದೆ. 

  • ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಮತ್ತು ದೆಹಲಿಯಲ್ಲಿ ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿಯಾಗಿ ನೇಮಕಗೊಳ್ಳುವ ವಿಧಾನಸಭೆ ಅಥವಾ ವಿಧಾನ ಪರಿಷತ್‌ ಸದಸ್ಯರನ್ನು ಲಾಭದಾಯಕ ಹುದ್ದೆ ಹೊಂದಿದ ಆರೋಪದಡಿ ಅನರ್ಹತೆಯಿಂದ ರಕ್ಷಿಸುವ ‘ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣಾ) (ತಿದ್ದುಪಡಿ) ಮಸೂದೆ.

  • ಸಣ್ಣ ರೈತರು ಮತ್ತು ಆರ್ಥಿಕವಾಗಿ ದುರ್ಬಲರಾಗಿರುವವರು ದಾಖಲಿಸಿರುವ ಅಥವಾ ಪ್ರತಿವಾದಿ ಗಳಾಗಿರುವ ಪ್ರಕರಣಗಳನ್ನು ದಿನದ ವಿಚಾರಣಾ ಪಟ್ಟಿಯಲ್ಲಿ ಆದ್ಯತೆ ಮೇಲೆ ತೆಗೆದುಕೊಳ್ಳಲು ಅವಕಾಶ ಕಲ್ಪಿಸುವ ಸಿವಿಲ್‌ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ಮಸೂದೆ. 

  • ಕೃಷಿ ಜಮೀನನ್ನು ಸ್ವಯಂಘೋಷಣೆಯೊಂದಿಗೆ ಭೂ ಪರಿವರ್ತನೆ ಮಾಡಲು ಅವಕಾಶ ಕಲ್ಪಿಸುವ ಭೂ ಕಂದಾಯ ತಿದ್ದುಪಡಿ ಮಸೂದೆ.

  • ಸರ್ಕಾರಿ ವ್ಯಾಜ್ಯಗಳ ನಿರ್ವಹಣೆಗೆ ಹೊಣೆಗಾರಿಕೆ ನಿಗದಿಪಡಿಸುವ ಕರ್ನಾಟಕ ಸರ್ಕಾರಿ ವ್ಯಾಜ್ಯ ನಿರ್ವಹಣೆ ಮಸೂದೆ. 

  •  ಕರ್ನಾಟಕ ಅಗ್ನಿಶಾಮಕ ದಳ (ತಿದ್ದುಪಡಿ) ಮಸೂದೆ ಮತ್ತು ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ (ತಿದ್ದುಪಡಿ) ಮಸೂದೆ.

  • ಪತ್ತಿನ ಸಹಕಾರ ಸಂಘಗಳು, ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು, ಸಿಬ್ಬಂದಿಗೆ ಸೇವಾ ಭದ್ರತೆ ಕಲ್ಪಿಸುವ ‘ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ಮಸೂದೆ.

  • ಕರ್ನಾಟಕ ಅನುಸೂಚಿತ ಜಾತಿ ಮತ್ತು ಬುಡಕಟ್ಟು ಉಪ ಯೋಜನೆ (ಯೋಜನೆ, ಹಂಚಿಕೆ, ಮತ್ತು ಆರ್ಥಿಕ ಸಂಪನ್ಮೂಲಗಳ ಬಳಕೆ) ತಿದ್ದುಪಡಿ ಮಸೂದೆ.

  •  ₹ 20 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ವಿದ್ಯುತ್‌ ಚಾಲಿತ ವಾಹನಗಳಿಗೆ ತೆರಿಗೆ ರದ್ಧತಿಯ ತಿದ್ದುಪಡಿಯೊಂದಿಗೆ ‘ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ಎರಡನೇ ತಿದ್ದುಪಡಿ) ಮಸೂದೆ.

  • ₹ 10 ಲಕ್ಷದಿಂದ ₹ 15 ಲಕ್ಷದವರೆಗಿನ ಮೌಲ್ಯ ಹಾಗೂ 1.5 ಟನ್‌ನಿಂದ 12 ಟನ್‌ವರೆಗಿನ ತೂಕದ ಸರಕು ಸಾಗಣೆ ಮತ್ತು ಕ್ಯಾಬ್‌ ವಾಹನಗಳಿಗೆ ಜೀವಿತಾವಧಿ ತೆರಿಗೆ ವಿಧಿಸುವುದನ್ನು ಹಿಂಪಡೆದು, ಹಿಂದಿನಂತೆಯೇ ತ್ರೈಮಾಸಿಕವಾಗಿ ತೆರಿಗೆ ಸಂಗ್ರಹಿಸಲು ಅವಕಾಶ ಕಲ್ಪಿಸುವ ‘ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ಎರಡನೇ ತಿದ್ದುಪಡಿ) ಮಸೂದೆ.

  • ವಕೀಲರು ಯಾವುದೇ ಭಯ, ಬಾಹ್ಯ ಪ್ರಭಾವಕ್ಕೆ ಒಳಗಾಗದೆ ವೃತ್ತಿಪರ ಸೇವೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲು ಮತ್ತು ಅವರ ಮೇಲಿನ ಹಿಂಸೆಯನ್ನು ನಿಷೇಧಿಸಲು ಹಾಗೂ ರಕ್ಷಣೆ ಒದಗಿಸಲು ಅವಕಾಶ ಕಲ್ಪಿಸುವ  2023ನೇ ಸಾಲಿನ ‘ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ’ ಮಸೂದೆ.  

  • ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ಕಾಯ್ದೆ. 

  •  ಕರ್ನಾಟಕ ಸಾರ್ವಜನಿಕ ಪರೀಕ್ಷೆ (ನೇಮಕಾತಿಯಲ್ಲಿನ ಭ್ರಷ್ಟಾಚಾರ ಮತ್ತು ಅನುಸೂಚಿತ ವಿಧಾನಗಳ ಪ್ರತಿಬಂಧಕ ಕ್ರಮಗಳು) ಮಸೂದೆ, ಕರ್ನಾಟಕ ಅನುಸೂಚಿತ ಜಾತಿಗಳ ಉಪ ಹಂಚಿಕೆ ಮತ್ತು ಬುಡಕಟ್ಟು ಉಪಹಂಚಿಕೆ (ಹಂಚಿಕೆ ಮಾಡಬಹುದಾದ ಆಯವ್ಯಯ ರೂಪಿಸುವುದು, ಆರ್ಥಿಕ ಸಂಪನ್ಮೂಲಗಳ ಹಂಚಿಕೆ ಮತ್ತು ಬಳಕೆ) ಮಸೂದೆ.  

  •  ಹಂಪಿ ವಿಶ್ವಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ಮಸೂದೆ. 

  •  ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಕೆಲವು ಇತರ ಕಾನೂನು ತಿದ್ದುಪಡಿ ಮಸೂದೆ.

  •  ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಮಸೂದೆ.

  •  ರಾಜ್ಯದಲ್ಲಿ ಎಂಬಿಬಿಎಸ್‌ ಮತ್ತು ಸ್ನಾತಕೋತ್ತರ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಗ್ರಾಮೀಣ ಮತ್ತು ನಗರ ಪ್ರದೇಶದ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದು ವರ್ಷ ಕಡ್ಡಾಯವಾಗಿ ಸೇವೆ ಸಲ್ಲಿಸಬೇಕು ಎಂಬ ನಿಯಮ ರದ್ದು ಮಾಡಲು ಅವಕಾಶ ಕಲ್ಪಿಸುವ ‘ಕರ್ನಾಟಕ ವೈದ್ಯಕೀಯ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ ತರಬೇತಿ (ತಿದ್ದುಪಡಿ) ಮಸೂದೆ.

  •  ದತ್ತಕ ಪತ್ರ, ಬ್ಯಾಂಕ್‌ ಗ್ಯಾರಂಟಿ, ದೃಢೀಕರಣ ಪತ್ರ, ಒಪ್ಪಂದ ಪತ್ರ, ಲಿಖಿತಗಳ ರದ್ಧತಿ, ಒಡಂಬಡಿಕೆ ಪತ್ರ, ಹೀಗೆ 54 ವಿಷಯಗಳಿಗೆ ಸಂಬಂಧಿಸಿದಂತೆ ಮುದ್ರಾಂಕ ಶುಲ್ಕವನ್ನು ಹೆಚ್ಚಿಸಲು ಅವಕಾಶ ಕಲ್ಪಿಸುವ ‘ಕರ್ನಾಟಕ ಸ್ಟಾಂಪು(ತಿದ್ದುಪಡಿ) ಮಸೂದೆ.

  •  ಕರಾವಳಿ ಅಭಿವೃದ್ಧಿ ಮಂಡಳಿ ಮಸೂದೆ. 

ಮಹತ್ವದ ಆದೇಶಗಳು

  • ಪರಿಶಿಷ್ಟ ಜಾತಿಗಳ ಮಧ್ಯೆ ಒಳಮೀಸಲಾತಿ ನಿಗದಿ. 

  • 2019ರಿಂದ 2023ರವರೆಗಿನ ಗುತ್ತಿಗೆ ಕಾಮಗಾರಿಗಳಲ್ಲಿ ನಡೆದಿರುವ ಅಕ್ರಮದ ಆರೋಪಗಳ ಕುರಿತು ವಿಚಾರಣೆ ನಡೆಸಲು ನ್ಯಾ.ನಾಗಮೋಹನ ದಾಸ್‌ ಅವರ ಏಕವ್ಯಕ್ತಿ ಆಯೋಗ ರಚನೆ.

  • ಕೋವಿಡ್ ಅವಧಿಯ ಅಕ್ರಮಗಳ ತನಿಖೆಗೆ ನ್ಯಾ. ಮೈಕಲ್ ಕುನ್ಹ ಆಯೋಗ ರಚನೆ

  • ಪಿಎಸ್ಐ ಅಕ್ರಮದ ತನಿಖೆಗೆ ನ್ಯಾ. ವೀರಪ್ಪ ನೇತೃತ್ವದ ಆಯೋಗ ರಚನೆ

  • ಮೋಟಾರು ವಾಹನಗಳ ತೆರಿಗೆ ಪರಿಷ್ಕರಣೆ ಆದೇಶ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹472 ಕೋಟಿ ಹೆಚ್ಚುವರಿ ವರಮಾನ ಸಂಗ್ರಹದ ಗುರಿ.

  •  ಬಿಜೆಪಿ ಸರ್ಕಾರದ ಅವಧಿಯಲ್ಲಿ ತಂದಿದ್ದ ಪಠ್ಯಪುಸ್ತಕಗಳ ಪರಿಷ್ಕರಣೆ ರದ್ದು

  •  ಎಸ್‌ಇಪಿಗೆ ಸುಖದೇವ್‌ ಥೋರಟ್‌ ಅಧ್ಯಕ್ಷತೆಯಲ್ಲಿ ಆಯೋಗ ರಚನೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT