ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳೆಯರಿಗೆ ಹರ್ಷ ತಂದ ‘ಶಕ್ತಿ’ಗೆ ವರ್ಷ: 225 ಕೋಟಿ ಬಾರಿ ಉಚಿತವಾಗಿ ಪ್ರಯಾಣ

Published 11 ಜೂನ್ 2024, 0:23 IST
Last Updated 11 ಜೂನ್ 2024, 0:23 IST
ಅಕ್ಷರ ಗಾತ್ರ

ಬೆಂಗಳೂರು: ಮಹಿಳೆಯರಿಗೂ, ಸಾರಿಗೆ ನಿಗಮಗಳಿಗೂ ಶಕ್ತಿ ತುಂಬಿದ ರಾಜ್ಯ ಸರ್ಕಾರದ ಮಹತ್ವದ ಯೋಜನೆ ‘ಶಕ್ತಿ’ ಜಾರಿಯಾಗಿ ಒಂದು ವರ್ಷ ತುಂಬಿದೆ. ಬಸ್‌ಗಳಲ್ಲಿ 225 ಕೋಟಿ ಬಾರಿ ಮಹಿಳೆಯರು ಪ್ರಯಾಣಿಸಿದ್ದಾರೆ. ಉಚಿತ ಪ್ರಯಾಣದ ಟಿಕೆಟ್‌ ಮೌಲ್ಯ ₹5,450 ಕೋಟಿಯಾಗಿದೆ.

2023ರ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಕಾಂಗ್ರೆಸ್ ಘೋಷಿಸಿದ್ದ ‘ಗ್ಯಾರಂಟಿ’ಗಳಲ್ಲಿ ಮಹಿಳೆಯರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣದ ಯೋಜನೆಯೂ ಒಂದಾಗಿತ್ತು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ಜೂನ್‌ 11ರಂದು ಯೋಜನೆ ಜಾರಿಯಾಗಿತ್ತು. ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಮತ್ತು ಕೆಕೆಆರ್‌ಟಿಸಿ ಬಸ್‌ಗಳಲ್ಲಿ ಅಲ್ಲಿಯವರೆಗೆ ದಿನಕ್ಕೆ 84.5 ಲಕ್ಷ ಜನ ಪ್ರಯಾಣಿಸುತ್ತಿದ್ದರು. ಯೋಜನೆ ಜಾರಿಯಾದ ಮೇಲೆ ನಿತ್ಯ 1.06 ಕೋಟಿಗೆ ಏರಿಕೆಯಾಗಿದೆ. ದುಡಿಯುವ ವರ್ಗದ ಮಹಿಳೆಯರಿಗೆ ಉಪಯೋಗವಾಗಿದೆ. ಜೊತೆಗೆ ಧಾರ್ಮಿಕ ಕೇಂದ್ರ, ಪ್ರವಾಸಿ ತಾಣಗಳ ಸಹಿತ ವಿವಿಧೆಡೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಳವಾಗಲು ಕೂಡ ಕಾರಣವಾಗಿದೆ.

ಬಿಎಂಟಿಸಿಯಲ್ಲಿ ಪ್ರಯಾಣಿಕರು ಅತಿ ಹೆಚ್ಚು ಬಾರಿ (71.49 ಕೋಟಿ) ಪ್ರಯಾಣಿಸಿದ್ದಾರೆ. ಆದರೆ, ಟಿಕೆಟ್‌ ಮೌಲ್ಯದ ಲೆಕ್ಕದಲ್ಲಿ ಬಿಎಂಟಿಸಿ ಕೊನೇ (₹937 ಕೋಟಿ) ಸ್ಥಾನದಲ್ಲಿದೆ. ಸಂಚಾರದ ವ್ಯಾಪ್ತಿ ನಗರಕ್ಕೆ ಸೀಮಿತವಾಗಿರುವುದು ಇದಕ್ಕೆ ಕಾರಣ.  ಕೆಎಸ್‌ಆರ್‌ಟಿಸಿಯಲ್ಲಿ 68.22 ಕೋಟಿ, ಎನ್‌ಡಬ್ಲ್ಯುಕೆಆರ್‌ಟಿಸಿಯಲ್ಲಿ 52.14 ಕೋಟಿ ಹಾಗೂ ಕೆಕೆಆರ್‌ಟಿಸಿಯಲ್ಲಿ 33.29 ಕೋಟಿ ಬಾರಿ ಮಹಿಳೆಯರು ಸಂಚರಿಸಿದ್ದಾರೆ. ಟಿಕೆಟ್‌ ಮೌಲ್ಯದ ಲೆಕ್ಕದಲ್ಲಿ ಕೆಎಸ್‌ಆರ್‌ಟಿಸಿ ಮೊದಲ (₹2,070 ಕೋಟಿ) ಸ್ಥಾನದಲ್ಲಿದೆ.  ಎನ್‌ಡಬ್ಲ್ಯುಕೆಆರ್‌ಟಿಸಿ (₹1,352 ಕೋಟಿ), ಕೆಕೆಆರ್‌ಟಿಸಿ (₹1,130 ಕೋಟಿ) ಆನಂತರದ ಸ್ಥಾನಗಳಲ್ಲಿವೆ.

ಶಕ್ತಿ ಯೋಜನೆಯಿಂದ ಆದಾಯ ಶೇ 42.5 ಇದ್ದರೆ, ‘ಶಕ್ತಿ’ಯೇತರ ಪ್ರಯಾಣಿಕರಿಂದ ಶೇ 57.5 ಆದಾಯ ಅಂದರೆ ₹2,764 ಕೋಟಿ ಗಳಿಸಿದೆ. ಯೋಜನೆಯಿಂದ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುವುದರ ಜೊತೆಗೆ ಪುರುಷರ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಿರುವುದು ಇದಕ್ಕೆ ಕಾರಣ. 

ಕೆಎಸ್‌ಆರ್‌ಟಿಸಿಗೆ ಲಾಭ: ‘ಶಕ್ತಿ’ ಯೋಜನೆ ಜಾರಿ ಮಾಡಿದ ಮೇಲೆ ಕೆಎಸ್‌ಆರ್‌ಟಿಸಿಗೆ ಲಾಭವಾಗಿದೆ. ಬಸ್‌ಗಳು ಶೇ 50ರಿಂದ ಶೇ 60ರಷ್ಟು ಮಾತ್ರ ಭರ್ತಿಯಾಗುತ್ತಿದ್ದವು. ಯೋಜನೆ ಜಾರಿಯಾದ ಮೇಲೆ ಶೇ 85ರಷ್ಟು ಭರ್ತಿಯಾಗುತ್ತಿವೆ. ಹಿಂದೆ ರಜಾದಿನಗಳು, ಹಬ್ಬದ ದಿನಗಳಲ್ಲಿ ಬಸ್‌ಗಳು ತುಂಬಿದ್ದು, ವಾರದ ಮಧ್ಯದ ದಿನಗಳಲ್ಲಿ ಹೆಚ್ಚು ಖಾಲಿ ಇರುತ್ತಿದ್ದವು. ಈಗ ಎಲ್ಲ ದಿನಗಳಲ್ಲಿಯೂ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಕೆಎಸ್‌ಆರ್‌ಟಿಸಿ ವರಮಾನ ಹಿಂದೆ ದಿನಕ್ಕೆ ₹9.7 ಕೋಟಿ ಇದ್ದಿದ್ದು, ಶಕ್ತಿ ಜಾರಿಯಾದ ಮೇಲೆ ₹13.9 ಕೋಟಿಗೆ ಏರಿಕೆಯಾಗಿದೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್‌ ಮಾಹಿತಿ ನೀಡಿದರು.

ಎಲ್ಲೋ ಬೆರಳೆಣಿಕೆಯ ಪ್ರಕರಣಗಳನ್ನು ಹೊರತುಪಡಿಸಿ ನಮ್ಮ ನೌಕರರು ಪ್ರಯಾಣಿಕರೊಂದಿಗೆ ಅತ್ಯುತ್ತಮವಾಗಿ ನಡೆದುಕೊಂಡಿದ್ದಾರೆ. ವಾರದ ರಜೆ, ಹಬ್ಬದ ದಿನಗಳಲ್ಲಿಯೂ ಕೆಲಸ ಮಾಡಿ ಚಾಲಕರು, ನಿರ್ವಾಹಕರು, ತಾಂತ್ರಿಕ ಸಿಬ್ಬಂದಿ ಸರ್ಕಾರಕ್ಕೆ ಉತ್ತಮ ಹೆಸರು ತಂದಿದ್ದಾರೆ. ಯೋಜನೆಯ ಯಶಸ್ಸಿನಲ್ಲಿ ನೌಕರರ ಪಾತ್ರ ದೊಡ್ಡದು ಎಂದು ಅವರು ಶ್ಲಾಘಿಸಿದರು.

ಟಿಕೆಟ್‌ ದರ ಹೆಚ್ಚಿಸಲು ಪತ್ರ

ಡೀಸೆಲ್‌ ದರ ಏರಿಕೆಯಾಗಿದೆ. ನೌಕರರ ವೇತನವೂ ಪ್ರತಿವರ್ಷ ಹೆಚ್ಚಿಸುವುದು ಸಹಜ ಪ್ರಕ್ರಿಯೆ. ಅದಕ್ಕೆ ಸರಿಯಾಗಿ ಟಿಕೆಟ್‌ ಮೌಲ್ಯ ಹೆಚ್ಚಳ ಮಾಡಬೇಕಿತ್ತು. ಆದರೆ ನಾಲ್ಕು ವರ್ಷಗಳಿಂದ ಹೆಚ್ಚಳ ಮಾಡಿಲ್ಲ. ಈ ವರ್ಷ ಹೆಚ್ಚಿಸಲು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ಮಾಹಿತಿ ನೀಡಿದರು. 2020ರ ಫೆಬ್ರುವರಿಯಲ್ಲಿ ಟಿಕೆಟ್‌ ದರ ಏರಿಸಲಾಗಿತ್ತು.  ಆಗ ಡೀಸೆಲ್‌ ದರ ₹60.98 ಇತ್ತು. ಈಗ ₹84.79ಕ್ಕೆ ಏರಿದೆ. ಆಗ ದಿನಕ್ಕೆ ₹3.83 ಕೋಟಿ ಡೀಸೆಲ್‌ಗೆ ಖರ್ಚಾಗುತ್ತಿತ್ತು. ಈಗ ದಿನಕ್ಕೆ ₹4.98 ಕೋಟಿ ಬೇಕಾಗಿದೆ. ನೌಕರರ ವೇತನದ ವೆಚ್ಚ ನಾಲ್ಕು ವರ್ಷಗಳ ಹಿಂದೆ ದಿನಕ್ಕೆ ₹4.57 ಕೋಟಿ ಇದ್ದಿದ್ದು ಈಗ ₹5.87 ಕೋಟಿಗೆ ಏರಿಕೆಯಾಗಿದೆ. ಡೀಸೆಲ್‌ ಮತ್ತು ನೌಕರರ ವೇತನ ವೆಚ್ಚ ಸೇರಿ ದಿನಕ್ಕೆ ₹2.45 ಕೋಟಿ ಹೆಚ್ಚಾಗಿದ್ದು ಅದಕ್ಕೆ ಸರಿಯಾಗಿ ಟಿಕೆಟ್‌ ದರ ಏರಿಸುವುದು ಅನಿವಾರ್ಯ. ಈ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಬೇಕಿದೆ ಎಂದು ವಿವರಣೆ ನೀಡಿದರು.

₹1070 ಕೋಟಿ ಬಾಕಿ

ಸರ್ಕಾರವು ಶಕ್ತಿ ಯೋಜನೆಗೆ 2023–24ನೇ ಸಾಲಿನಲ್ಲಿ ₹3200 ಕೋಟಿ ಬಿಡುಗಡೆ ಮಾಡಿದೆ. ₹1070 ಕೋಟಿ ಬಾಕಿ ಇದೆ. 2024–25ನೇ ಸಾಲಿನ ಬಜೆಟ್‌ನಲ್ಲಿ ₹5015 ಕೋಟಿ ಇಡಲಾಗಿದ್ದು ಇಲ್ಲಿವರೆಗೆ ₹1254 ಕೋಟಿ ಬಿಡುಗಡೆ ಮಾಡಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ. ಈ ಆರ್ಥಿಕ ವರ್ಷದಲ್ಲಿ ಪ್ರತಿ ತಿಂಗಳು ‘ಶಕ್ತಿ’ ಹಣವನ್ನು ನಿಗಮಗಳಿಗೆ ಪಾವತಿ ಮಾಡಲಾಗುತ್ತಿದೆ. ಹಳೆ ಬಾಕಿ ಪಾವತಿಗೆ ಕ್ರಮ ವಹಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದರು. 

‘9000 ಹುದ್ದೆ ಭರ್ತಿಗೆ ನಿರ್ಧಾರ’

ಹಿಂದಿನ ಸರ್ಕಾರ ಖಾಲಿ ಹುದ್ದೆಗಳನ್ನು ತುಂಬಿರಲಿಲ್ಲ. ಚಾಲಕರು ನಿರ್ವಾಹಕರು ತಾಂತ್ರಿಕ ಸಿಬ್ಬಂದಿ ಸೇರಿ ನಾಲ್ಕು ನಿಗಮಗಳಲ್ಲಿ 9000 ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧಾರ ಕೈಗೊಂಡಿದ್ದೇವೆ. 2000 ಹುದ್ದೆಗಳನ್ನು ಈಗಾಗಲೇ ತುಂಬಲಾಗಿದೆ. ಉಳಿದವು ನೇಮಕಾತಿ ಪ್ರಕ್ರಿಯೆಯಲ್ಲಿದೆ. 5800 ಹೊಸ ಬಸ್‌ಗಳನ್ನು ಖರೀದಿ ಮಾಡಲಾಗುತ್ತಿದ್ದು ಅದರಲ್ಲಿ ಈಗಾಗಲೇ 2400 ಬಸ್‌ ಖರೀದಿಯಾಗಿದೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದರು. ಟಿಕೆಟ್‌ ದರ ಏರಿಸುವ ಬಗ್ಗೆ ಸದ್ಯ ಯಾವ ನಿರ್ಧಾರವನ್ನೂ ಕೈಗೊಂಡಿಲ್ಲ. ಎಲ್ಲ ನಾಲ್ಕು ನಿಗಮಗಳಿಂದ ಪ್ರಸ್ತಾವ ಬರಬೇಕು. ಬಂದ ಮೇಲೆ ಪರಿಶೀಲಿಸಲಾಗುವುದು ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT