ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮತ್ತೆ ಬೇಡಿಕೆ ಮುಂದಿಟ್ಟ ಬಿಎಸ್‌ವೈ

Published : 20 ಫೆಬ್ರುವರಿ 2012, 19:30 IST
ಫಾಲೋ ಮಾಡಿ
Comments

ಬೆಂಗಳೂರು:  ಕಾಶಿಯಿಂದ ಸಿಹಿ ಸುದ್ದಿ ತರುವುದಾಗಿ ಹೇಳಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮುಂದಿನ ರಾಜಕೀಯ ನಡೆ ಏನು ಎಂಬುದು ಕುತೂಹಲ ಕೆರಳಿಸಿದೆ.

ಉದ್ದೇಶಿತ ದೆಹಲಿ ಭೇಟಿ ರದ್ದುಪಡಿಸಿ ಕಾಶಿಯಿಂದ ನೇರವಾಗಿ ಬೆಂಗಳೂರಿಗೆ ಹಿಂತಿರುಗಿರುವ ಯಡಿಯೂರಪ್ಪ, ಗುರುವಾರ ತಮ್ಮ ಆಪ್ತ ಶಾಸಕರು, ಮುಖಂಡರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಹೈಕಮಾಂಡ್ ಮೇಲೆ ಒತ್ತಡ ಹೇರುವ ಕುರಿತು ಚರ್ಚಿಸಲಿದ್ದಾರೆ ಎಂದು ಗೊತ್ತಾಗಿದೆ. ಯಡಿಯೂರಪ್ಪ ಅವರಿಗೆ ಸೂಕ್ತ ಸ್ಥಾನಮಾನ ನೀಡುವಂತೆ ಹೈಕಮಾಂಡ್‌ಗೆ ಮನವಿ ಮಾಡಲು ಈ ಹಿಂದೆಯೇ 47 ಶಾಸಕರ ಸಹಿ ಸಂಗ್ರಹಿಸಲಾಗಿದೆ. ಆದರೆ ನಾಯಕತ್ವ ಬದಲಾವಣೆ ಬಗ್ಗೆ ಅದರಲ್ಲಿ ಪ್ರಸ್ತಾಪವಿಲ್ಲ.

`ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಒಪ್ಪುವುದಿಲ್ಲ ಎಂಬುದು ಯಡಿಯೂರಪ್ಪ ಅವರಿಗೂ ಗೊತ್ತಿದೆ. ಪಕ್ಷದಲ್ಲಿ ಹಿಡಿತ ಸಾಧಿಸಲು ಮತ್ತು ತಮ್ಮ ಬೆಂಬಲಿಗರಿಗೆ ಸೂಕ್ತ ಸ್ಥಾನ ಸಿಗುವಂತೆ ನೋಡಿಕೊಳ್ಳುವ ದೃಷ್ಟಿಯಿಂದ ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ ಅಷ್ಟೇ~ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ತಾವು ಹೇಳಿದ ಶಾಸಕರ ಕ್ಷೇತ್ರಗಳಿಗೆ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡಬೇಕು. ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಜೆಟ್ ರೂಪಿಸಬೇಕು. ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡುವ ಅಧಿಕಾರ ತಮಗೇ ನೀಡಬೇಕು. ಸದನ ಸಮಿತಿ ವರದಿ ಬಂದ ನಂತರ ಈಚೆಗೆ ರಾಜೀನಾಮೆ ನೀಡಿರುವ ಮೂವರು ಮಾಜಿ ಸಚಿವರನ್ನು ಮತ್ತೆ ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂಬುದೂ ಸೇರಿದಂತೆ ಯಡಿಯೂರಪ್ಪ ಕೆಲವೊಂದು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ ಎನ್ನಲಾಗಿದೆ.

ಯಡಿಯೂರಪ್ಪ ಅವರ ಎಲ್ಲ ಬೇಡಿಕೆಗಳಿಗೆ ಹೈಕಮಾಂಡ್ ಮಣಿಯುವ ಸಂಭವ ಕಡಿಮೆ. ಕೆಲವೊಂದು ಬೇಡಿಕೆಗಳನ್ನು ಒಪ್ಪಿ, ರಾಜಿ ಸಂಧಾನಕ್ಕೆ ಮುಂದಾಗುವ ಸಾಧ್ಯತೆಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT