ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಂದಾಣಿಕೆ ಪ್ರಕ್ರಿಯೆ ಕೈಬಿಡದಿದ್ದರೆ ಹೋರಾಟ

ಹೆಚ್ಚುವರಿ ಶಿಕ್ಷಕರ ಮರು ನಿಯೋಜನೆಗೆ ಶಿಕ್ಷಕರಿಂದಲೇ ವಿರೋಧ
ಅಕ್ಷರ ಗಾತ್ರ

ದಾವಣಗೆರೆ: ಮಾನವ ಸಂಪನ್ಮೂಲ ಮರು ಹೊಂದಾಣಿಕೆ ಹೆಸರಿನಲ್ಲಿ ಶಿಕ್ಷಣ ಇಲಾಖೆ ನಡೆಸುತ್ತಿರುವ ‘ಹೆಚ್ಚುವರಿ ಶಿಕ್ಷಕರ ಹೊಂದಾಣಿಕೆ ಪ್ರಕ್ರಿಯೆ’ಗೆ ಶಿಕ್ಷಕರಿಂದಲೇ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಶೈಕ್ಷಣಿಕ ವರ್ಷದ ಆರಂಭದಲ್ಲೇ ಹೆಚ್ಚುವರಿ ಶಿಕ್ಷಕರ ಮರು ಹೊಂದಾಣಿಕೆ ಪ್ರಕ್ರಿಯೆ ನಡೆಸಲಾಗಿದೆ. ಇದರ ಬೆನ್ನಿಗೇ ಮರು ನಿಯೋಜನೆ ಮಾಡುವುದು ಅಸಂಬದ್ಧ. ‘ಹೆಚ್ಚುವರಿ ಶಿಕ್ಷಕ’ರನ್ನು ಗುರುತಿಸುವುದಕ್ಕೆ ಬಳಸುವ ಮಾನದಂಡವನ್ನು ಅವೈಜ್ಞಾನಿಕವಾಗಿ ಮಾರ್ಪಾಡು ಮಾಡಲಾಗಿದೆ. ಇದರಿಂದ ಸರ್ಕಾರಿ ಶಾಲೆಗಳ ಸ್ಥಿತಿ ಮತ್ತಷ್ಟು ಹದಗೆಡಲಿದೆ ಎಂಬುದು ಶಿಕ್ಷಕರ ವಾದ.

‘ತರಗತಿಗೊಬ್ಬ ಶಿಕ್ಷಕ, ಶಾಲೆಗೊಬ್ಬ ಮುಖ್ಯ ಶಿಕ್ಷಕ’ ಇರಬೇಕು ಎಂದು ರಾಷ್ಟ್ರೀಯ ಶಿಕ್ಷಣ ಆಯೋಗಗಳಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಆದರೆ, ಈ ನಿಯಮಗಳನ್ನೇ ಗಾಳಿಗೆ ತೂರಿ ಇಲಾಖೆ ಶಿಕ್ಷಕರನ್ನು ಮರು ನಿಯೋಜಿಸ ಹೊರಟಿದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ ಚಂದ್ರಪ್ಪ.

‘ಈ ಹಿಂದಿನ ನಿಯಮಗಳ ಪ್ರಕಾರ ಸರ್ಕಾರಿ ಶಾಲೆಯಲ್ಲಿ 10ರಿಂದ 33 ವಿದ್ಯಾರ್ಥಿಗಳಿದ್ದರೆ ಇಬ್ಬರು, 33ಕ್ಕಿಂತ ಹೆಚ್ಚು ಮಕ್ಕಳಿದ್ದರೆ ಮೂವರು ಶಿಕ್ಷಕರು ಹಾಗೂ 60ಕ್ಕೂ ಅಧಿಕ ವಿದ್ಯಾರ್ಥಿಗಳು ಓದುವ ಶಾಲೆಗೆ ಮುಖ್ಯಶಿಕ್ಷಕರನ್ನು ನಿಯೋಜಿಸಬೇಕಿತ್ತು. ಆದರೆ, ಈ ಮಾನದಂಡವನ್ನು ಅವೈಜ್ಞಾನಿಕವಾಗಿ ಬದಲಿಸಲಾಗಿದೆ. ಇದು ಶಿಕ್ಷಕರಿಗೆ ಹೊರೆಯಾಗಲಿದ್ದು, ಇದರಿಂದ ಸರ್ಕಾರಿ ಶಾಲೆಗಳ ಶಿಕ್ಷಣದ ಗುಣಮಟ್ಟಕ್ಕೆ ಕೊಡಲಿ ಪೆಟ್ಟು ಬೀಳುವುದು ಖಂಡಿತ’ ಎನ್ನುತ್ತಾರೆ ಚಂದ್ರಪ್ಪ.

‘ಶಿಕ್ಷಣ ಇಲಾಖೆ ಸುತ್ತೋಲೆ ಪ್ರಕಾರ 30: 1 ಅನುಪಾತದಲ್ಲಿ ಶಿಕ್ಷಕರನ್ನು ನಿಯೋಜಿಸಲಾಗುತ್ತದೆ. ಹೆಚ್ಚಿನ ಸರ್ಕಾರಿ ಶಾಲೆಗಳಲ್ಲಿ 1ರಿಂದ 7ನೇ ತರಗತಿವರೆಗೆ ಸರಾಸರಿ 60 ವಿದ್ಯಾರ್ಥಿಗಳಿದ್ದಾರೆ. ಅಂತಹ ಶಾಲೆಗಳಲ್ಲಿ ಒಮ್ಮೆಲೆ ಅಷ್ಟೂ ತರಗತಿಗಳಿಗೆ ಇಬ್ಬರು ಶಿಕ್ಷಕರು ಪಾಠ ಮಾಡಲು ಹೇಗೆ ಸಾಧ್ಯ ಎಂಬ ತಾರ್ಕಿಕ ಆಲೋಚನೆಯನ್ನು ಇಲಾಖೆ ಮಾಡಿದಂತಿಲ್ಲ.

ಏಕೋಪಾಧ್ಯಾಯ ಶಾಲೆಗಳನ್ನು ಮತ್ತೆ ಜಾರಿಗೆ ತರುವ ಉದ್ದೇಶ ಸರ್ಕಾರಕ್ಕೆ ಇದ್ದಂತಿದೆ. ಆದರೆ, ಏಕೋಪಧ್ಯಾಯ ಶಾಲೆಗಳಿಂದ ಗುಣಮಟ್ಟದ ಶಿಕ್ಷಣ ನಿರೀಕ್ಷಿಸಲಾಗದು. ಹೀಗಾಗಿ ಹೆಚ್ಚುವರಿ ಶಿಕ್ಷಕರ ಮರುನಿಯೋಜನೆಯನ್ನು ಕೈಬಿಡಬೇಕು’ ಎಂದು ಆಗ್ರಹಿಸುತ್ತಾರೆ ಶಿಕ್ಷಕ ಸಿ.ಗಂಗಾಧರ.

‘‘ಶಿಕ್ಷಕರು ಮತ್ತು ಪೋಷಕರ ವಿರೋಧದ ನಡುವೆಯೇ ‘ನಲಿ – ಕಲಿ’ ಹೆಸರಿನಲ್ಲಿ 1ರಿಂದ 3ನೇ ತರಗತಿ ವಿದ್ಯಾರ್ಥಿಗಳನ್ನು ಒಂದೇ ಕೋಣೆಯಲ್ಲಿ ಕೂಡಿ ಹಾಕುವ ವ್ಯವಸ್ಥೆ ಜಾರಿಗೆ ತರಲಾಗಿತ್ತು. ಈಗ ಶಿಕ್ಷಕರ ಮರು ನಿಯೋಜನೆ ಹೆಸರಿನಲ್ಲಿ 1ರಿಂದ 7ನೇ ತರಗತಿ ಮಕ್ಕಳನ್ನು ಒಂದೇ ಕೋಣೆಯಲ್ಲಿ ಬಂಧಿಸುವ ಕೆಲಸವನ್ನು ಶಿಕ್ಷಣ ಇಲಾಖೆ ಮಾಡಹೊರಟಿದೆ’’ ಎಂದು ದೂರುತ್ತಾರೆ.

ಮುಖ್ಯಾಂಶಗಳು
*ಶಿಕ್ಷಣ ಇಲಾಖೆ ನೂತನ ಸುತ್ತೋಲೆ
*ಮಕ್ಕಳ ಸಂಖ್ಯೆಗೆ ತಕ್ಕಂತೆ ಶಿಕ್ಷಕರ ನಿಯೋಜನೆ
*ಇಲಾಖೆ ಕ್ರಮ ಅವೈಜ್ಞಾನಿಕ: ಶಿಕ್ಷಕರ ದೂರು

*
ಸರ್ಕಾರ ಹೆಚ್ಚುವರಿ ಶಿಕ್ಷಕರ ಮರು ನಿಯೋಜನೆ ಪ್ರಕ್ರಿಯೆ ನಿಲ್ಲಿಸದಿದ್ದರೆ ಹೋರಾಟ ಆರಂಭಿಸಲಾಗುವುದು.
-ಚಂದ್ರಪ್ಪ,ಸಹಕಾರ್ಯದರ್ಶಿ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ

*
ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ  ಶಾಲೆಗಳಲ್ಲಿ ಬಹುವರ್ಗ ಬೋಧನೆ ನಡೆಯಲಿದೆ. ಶಿಕ್ಷಕರು ತಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಂಡರೆ ಸಮಸ್ಯೆ ಎದುರಾಗದು.
-ಎಚ್.ಎಂ.ಪ್ರೇಮಾ, ಡಿಡಿಪಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT