ಢಾಕಾ: ಬಾಂಗ್ಲಾದೇಶ ಕೇಂದ್ರ ಬ್ಯಾಂಕ್ ಗವರ್ನರ್ ಅಬ್ದುಲ್ ರೌಫ್ ತಲುಕ್ದೇರ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಅಬ್ದುಲ್ ಅವರು 'ವೈಯಕ್ತಿಕ ಕಾರಣ' ನೀಡಿ ಶುಕ್ರವಾರ ಹುದ್ದೆ ತೊರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅದರೆ, ಈ ಕುರಿತು ಕೇಂದ್ರ ಬ್ಯಾಂಕ್ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ವಿವಾದಿತ ಮೀಸಲಾತಿ ವಿರೋಧಿಸಿ ಆರಂಭವಾದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಆಕ್ರೋಶ ತೀವ್ರಗೊಳ್ಳುತ್ತಿದ್ದಂತೆ ಪ್ರಧಾನಿ ಹುದ್ದೆಗೆ (ಆಗಸ್ಟ್ 5 ರಂದು) ರಾಜೀನಾಮೆ ನೀಡಿ ದೇಶದಿಂದ ಪಲಾಯನಗೈದಿರುವ ಶೇಖ್ ಹಸೀನಾ, ಭಾರತದಲ್ಲಿ ಆಶ್ರಯ ಪಡೆದಿದ್ದಾರೆ.
ಈ ವಿದ್ಯಮಾನಗಳ ನಡುವೆ, ಪ್ರತಿಭಟನಾಕಾರರು ಬುಧವಾರ (ಆಗಸ್ಟ್ 7ರಂದು) ಕೇಂದ್ರ ಬ್ಯಾಂಕ್‌ನ ಪ್ರಧಾನ ಕಚೇರಿಗೆ ನುಗ್ಗಿ ಘೋಷಣೆಗಳನ್ನು ಕೂಗಿದ್ದರು. ಅಧಿಕಾರಿಗಳ ರಾಜೀನಾಮೆಗೆ ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ ಅಬ್ದುಲ್ ಅಧಿಕಾರದಿಂದ ಇಳಿದಿದ್ದಾರೆ.
ದೇಶವು ಕರೆನ್ಸಿ ಅಪಮೌಲ್ಯ ಹಾಗೂ ಹಣದುಬ್ಬರದಿಂದ ಸಂಕಷ್ಟ ಎದುರಿಸುತ್ತಿದ್ದ ಸಂದರ್ಭದಲ್ಲಿ (2022ರ ಜುಲೈನಲ್ಲಿ) ಕೇಂದ್ರ ಬ್ಯಾಂಕ್ ಜವಾಬ್ದಾರಿ ವಹಿಸಿಕೊಂಡಿದ್ದ ಅಬ್ದುಲ್ ಅವರ ಅಧಿಕಾರ ಅವಧಿ ಇನ್ನೂ ಎರಡು ವರ್ಷ ಇತ್ತು.
ಸದ್ಯ, ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಮೊಹಮ್ಮದ್ ಯೂನಸ್ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ರಚನೆಯಾಗಿದೆ. ಆದಾಗ್ಯೂ, ಪ್ರತಿಭಟನೆಯ ಕಿಚ್ಚು ತಣ್ಣಗಾಗಿಲ್ಲ. ಜುಲೈನಲ್ಲಿ ಆರಂಭವಾದ ಪ್ರತಿಭಟನೆಯಲ್ಲಿ ಇದುವರೆಗೆ 400ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.