ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತೀಸ್ತಾ ನದಿ ನೀರು ಹಂಚಿಕೆ: ಭಾರತದ ಜೊತೆ ಮಾತುಕತೆ ಪುನರಾರಂಭಕ್ಕೆ ಸಿದ್ಧ; ಬಾಂಗ್ಲಾ

Published 2 ಸೆಪ್ಟೆಂಬರ್ 2024, 11:33 IST
Last Updated 2 ಸೆಪ್ಟೆಂಬರ್ 2024, 11:33 IST
ಅಕ್ಷರ ಗಾತ್ರ

ಢಾಕಾ: ತೀಸ್ತಾ ನದಿ ನೀರು ಹಂಚಿಕೆ ಒಪ್ಪಂದಕ್ಕೆ ಸಂಬಂಧಿಸಿದಂತೆ ಭಾರತದ ಜತೆ ಮಾತುಕತೆ ಪುನರಾರಂಭಿಸಲು ಬಾಂಗ್ಲಾದೇಶ ಬಯಸಿದೆ ಎಂದು ಮಧ್ಯಂತರ ಸರ್ಕಾರದ ಜಲಸಂಪನ್ಮೂಲ ಸಲಹೆಗಾರರಾದ ಸಯೀದಾ ರಿಜ್ವಾನಾ ಹಸನ್‌ ಸೋಮವಾರ ಹೇಳಿದ್ದಾರೆ.

ತೀಸ್ತಾ ಒಪ್ಪಂದ ಮತ್ತು ನೀರು ಹಂಚಿಕೆಗೆ ಸಂಬಂಧಿಸಿದ ಇತರ ವಿವಾದಗಳನ್ನು ಮಾತುಕತೆಯ ಮೂಲಕ ಸೌಹಾರ್ದಯುತವಾಗಿ ಪರಿಹರಿಸಲಾಗುವುದು ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ಈ ವಿವಾದಗಳು ಮಾತುಕತೆಯ ಮೂಲಕ ಬಗೆಹರಿಯದಿದ್ದರೆ, ಬಾಂಗ್ಲಾದೇಶವು ಅಂತರರಾಷ್ಟ್ರೀಯ ಕಾನೂನುಗಳ ಮೊರೆ ಹೋಗಬಹುದು ಎಂದರು.

‘ತೀಸ್ತಾ ನದಿ ನೀರು ಹಂಚಿಕೆ ವಿಷಯದ ಬಗ್ಗೆ ನಾನು ಬಾಂಗ್ಲಾದಲ್ಲಿರುವ ಸಂಬಂಧಪಟ್ಟ ಎಲ್ಲ ಭಾಗೀದಾರರೊಂದಿಗೆ ಚರ್ಚಿಸಿದ್ದೇನೆ. ಈ ಕುರಿತ ಒಪ್ಪಂದ ಅಂತಿಮಗೊಳಿಸಲು ಮಾತುಕತೆ ಪುನರಾರಂಭಿಸಬೇಕೆಂಬ ತೀರ್ಮಾನಕ್ಕೆ ಬಂದಿದ್ದೇವೆ. ಗಂಗಾನದಿ ನೀರು ಹಂಚಿಕೆ ಕುರಿತ ಒಪ್ಪಂದದ ಅವಧಿ ಇನ್ನೆರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದ್ದು, ಆ ಬಗ್ಗೆಯೂ ನಾವು ಮಾತುಕತೆ ಆರಂಭಿಸಬೇಕಿದೆ’ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು. 

‘ಎರಡೂ ದೇಶಗಳ ಸಮ್ಮತಿಯ ಮೇರೆಗೆ ತೀಸ್ತಾ ನದಿ ನೀರು ಹಂಚಿಕೆ ಒಪ್ಪಂದ ಕರಡು ಸಿದ್ಧಪಡಿಸಲಾಗಿದೆ. ಆದರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ವಿರೋಧ ವ್ಯಕ್ತಪಡಿಸಿದ್ದರಿಂದ ಒಪ್ಪಂದವನ್ನು ಅಂತಿಮಗೊಳಿಸಿ, ಸಹಿ ಹಾಕಲು ಸಾಧ್ಯವಾಗಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ದರಿಂದ ಮಾತುಕತೆ ಎಲ್ಲಿ ನಿಂತಿದೆಯೋ, ಅಲ್ಲಿಂದ ಪುನರಾರಂಭಿಸಲು ಭಾರತವನ್ನು ಒತ್ತಾಯಿಸುತ್ತೇವೆ’ ಎಂದಿದ್ದಾರೆ.

2011ರಲ್ಲಿ ಅಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಢಾಕಾ ಭೇಟಿಯ ಸಂದರ್ಭದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಬೇಕಿತ್ತು. ಆದರೆ  ಬಂಗಾಳಕ್ಕೆ ನೀರಿನ ಕೊರತೆ ಕಾಡಬಹುದು ಎಂಬ ಕಾರಣ, ಮಮತಾ ಬ್ಯಾನರ್ಜಿ ಅವರು ಒಪ್ಪಂದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT