ಢಾಕಾ: ಮೊಹಮ್ಮದ್ ಯೂನಸ್ ಅವರು, ‘ಕಿರುಸಾಲ’ ಯೋಜನೆಯ ಹರಿಕಾರ. ಅವರು ಬಡವರಿಗಾಗಿ ಜಾರಿಗೆ ತಂದಿದ್ದ ‘ಗ್ರಾಮೀಣ ಬ್ಯಾಂಕ್’ ಚಳವಳಿ ಭಾರಿ ಯಶಸ್ಸು ಕಂಡಿತ್ತು. ಇದಕ್ಕಾಗಿ ಅವರಿಗೆ 2006ರಲ್ಲಿ ನೊಬೆಲ್ ಪುರಸ್ಕಾರ ಸಂದಿತ್ತು.
2008ರಲ್ಲಿ ಶೇಖ್ ಹಸೀನಾ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ, ನಿಯಮಗಳನ್ನು ಉಲ್ಲಂಘಿಸಿದ ಆರೋಪದಡಿ ಯೂನಸ್ ವಿರುದ್ಧ ವಿಚಾರಣೆ ನಡೆಸಲಾಯಿತು.
‘ಬಡವರ ರಕ್ತ ಹೀರುವಾತ’ ಎಂದು ಯೂನಸ್ ಅವರನ್ನು ನಿಂದಿಸುತ್ತಿದ್ದ ಹಸೀನಾ, ಸಾರ್ವಜನಿಕ ವೇದಿಕೆಗಳಲ್ಲಿ ನಿರಂತರವಾಗಿ ಅವರ ವಿರುದ್ಧ ಟೀಕಾಪ್ರಹಾರ ನಡೆಸುತ್ತಿದ್ದರು. ಅವರ ವಿರುದ್ಧ 100ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿತ್ತು.
ಅವರ ಪರಿಕಲ್ಪನೆ ಫಲವಾಗಿ ಸ್ಥಾಪನೆಗೊಂಡಿದ್ದ ‘ಗ್ರಾಮೀಣ ಬ್ಯಾಂಕ್’ಗಳ ಕಾರ್ಯನಿರ್ವಹಣೆ ಕುರಿತು 2011ರಲ್ಲಿ ಸರ್ಕಾರ ಪರಾಮರ್ಶೆ ಆರಂಭಿಸಿತು. ನಿವೃತ್ತಿ ನಿಯಮಗಳನ್ನು ಉಲ್ಲಂಘಿಸಿದ ಆರೋಪದಡಿ ಅವರನ್ನು ‘ಗ್ರಾಮೀಣ ಬ್ಯಾಂಕ್’ನ ಸಂಸ್ಥಾಪಕ ವ್ಯವಸ್ಥಾಪಕ ನಿರ್ದೇಶಕ ಸ್ಥಾನದಿಂದ ವಜಾಗೊಳಿಸಿತು.
ನಂತರ, ಕಾರ್ಮಿಕ ಕಾನೂನು ಉಲ್ಲಂಘಿಸಿದ್ದಕ್ಕಾಗಿ ನ್ಯಾಯಾಲಯವೊಂದು ಜನವರಿಯಲ್ಲಿ ಅವರಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ನಂತರ, ಅವರಿಗೆ ಜಾಮೀನು ನೀಡಲಾಗಿತ್ತು.
ಬಾಂಗ್ಲಾದೇಶದಲ್ಲಿನ, ಎದುರಾಳಿಗಳನ್ನು ದಮನಿಸುವ ರಾಜಕೀಯ ಸಂಸ್ಕೃತಿಯನ್ನು ಕೊನೆಗಾಣಿಸಲು ಪಣ ತೊಟ್ಟ ಯೂನಸ್, 2007ರಲ್ಲಿ ‘ಸಿಟಿಜನ್ ಪವರ್’ ಎಂಬ ಪಕ್ಷವನ್ನು ಸ್ಥಾಪಿಸಿದ್ದರು. ಕೆಲವೇ ತಿಂಗಳಲ್ಲಿ, ತಮ್ಮ ಮಹತ್ವಾಕಾಂಕ್ಷೆಗಳನ್ನು ತೊರೆದ ಅವರು, ಪಕ್ಷದ ಚಟುವಟಿಕೆಗಳಿಂದ ದೂರವಾದರು.
ಆದರೆ, ಆಡಳಿತಾರೂಢ ಪಕ್ಷವನ್ನು ಎದುರು ಹಾಕಿಕೊಂಡಿದ್ದರಿಂದ, ಅವರು ಸಂಕಷ್ಟ ಎದುರಿಸುವುದು ತಪ್ಪಲಿಲ್ಲ.