ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್ ಸಂಸತ್ತಿಗೆ ಭಾರತೀಯ ಮೂಲದ 15 ಮಂದಿ ಆಯ್ಕೆ; ಮತ್ತೊಮ್ಮೆ ಬೋರಿಸ್

ಬ್ರೆಕ್ಸಿಟ್‌ ಪರ ನಿಂತ ಬ್ರಿಟನ್‌ l ಲೇಬರ್‌ ಪಕ್ಷಕ್ಕೆ ಮುಖಭಂಗ
Last Updated 14 ಡಿಸೆಂಬರ್ 2019, 1:13 IST
ಅಕ್ಷರ ಗಾತ್ರ

ಲಂಡನ್‌: ಬ್ರಿಟನ್‌ನ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪಷ್ಟ ಬಹುಮತಗಳಿಸುವ ಮೂಲಕ, ಪ್ರಧಾನಿ ಬೋರಿಸ್‌ ಜಾನ್ಸನ್‌ ಮತ್ತೊಮ್ಮೆ ಅಧಿಕಾರಕ್ಕೆ ಮರಳಿದ್ದಾರೆ. ಇದರೊಂದಿಗೆ ದೇಶದಲ್ಲಿಮೂಡಿದ್ದ ರಾಜಕೀಯ ಅನಿಶ್ಚಿತತೆಗೂ ತೆರೆಬಿದ್ದಿದೆ.

ಸಂಸತ್ತಿನ ಒಟ್ಟು ಸದಸ್ಯ ಬಲ 650 ಆಗಿದ್ದು, 55 ವರ್ಷ ವಯಸ್ಸಿನ ಬೋರಿಸ್‌ ಜಾನ್ಸನ್‌ ನೇತೃತ್ವದ ಕನ್ಸರ್ವೇಟಿವ್‌ ಪಕ್ಷ 364 ಸ್ಥಾನಗಳನ್ನು ಗೆದ್ದುಕೊಂಡಿತು. ಕಳೆದ ಐದು ವರ್ಷಗಳಲ್ಲಿ ನಡೆದ ಮೂರನೇ ಸಾರ್ವತ್ರಿಕ ಚುನಾವಣೆ ಇದಾಗಿದೆ.

ರಾಜಕೀಯ ಅನಿಶ್ಚಿತತೆಯ ಕಾರಣಗಳಿಂದಾಗಿ ‘ಬ್ರೆಕ್ಸಿಟ್‌’ ಕುರಿತ ಜನಮತಗಣನೆ ಜಾರಿಗೆ ಸ್ಪಷ್ಟ ಜನಾದೇಶವನ್ನು ಪಡೆಯುವ ಉದ್ದೇಶದಿಂದಲೇ ಬೋರಿಸ್‌ ಜಾನ್ಸನ್ ಮತ್ತೆ ಚುನಾವಣೆಯನ್ನು ಎದುರಿಸುವ ತೀರ್ಮಾನವನ್ನು ಪ್ರಕಟಿಸಿದ್ದರು.

1980ರಲ್ಲಿ ಕನ್ಸರ್ವೇಟಿವ್‌ ಪಕ್ಷ ಮಾರ್ಗರೇಟ್ ಥ್ಯಾಚರ್‌ ನೇತೃತ್ವದಲ್ಲಿ ಸ್ಪಷ್ಟ ಬಹುಮತ ಗಳಿಸಿತ್ತು, ಆ ನಂತರ ಪಕ್ಷ ಈಗ ಎರಡನೇ ಬಾರಿಗೆ ಸ್ಪಷ್ಟ ಬಹುಮತಗಳಿಗೆ ಅಧಿಕಾರಕ್ಕೆ ಬಂದಿದೆ.

ಫಲಿತಾಂಶ ನಂತರದ ವಿಜಯೋತ್ಸವದಲ್ಲಿ ಮಾತನಾಡಿದ ಪ್ರಧಾನಿ, ‘ಬ್ರೆಕ್ಸಿಟ್‌ ಕುರಿತ ಅನಿಶ್ಚಿತತೆಗೆ ತೆರೆ ಎಳೆಯುವಲ್ಲಿ ಐತಿಹಾಸಿಕ ಚುನಾವಣಾ ಫಲಿತಾಂಶ ಹೊಸ ಬೆಳಕು. ಮತದಾರರು ಪಕ್ಷದ ಮೇಲಿಟ್ಟಿರುವ ವಿಶ್ವಾಸಕ್ಕೆ ಚ್ಯುತಿ ಉಂಟುಮಾಡುವುದಿಲ್ಲ’ ಎಂದುಹೇಳಿದರು.

‘ನಾವು ಸಾಧಿಸಿದ್ದೇವೆ. ರಾಜಕೀಯ ಅನಿಶ್ಚಿತತೆಗೆ ಅಂತ್ಯ ಹಾಡಿದ್ದೇವೆ. ಬ್ರೆಕ್ಸಿಟ್‌ನ ಅಡೆತಡೆ ದಾಟಿದ್ದೇವೆ’ ಎಂದು ಬೋರಿಸ್‌ ಜಾನ್ಸನ್‌ ನುಡಿದರು. ಸಂಭ್ರಮಾಚರಣೆ ವೇಳೆ ಗೆಳತಿ ಕ್ಯಾರಿ ಸೈಮಂಡ್ಸ್‌ ಜೊತೆಗಿದ್ದರು. ಪ್ರೀತಿಯ ಶ್ವಾನ ಡಿಲಿನ್‌ ಕೂಡಾ ಇತ್ತು.

ಭಾರತೀಯ ಮೂಲದ 15 ಮಂದಿ ಆಯ್ಕೆ

ಬ್ರಿಟನ್‌ ಸಂಸತ್ತಿಗೆ ಭಾರತೀಯ ಸಂಜಾತರಾದ 15 ಜನರು ಆಯ್ಕೆಯಾಗಿದ್ದು, ಇದೊಂದು ದಾಖಲೆಯಾಗಿದೆ.

ಆಡಳಿತರೂಢ ಕನ್ಸರ್ವೇಟಿವ್‌ ಮತ್ತು ಪ್ರತಿಪಕ್ಷ ಲೇಬರ್ ಪಕ್ಷದಿಂದ ತಲಾ ಏಳು ಮಂದಿ ಗೆದ್ದಿದ್ದಾರೆ. ಒಟ್ಟು 12 ಮಂದಿ ಪುನರಾಯ್ಕೆ ಆಗಿದ್ದಾರೆ. ಒಟ್ಟು 15 ಮಂದಿ ಆಯ್ಕೆಯಾಗಿದ್ದಾರೆ ಎಂದು ವರದಿ ತಿಳಿಸಿದೆ.

ಮಾಜಿ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್‌ ಸಹ ಆಯ್ಕೆಯಾಗಿದ್ದು, ಜಾನ್ಸನ್‌ ಅವರ ಸಂಪುಟದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.

ಸಂಸದ ವಿರೇಂದ್ರ ಶರ್ಮಾ ಅವರು ಸಹ ಜಯಗಳಿಸಿದ ಪ್ರಮುಖರು. ಕಳೆದ ಚುನಾವಣೆಯಲ್ಲಿ ಜಯಗಳಿಸಿದ್ದ ಮೊದಲ ಬ್ರಿಟಿಷ್‌ ಸಿಖ್‌ ಮಹಿಳೆ ಪ್ರೀತ್‌ ಕೌರ್‌ ಗಿಲ್‌ ಸಹ ಬರ್ಮಿಂಗ್‌ಹ್ಯಾಮ್‌ ಎಡ್ಗಬಾಸ್ಟನ್‌ನಲ್ಲಿ 21,217 ಮತಗಳನ್ನು ಪಡೆದು ಮರು ಆಯ್ಕೆಯಾಗಿದ್ದಾರೆ. ಈ ನಡುವೆ, ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಬೋರಿಸ್‌ ನೇತೃತ್ವದ ಪಕ್ಷ ವಿಜಯಿಯಾಗಿ ಹೊರಹೊಮ್ಮಿರುವುದಕ್ಕೆ ಇಲ್ಲಿ ನೆಲೆಸಿರುವ ಭಾರತೀಯ ಸಂಜಾತ ಸಮೂಹವು ಹರ್ಷ ವ್ಯಕ್ತಪಡಿಸಿದೆ.

‘ಇದು, ತುರುಸಿನ ಸ್ಪರ್ಧೆ ಕಂಡ ಚಳಿಗಾಲದಲ್ಲಿ ನಡೆದ ಚುನಾವಣೆಯಾಗಿತ್ತು. ನಮಗೆ ಬಹುಮತದ ಅಗತ್ಯವಿತ್ತು’ ಎಂದು ಪ್ರೀತಿ ಪಟೇಲ್‌ ಪ್ರತಿಕ್ರಿಯಿಸಿದರು.

ಲೇಬರ್ ಪಕ್ಷಕ್ಕೆ ಹಿನ್ನಡೆ

ಪ್ರತಿಪಕ್ಷ ಲೇಬರ್‌ ಪಕ್ಷ ಕೇವಲ 203 ಸ್ಥಾನಗಳನ್ನಷ್ಟೇ ಗೆಲ್ಲಲು ಸಾಧ್ಯವಾಗಿದೆ. ಪಕ್ಷದ ನಾಯಕ ಜೆರೆಮಿ ಕಾರ್ಬಿನ್‌ ರಾಜೀನಾಮೆ ಬಳಿಕ ಪಕ್ಷದ ಹಿನ್ನಡೆಯೂ ಆರಂಭವಾಗಿತ್ತು.

‘ಲೇಬರ್ ಪಾರ್ಟಿಗೆ ಇದು ಬೇಸರದ ಸಂಗತಿ. ಭವಿಷ್ಯದ ಸಾರ್ವತ್ರಿಕ ಚುನಾವಣೆಗಳಲ್ಲಿ ನಾನು ಪಕ್ಷ ಮುನ್ನಡೆಸುವುದಿಲ್ಲ’ ಎಂದು 70 ವರ್ಷ ವಯಸ್ಸಿನ, ಲಂಡನ್‌ನ ಲಿಂಗ್ಟನ್‌ ದಕ್ಷಿಣ ಕ್ಷೇತ್ರದಿಂದ ಜಯಗಳಿಸಿರುವ ಕಾರ್ಬಿನ್‌ ಪ್ರತಿಕ್ರಿಯಿಸಿದರು. ಕಾರ್ಬಿನ್‌ ನಾಯಕತ್ವ ಹಾಗೂ ಬ್ರೆಕ್ಸಿಟ್‌ ಕುರಿತಂತೆ ಅವರು ಸ್ಪಷ್ಟ ನಿಲುವು ತೆಗೆದುಕೊಳ್ಳದಿರುವುದೇ ಪಕ್ಷದ ಸೋಲಿಗೆ ಕಾರಣ ಎಂದು ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗಿದೆ.

ರಾಣಿ ಜೊತೆಗೆ ಭೇಟಿ, ಚರ್ಚೆ

ನೂತನ ಸರ್ಕಾರದ ರಚನೆ, ಕಾರ್ಯಾರಂಭ ಕುರಿತು ಪ್ರಧಾನಿ ಬಂಕಿಂಗ್‌ ಹ್ಯಾಂ ಅರಮನೆಯಲ್ಲಿ ರಾಣಿ ಎಲಿಜಬೆತ್ II ಅವರನ್ನು ಭೇಟಿಯಾಗಿ ಚರ್ಚಿಸಿದರು.

‘ಮಾತುಕತೆಗೆ ಸಿದ್ದ’

ಬ್ರೆಕ್ಸಿಟ್‌ ಕುರಿತು ಬ್ರಿಟನ್‌ ಪ್ರಧಾನಿ ಜತೆ ಮಾತುಕತೆಗೆ ಸಿದ್ಧ ಎಂದು ಐರೋಪ್ಯ ಒಕ್ಕೂಟ ಅಧ್ಯಕ್ಷ ಚಾರ್ಲ್ಸ್‌ ಮೈಕಲ್‌ ತಿಳಿಸಿದ್ದಾರೆ.

ಇಲ್ಲಿ ನಡೆಯುತ್ತಿರುವ ಐರೋಪ್ಯ ಒಕ್ಕೂಟದ ಶೃಂಗಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ‘ಬ್ರಿಟನ್‌ ಜತೆ ಸೌಹಾರ್ದಯುತ ವಾತಾವರಣದಲ್ಲಿ ಸಂಧಾನ ನಡೆಯಲಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT