ಬೆಂಗಳೂರು: ಇಟಲಿ ಕರಾವಳಿಯಲ್ಲಿ ವಿಹಾರ ನೌಕೆ ಮುಳುಗಿ ‘ಬ್ರಿಟಿಷ್ ಬಿಲ್ ಗೇಟ್ಸ್’ ಎಂದು ಖ್ಯಾತಿಯಾಗಿದ್ದ ಸಾಫ್ಟ್‌ವೇರ್ ಉದ್ಯಮಿ ಮೈಕ್ ಲೆಂಚ್ (Mike Lynch) ಅವರು ನಾಪತ್ತೆಯಾಗಿದ್ದಾರೆ.
ಶನಿವಾರ ಇಟಲಿಯ ಸಿಸಿಲಿ ಕರಾವಳಿಯಲ್ಲಿ ಭಾರಿ ಬಿರುಗಾಳಿಗೆ ಸಿಕ್ಕು ವಿಹಾರ ನೌಕೆ ಮುಳುಗಿತ್ತು. ನೌಕೆಯಲ್ಲಿ ಮೈಕ್ ಲೆಂಚ್, ಅವರ ಹೆಂಡತಿ ಹಾಗೂ ಮಗಳು ಸೇರಿದಂತೆ 22 ಜನ ಇದ್ದರು.
ಪತ್ತೆ ಕಾರ್ಯಾಚರಣೆ ನಡೆಯುತ್ತಿದ್ದು ಒಬ್ಬರ ಶವ ದೊರಕಿದೆ. ಆದರೆ, ಮೈಕ್ ಅವರು ಇನ್ನೂ ಪತ್ತೆಯಾಗಿಲ್ಲ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಹಡಗು ಬಿರುಗಾಳಿಗೆ ಸಿಕ್ಕ ಕೂಡಲೇ ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಣೆಗೆ ಧಾವಿಸಿ ಮೈಕ್ ಹೆಂಡತಿ ಸೇರಿದಂತೆ 15 ಜನರನ್ನು ರಕ್ಷಿಸಿದ್ದರು. ಮೈಕ್ ಹಾಗೂ ಅವರ ಮಗಳು ಸೇರಿದಂತೆ ಇನ್ನೂ ಆರು ಜನ ಪತ್ತೆಯಾಗಿಲ್ಲ.
ಐರ್ಲೆಂಡ್ ಮೂಲದ ಮೈಕ್, ಯು.ಕೆ ದೇಶದ ಬಿಲಿಯನೇರ್ ಉದ್ಯಮಿ. ಅವರು ಅಟೊನಾಮಿ ಸಾಫ್ಟ್‌ವೇರ್ ಕಂಪನಿ ಸಂಸ್ಥಾಪಕರು. ಪ್ರಕರಣವೊಂದರಲ್ಲಿ ಇತ್ತೀಚೆಗೆ ಯು.ಎಸ್ ಕೋರ್ಟ್‌ನಿಂದ ತಮ್ಮ ಪರವಾಗಿ ತೀರ್ಪು ಬಂದಿದ್ದಕ್ಕೆ ಮೈಕ್ ಹಾಗೂ ಅವರ ಸ್ನೇಹಿತರು ಐಷಾರಾಮಿ ಹಡಗಿನಲ್ಲಿ ಪಾರ್ಟಿ ಮಾಡುತ್ತಿದ್ದರು.