ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೈಕ್ಷಣಿಕ ವೀಸಾಗೆ ಮಿತಿ ಹೇರಿದ ಕೆನಡಾ: ಭಾರತೀಯ ವಿದ್ಯಾರ್ಥಿಗಳ ಮೇಲೆ ಪರಿಣಾಮ

Published 23 ಜನವರಿ 2024, 13:41 IST
Last Updated 23 ಜನವರಿ 2024, 13:41 IST
ಅಕ್ಷರ ಗಾತ್ರ

ಒಟ್ಟಾವಾ: ಹೊಸದಾಗಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ವೀಸಾ ನೀಡುವುದಕ್ಕೆ ಕೆನಡಾ ಸರ್ಕಾರ ತಕ್ಷಣದಿಂದ ಅನ್ವಯಿಸುವಂತೆ ಎರಡು ವರ್ಷಗಳ ಅವಧಿಗೆ ಮಿತಿಯನ್ನು ಹೇರಿದೆ.

ಆಂತರಿಕವಾಗಿ ಮೂಡಿರುವ ವಸತಿ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವುದು ಈ ಕ್ರಮದ ಉದ್ದೇಶವಾಗಿದೆ ಎಂದು ಸರ್ಕಾರ ಕಾರಣ ನೀಡಿದೆ. ಈ ಕ್ರಮ ಕೆನಡಾದಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಚಿಂತನೆ ನಡೆಸಿದ್ದ ಭಾರತೀಯ ವಿದ್ಯಾರ್ಥಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ.

ವಲಸಿಗರ ಖಾತೆ ಸಚಿವ ಮಾರ್ಕ್ ಮಿಲ್ಲರ್, ‘ಹೊಸ ನಿಯಮದ ಅನ್ವಯ 2024ರಲ್ಲಿ ವೀಸಾ ನೀಡುವುದರಲ್ಲಿ ಶೇ 35ರಷ್ಟು ಕಡಿತವಾಗಲಿದೆ. ಆ ಪ್ರಕಾರ, 2024ರಲ್ಲಿ ಹೊಸದಾಗಿ 3.64 ಲಕ್ಷ ವೀಸಾ ನೀಡಬಹುದಾಗಿದೆ. ಕಳೆದ ವರ್ಷ 5.60 ಲಕ್ಷ ವೀಸಾ ನೀಡಲಾಗಿತ್ತು’ ಎಂದು ತಿಳಿಸಿದರು.

ಉದ್ದೇಶಿತ ಮಿತಿಯು ಎರಡು ವರ್ಷ ಚಾಲ್ತಿಯಲ್ಲಿರಲಿದೆ. 2025ನೇ ಸಾಲಿನಲ್ಲಿ ಎಷ್ಟು ವೀಸಾ ನೀಡಬೇಕು ಎಂಬುದನ್ನು ಈ ವರ್ಷಾಂತ್ಯದಲ್ಲಿ ತೀರ್ಮಾನಿಸಲಾಗುವುದು ಎಂದು ಹೇಳಿದರು. 

ಕೆನಡಾದಲ್ಲಿ ತಾತ್ಕಾಲಿಕ ವಾಸದ ಅವಧಿ ಕುರಿತು ಸುಸ್ಥಿರತೆ ಕಾಯ್ದುಕೊಳ್ಳುವುದು, 2024ರಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಏರದಂತೆ ತಡೆಯುವುದು ಈ ಕ್ರಮದಲ್ಲಿ ಸೇರಿದೆ ಎಂಬ ಮಿಲ್ಲರ್‌ ಹೇಳಿಕೆ ಉಲ್ಲೇಖಿಸಿ ಸ್ಥಳೀಯ ‘ಗ್ಲೋಬಲ್‌ ನ್ಯೂಸ್’ ವರದಿ ಮಾಡಿದೆ.

ತಾತ್ಕಾಲಿಕ ಅವಧಿಯವರೆಗೆ ನೆಲಸುವವರ ಸಂಖ್ಯೆ ಏರಿಕೆಯಾಗುತ್ತಿದ್ದು, ವಸತಿ ಸಮಸ್ಯೆ ಹೆಚ್ಚುತ್ತಿದೆ. ಹೀಗಾಗಿ ಪ್ರಾಂತೀಯ ಒಕ್ಕೂಟ ಸರ್ಕಾರದ ಮೇಲೆ ತೀವ್ರ ಒತ್ತಡವಿದ್ದು, ಅದು ವಿದ್ಯಾರ್ಥಿಗಳ ವೀಸಾದ ಮೇಲೆ ಮಿತಿ ಹೇರಿದೆ.

2022ರಲ್ಲಿ 8 ಲಕ್ಷಕ್ಕೂ ಹೆಚ್ಚು ವಿದೇಶಿ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ಅಧ್ಯಯನ ವೀಸಾ ನೀಡಲಾಗಿತ್ತು. 2023ರಲ್ಲಿ ನೀಡಿರುವ ವೀಸಾಗಳ ಸಂಖ್ಯೆ 10 ವರ್ಷದ ಹಿಂದೆ ನೀಡಿದ್ದಕ್ಕಿಂತಲೂ ಮೂರು ಪಟ್ಟು ಏರಿಕೆಯಾಗಿದೆ ಎಂದು ಮಿಲ್ಲರ್‌ ವಿವರಿಸಿದ್ದಾರೆ.

ಕೆನಡಾದಲ್ಲಿ ಉನ್ನತ ಶಿಕ್ಷಣ ಪಡೆಯಲು 2022ರಲ್ಲಿ ಅಧ್ಯಯನ ಅನುಮತಿ ಹೊಂದಿದ್ದ ವಿದೇಶಿ ವಿದ್ಯಾರ್ಥಿಗಳ ಪೈಕಿ ಭಾರತ ಮೊದಲ ಸ್ಥಾನದಲ್ಲಿತ್ತು. ಆ ವರ್ಷ ಒಟ್ಟು 3.19 ಲಕ್ಷ ವಿದ್ಯಾರ್ಥಿಗಳು ಕೆನಡಾದಲ್ಲಿ ಶಿಕ್ಷಣ ಪಡೆಯಲು ತೆರಳಿದ್ದರು.

ಈ ಕ್ರಮವನ್ನೇ ನೆಪವಾಗಿಸಿಕೊಂಡು ವಿದೇಶಿ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ನೀಡುವ ವಿಷಯದಲ್ಲಿ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಅನುಚಿತ ನಡವಳಿಕೆ ತೋರುತ್ತಿವೆ. ಈ ವಿಷಯದಲ್ಲಿ ಕ್ರಮ ಜರುಗಿಸಲು ಕೂಡ ಕೆನಡಾ ಸರ್ಕಾರ ಮುಂದಾಗಿದೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT