ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಷಿಕಾಗೊ ನಗರ ಪರಿಷತ್‌ ಸಭೆಯಲ್ಲಿ ಸಿಎಎ ವಿರುದ್ಧದ ನಿರ್ಣಯ ತಿರಸ್ಕಾರ

Last Updated 25 ಮಾರ್ಚ್ 2021, 7:24 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಭಾರತದಲ್ಲಿನ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಮತ್ತು ಮಾನವ ಹಕ್ಕುಗಳ ಪರಿಸ್ಥಿತಿ ಕುರಿತು ಮಂಡಿಸಿದ ನಿರ್ಣಯದ ವಿರುದ್ಧ ಷಿಕಾಗೊ ನಗರ ಪರಿಷತ್‌ ಮತ ಚಲಾಯಿಸಿದೆ.

ನಗರ ಸ್ಥಳೀಯ ಸಂಸ್ಥೆಯಲ್ಲಿ ಇಂತಹ ವಿಷಯಗಳನ್ನು ಚರ್ಚಿಸಬಾರದು ಮತ್ತು ಈ ರೀತಿಯ ನಿರ್ಣಯಗಳನ್ನು ಸಭೆಯಲ್ಲಿ ಮಂಡಿಸಲು ಅವಕಾಶವನ್ನೇ ನೀಡಬಾರದು ಎಂದು ಸದಸ್ಯರು ಆಗ್ರಹಿಸಿದರು.

26–18 ಮತಗಳ ಮೂಲಕ ಈ ನಿರ್ಣಯವನ್ನು ತಿರಸ್ಕರಿಸಲಾಯಿತು.

‘ಪರಿಷತ್‌ನ ಹಲವು ಸದಸ್ಯರು ಈ ನಿರ್ಣಯದ ಪರ ಮತ ಚಲಾಯಿಸಲು ಮುಜಗರಕ್ಕೆ ಒಳಗಾದರು. ಭಾರತದಲ್ಲಿ ಏನು ನಡೆಯುತ್ತಿದೆ ಮತ್ತು ಈ ವಿಷಯದ ಆಳ–ಅಗಲ ನಮಗೆ ಗೊತ್ತಿಲ್ಲ’ ಎಂದು ಷಿಕಾಗೊ ಮೇಯರ್‌ ಲೊರಿ ಲೈಟ್‌ಫೂಟ್‌ ಸುದ್ದಿಗಾರರಿಗೆ ತಿಳಿಸಿದರು.

‘ಇಂತಹ ವಿಷಯಗಳ ಬಗ್ಗೆ ಸ್ಥಳೀಯ ಸಂಸ್ಥೆಗಳು ಹೇಳಿಕೆ ನೀಡುವುದಾಗಲಿ ಅಥವಾ ನಿರ್ಣಯ ಕೈಗೊಳುವ ಕಾರ್ಯ ಮಾಡಬಾರದು. ಈ ಬಗ್ಗೆ ಹೇಳಿಕೆ ನೀಡುವುದು ಬೈಡನ್‌ ಆಡಳಿತದ ವಿವೇಚನೆಯಾಗಿದೆ. ಈ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ಹಲವು ಸದಸ್ಯರಿಗೆ ಈ ವಿಷಯದ ಬಗ್ಗೆ ಪರಿಪೂರ್ಣ ಮಾಹಿತಿ ಇರಲಿಲ್ಲ’ ಎಂದು ಹೇಳಿದರು.

‘ಷಿಕಾಗೊ ನಗರಕ್ಕೆ ಸಂಬಂಧಿಸಿದ ಹಲವು ಪ್ರಮುಖ ವಿಷಯಗಳಿವೆ. ಹತ್ತಾರು ಸಮಸ್ಯೆಗಳಿವೆ. ಹೀಗಿರುವಾಗ, ಜೋ ಬೈಡನ್‌ ಆಡಳಿತ ಕೈಗೊಳ್ಳಬೇಕಾದ ನಿರ್ಧಾರಗಳ ಬಗ್ಗೆ ಇಲ್ಲಿ ಏಕೆ ಚರ್ಚಿಸಬೇಕು’ ಎಂದು ಹೇಳಿದರು. ಮೇಯರ್‌ ಮಾತಿಗೆ ಇತರ ಸದಸ್ಯರು ಸಹ ದನಿಗೂಡಿಸಿದ್ದಾರೆ.

‘ಈ ನಿರ್ಣಯವು ದ್ವೇಷದಿಂದ ಕೂಡಿದೆ. ಈ ನಿರ್ಣಯವನ್ನು ನಾನು ಬೆಂಬಲಿಸಿಲ್ಲ. ಭಾರತದ ಕಾನ್ಸುಲ್‌ ಜನರಲ್‌ ಸಹ ನನ್ನ ಜತೆ ಚರ್ಚಿಸಿದ್ದಾರೆ’ ಎಂದು ಸದಸ್ಯ ರೇಮಂಡ್‌ ಎ ಲೋಪೇಜ್‌ ತಿಳಿಸಿದ್ದಾರೆ.

‘ಭಾರತದ ಬಗ್ಗೆ ನಗರ ಪರಿಷತ್‌ನಲ್ಲಿ ಚರ್ಚಿಸುವುದಾದರೆ ಚೀನಾದಲ್ಲಿ ಉಯಿಘರ್ ಸಮುದಾಯದ ಸಾಮೂಹಿಕ ಹತ್ಯೆಯ ಬಗ್ಗೆಯೂ ಚರ್ಚೆ ಮಾಡಬೇಕಾಗುತ್ತದೆ. ಇದೇ ರೀತಿ, ಇಸ್ರೇಲ್‌–ಪ್ಯಾಲೆಸ್ಟೀನ್‌ ಸಂಘರ್ಷ ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ವಿಷಯಗಳಿವೆ’ ಎಂದು ಸದಸ್ಯ ಜಾರ್ಜ್‌ ಎ. ಕಾರ್ಡೆನಾಸ್‌ ಪ್ರತಿಪಾದಿಸಿದ್ದಾರೆ.

ಸದಸ್ಯರಾದ ಮರಿಯಾ ಹ್ಯಾಡೆನ್‌ ಈ ಬಗ್ಗೆ ನಿರ್ಣಯ ಮಂಡಿಸಿದ್ದರು. ‘ದಕ್ಷಿಣ ಏಷ್ಯಾದಲ್ಲಿ ನಡೆಯುತ್ತಿರುವ ಬೆಳವಣಿಗೆಯ ಬಗ್ಗೆ ಮಾಹಿತಿ ಪಡೆದು ಈ ನಿರ್ಣಯ ಮಂಡಿಸಲಾಗಿತ್ತು. ಬೇರೆ ದೇಶದಲ್ಲಿನ ಪ್ರಜಾಪ್ರಭುತ್ವದ ಆಡಳಿತ ಉತ್ತರದಾಯಿತ್ವದಿಂದ ಕೂಡಿರಬೇಕು’ ಎಂದು ಹ್ಯಾಡೆನ್‌ ಹೇಳಿದ್ದಾರೆ.

ಈ ನಿರ್ಣಯ ಮಂಡಿಸುವ ಮುನ್ನವೇ ಷಿಕಾಗೊದಲ್ಲಿನ ಭಾರತದ ಕಾನ್ಸುಲೇಟ್‌ ಕಚೇರಿ ಅಧಿಕಾರಿಗಳು ಮೇಯರ್‌ ಮತ್ತು ಇತರ ಎಲ್ಲ 50 ಸದಸ್ಯರ ಜತೆ ಚರ್ಚಿಸಿದ್ದರು. ಷಿಕಾಗೊ ನಗರ ಪರಿಷತ್ತಿನ ನಿರ್ಧಾರವನ್ನು ಭಾರತ–ಅಮೆರಿಕನ್‌ ಡಾ. ಭಾರತ ಬಾರೈ ಸ್ವಾಗತಿಸಿದ್ದಾರೆ.

‘ಈ ನಿರ್ಣಯದ ಹಿಂದೆ ಅಮೆರಿಕನ್‌ ಇಸ್ಲಾಮಿಕ್‌ ರಿಲೇಷನ್ಸ್‌ ಕೌನ್ಸಿಲ್‌ (ಸಿಎಐಆರ್‌) ಕೈವಾಡವಿದೆ. ಈ ಬಗ್ಗೆ ಪರಿಶೀಲನೆ ನಡೆಸಬೇಕು’ ಎಂದು ಹೇಳಿದ್ದಾರೆ.

‘ಭಾರತದ ಆಂತರಿಕ ರಾಜಕೀಯದಿಂದ ಸಿಎಐಆರ್‌ ದೂರವಿರಬೇಕು. ಈ ನಿರ್ಣಯ ದ್ವೇಷದ ಅಂಶಗಳನ್ನು ಒಳಗೊಂಡಿದೆ ಎಂದು ನಾವು ಎಲ್ಲ ಸದಸ್ಯರಿಗೂ ಮನವರಿಕೆ ಮಾಡಿದ್ದೇವೆ’ ಎಂದು ಭಾರತ–ಅಮೆರಿಕನ್‌ ಸಮುದಾಯದ ನಾಯಕ ಅಮಿತಾಭ್‌ ಮಿತ್ತಲ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT