ವಾಷಿಂಗ್ಟನ್: ಅಮೆರಿಕದ ಉಪಾಧ್ಯಕ್ಷೆ, ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿ ಕಮಲಾ ಹ್ಯಾರಿಸ್ ಮತ್ತು ಉಪಾಧ್ಯಕ್ಷ ಅಭ್ಯರ್ಥಿ ಟಿಮ್ ವಾಲ್ಜ್ ಅವರು ಗುರುವಾರ ಸಿಎನ್‌ಎನ್ ಸಂದರ್ಶನದಲ್ಲಿ ಭಾಗವಹಿಸಲಿದ್ದು, ಪತ್ರಕರ್ತರು ಸೇರಿದಂತೆ ರಿಪಬ್ಲಿಕನ್ ಪಕ್ಷದ ಬೆಂಬಲಿಗರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ವರದಿಯಾಗಿದೆ.
ಜಾರ್ಜಿಯಾದಲ್ಲಿ ಆ್ಯಂಕರ್ ಡಾನಾ ಬಾಷ್ ಅವರು ಸಂದರ್ಶನ ನಡೆಸಲಿದ್ದು, ಗುರುವಾರ ರಾತ್ರಿ 9 ಗಂಟೆಗೆ ಕಾರ್ಯಕ್ರಮ ಪ್ರಸಾರವಾಗಲಿದೆ ಎಂದು ಸಿಎನ್‌ಎನ್ ಪ್ರಕಟಣೆಯಲ್ಲಿ ತಿಳಿಸಿದೆ.
ಜುಲೈ ತಿಂಗಳಲ್ಲಿ ಜೋ ಬೈಡನ್ ಅವರು ಅಧ್ಯಕ್ಷ ಸ್ಥಾನಕ್ಕೆ ಪುನಾರಾಯ್ಕೆಯಿಂದ ಹಿಂದೆ ಸರಿದ ಬಳಿಕ ಡೆಮಾಕ್ರಟಿಕ್ ಪಕ್ಷದಿಂದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಆಯ್ಕೆಯಾಗಿದ ಕಮಲಾ ಹ್ಯಾರಿಸ್ ಭಾಗವಹಿಸುತ್ತಿರುವ ಮೊದಲ ಸಂದರ್ಶನ ಇದಾಗಿದೆ.
ಕಮಲಾ ಅವರು, ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ 78 ವರ್ಷದ ಡೊನಾಲ್ಡ್ ಟ್ರಂಪ್ ವಿರುದ್ಧ ನವೆಂಬರ್ 5ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸೆಣಸಲಿದ್ದಾರೆ.
ಈಚೆಗೆ ಷಿಕಾಗೊದಲ್ಲಿ ನಡೆದ ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಕಮಲಾ ಅವರು ಪಕ್ಷದ ಅಭ್ಯರ್ಥಿಯಾಗಿ ನಾಮನಿರ್ದೇಶನ ಸ್ವೀಕರಿಸಿದ್ದರು.