ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂವಾದದಲ್ಲಿ ಟ್ರಂಪ್ ಸುಳ್ಳು ಹೇಳಿದರೇ? ಕಮಲಾ ಪ್ರತಿಕ್ರಿಯೆ ಹೀಗಿತ್ತು...

Published : 11 ಸೆಪ್ಟೆಂಬರ್ 2024, 10:55 IST
Last Updated : 11 ಸೆಪ್ಟೆಂಬರ್ 2024, 10:55 IST
ಫಾಲೋ ಮಾಡಿ
Comments

ವಲಸಿ‌ಗರು ಸಾಕು ಪ್ರಾಣಿಗಳನ್ನು ತಿನ್ನುತ್ತಾರೆ. ಡೆಮಾಕ್ರೆಟ್‌ಗಳು ನವಜಾತ ಶಿಶುಗಳನ್ನು ಕೊಲ್ಲುವುದರ ಪರವಾ‌ಗಿ ಇದ್ದಾರೆ. ಕಮಲಾ ಹ್ಯಾರಿಸ್ ಅಧ್ಯಕ್ಷರಾದರೆ ಇಸ್ರೇಲ್‌ ಅಸ್ತಿತ್ವ‌ದಲ್ಲಿ ಇರುವುದಿಲ್ಲ...

ಹೀಗೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ ನಡೆದ ಸಂವಾದದಲ್ಲಿ ತಪ್ಪು ಹೇಳಿಕೆಗಳನ್ನು ನೀಡಿದ್ದಾರೆ. ಹಲವು ಬಾರಿ ಅವರ ಹೇಳಿಕೆಗಳು ನಿರ್ವಾಹಕರಿಂದ ತಿದ್ದುಪಡಿಗೂ ಒಳಗಾಯಿತು.

ಒಹಿಯೊದ ಸ್ಪ್ರಿಂಗ್‌ಫೀಲ್ಡ್‌ನಲ್ಲಿರುವ ಹಲವು ಹೈತಿಯನ್ ವಲಸಿಗರು ಸ್ಥಳೀಯರ ಸಾಕು ಪ್ರಾಣಿಗಳನ್ನು ಹಾಗೂ ಉದ್ಯಾನಗಳಲ್ಲಿರುವ ಪ್ರಾಣಿಗಳನ್ನು ಕೊಂದು ಆಹಾರಕ್ಕೆ ಬಳಸುತ್ತಾರೆ ಎನ್ನುವ ಟ್ರಂಪ್ ಅವರ ಆಧಾರ ರಹಿತ ಹೇಳಿಕೆ ಭಾರಿ ಚರ್ಚೆಗೆ ಗ್ರಾಸವಾಯಿತು.

‘ಅವರು ನಾಯಿಗಳನ್ನು ಭಕ್ಷಿಸುತ್ತಾರೆ. ವಲಸಿಗರು ಬೆಕ್ಕನ್ನು ತಿನ್ನುತ್ತಾರೆ. ಜನರು ಸಾಕುವ ‍ಪ್ರಾಣಿಗಳನ್ನು ಅವರು ತಿನ್ನುತ್ತಾರೆ’ ಎಂದು ಟ್ರಂಪ್‌ ಸಂವಾದದಲ್ಲಿ ಹೇಳಿದ್ದಾರೆ.

ಟ್ರಂಪ್ ಅವರ ಈ ಮಾತಿಗೆ ಕಮಲಾ ಹ್ಯಾರಿಸ್‌ ತಲೆ ಅಲ್ಲಾಡಿಸುತ್ತಾ ನಕ್ಕಿದ್ದಾರೆ. ‘ಸಾಕುಪ್ರಾಣಿಗಳನ್ನು ಕೊಲ್ಲುತ್ತಿರುವುದಕ್ಕೆ ಯಾವುದೇ ನಂಬಿಕಾರ್ಹ ಸಾಕ್ಷಿಗಳು ಇಲ್ಲ’ ಎಂದು ನಿರ್ವಾಹಕರು ತಿದ್ದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಟ್ರಂಪ್, ‘ಈ ಬಗ್ಗೆ ಜನರು ಟಿ.ವಿ. ಸಂದರ್ಶನದಲ್ಲಿ ಹೇಳಿದ್ದನ್ನು ನಾನು ಕೇಳಿದ್ದೇನೆ’ ಎಂದು ಹೇಳಿದ್ದಾರೆ.

‘ವಿದೇಶಗಳ ಜೈಲುಗಳಿಂದ ಹಾಗೂ ಮಾನಸಿಕ ಸಂಸ್ಥೆಗಳಿಂದ ಲಕ್ಷಾಂತರ ವಲಸಿಗರ ಪ್ರವಾಹವೇ ಅಮೆರಿಕಕ್ಕೆ ಹರಿಯುತ್ತಿದೆ. ಅವರು ನಮ್ಮ ನಗರಗಳಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದಾರೆ. ನಮ್ಮ ಕಟ್ಟಡಗಳನ್ನು ಸುಪರ್ದಿಗೆ ತೆಗೆದುಕೊಳ್ಳುತ್ತಿದ್ದಾರೆ. ಹಿಂಸಾಚಾರದಲ್ಲಿ ತೊಡಗಿದ್ದಾರೆ’ ಎಂದು ಟ್ರಂಪ್ ಆರೋಪಿಸಿದ್ದಾರೆ.

ಆದರೆ ಅಮೆರಿಕದ ನಗರಗಳಲ್ಲಿ ಈ ಥರದ ಯಾವುದೇ ಹಿಂಸಾತ್ಮಕ ಸ್ವಾಧೀನದ ವರದಿಯಾಗಿಲ್ಲ.

ಗರ್ಭ‍ಪಾತ, ಇಸ್ರೇಲ್ ಕುರಿತ ಟ್ರಂಪ್ ಹೇಳಿಕೆಯೂ ಸತ್ಯಕ್ಕೆ ದೂರವಾಗಿತ್ತು. ‘9ನೇ ತಿಂಗಳಿನಲ್ಲಿ ಗರ್ಭಪಾತ ಮಾಡಿಕೊಳ್ಳುವುದು ಸರಿ, ನವಜಾತ ಶಿಶುಗಳನ್ನು ಕೊಲೆ ಮಾಡುವುದರ ಪರವಾಗಿ ಅವರಿದ್ದಾರೆ’ ಎಂದು ಕಮಲಾ ಅವರ ಉಪಾಧ್ಯಕ್ಷ ಅಭ್ಯರ್ಥಿ ಟೀಮ್ ವಾಝ್ ಅವರನ್ನು ಕುರಿತು ಟ್ರಂಪ್ ಹೇಳಿದ್ದಾರೆ.

‘24 ರಿಂದ 28 ವಾರಗಳವರೆಗಿನ ಗರ್ಭಿಣಿಯರು ಗರ್ಭಪಾತ ಮಾಡಿಸಿಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪೇ ನಮ್ಮ ನಿಲುವು. ನಾವಿಬ್ಬರು ಮಕ್ಕಳ ಕೊಲೆಯ ಪರವಾಗಿಲ್ಲ’ ಎಂದು ಹ್ಯಾರಿಸ್ ತಿರುಗೇಟು ನೀಡಿದರು.

‘ಒಂದು ವೇಳೆ ಕಮಲಾ ಅಧ್ಯಕ್ಷರಾದರೆ ಇನ್ನು ಎರಡು ವರ್ಷಗಳಲ್ಲಿ ಇಸ್ರೇಲ್ ಇರುವುದಿಲ್ಲ. ಇಡಿ ಮಧ್ಯ‍‍‍ಪ್ರಾಚ್ಯ ಬೆಂಕಿಯ ಕುಲುಮೆಯಲ್ಲಿ ಬೆಂದು, ಇಸ್ರೇಲ್ ಅಳಿಸಿಹೋಗಲಿದೆ’ ಎಂದು ಟ್ರಂಪ್ ನಿರಾಧಾರವಾಗಿ ಹೇಳಿದರು.

ಟ್ರಂಪ್ ಅವರ ಈ ಆರೋಪವನ್ನು ಅಲ್ಲಗೆಳೆದ ಹ್ಯಾರಿಸ್, ‘ಈ ಹೇಳಿಕೆ ಸುಳ್ಳು. ನನ್ನ ರಾಜಕೀಯ ಜೀವನದುದ್ದಕ್ಕೂ ಇಸ್ರೇಲ್ ಪರವಾಗಿಯೇ ನಿಂತಿದ್ದೇನೆ’ ಎಂದಿದ್ದಾರೆ.

ಜಾಗತಿಕವಾಗಿ ಅಪರಾಧ ಪ್ರಕರಣಗಳು ಇಳಿಕೆಯಾದರೂ, ಅಮೆರಿಕದಲ್ಲಿ ಮಾತ್ರ ಏರಿಕೆಯಾಗುತ್ತಿದೆ ಎಂದು ಟ್ರಂಪ್ ಸಂವಾದದಲ್ಲಿ ಪ್ರಸ್ತಾಪಿಸಿದ ಆರೋಪಕ್ಕೆ ವ್ಯತಿರಿಕ್ತವಾಗಿ ದಾಖಲೆಗಳಿವೆ. 2023ರಲ್ಲಿ ಅಮೆರಿಕದಲ್ಲಿ ಅಪರಾಧ ಕೃತ್ಯಗಳು ಶೇ 13ರಷ್ಟು ಇಳಿಕೆಯಾಗಿವೆ ಎಂದು ಫೆಡರಲ್ ಬ್ಯೂರೊ ಅಫ್‌ ಇನ್ವೆಸ್ಟಿಗೇಷನ್‌ನ ದತ್ತಾಂಶಗಳಿಂದ ಗೊತ್ತಾಗಿದೆ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT