ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ ಉಗ್ರ ರಾಷ್ಟ್ರ: ಯುರೋಪ್‌ ಸಂಸತ್‌ ಘೋಷಣೆ

Last Updated 23 ನವೆಂಬರ್ 2022, 14:19 IST
ಅಕ್ಷರ ಗಾತ್ರ

ಸ್ಟ್ರಾಸ್‌ಬರ್ಗ್‌, ಫ್ರಾನ್ಸ್/ ಉಕ್ರೇನ್‌:ಉಕ್ರೇನ್ ಮೇಲಿನ ಯುದ್ಧದಲ್ಲಿ ರಷ್ಯಾ ಪಡೆಗಳು ದೌರ್ಜನ್ಯ ಎಸಗಿವೆ ಎಂದು ಆರೋಪಿಸಿರುವಯುರೋಪ್ ಒಕ್ಕೂಟದ ಸಂಸತ್‌, ಬುಧವಾರ ರಷ್ಯಾವನ್ನು ಭಯೋತ್ಪಾದಕ ದೇಶವೆಂದು ಘೋಷಿಸಿದೆ.

‘ರಷ್ಯಾವನ್ನು ಭಯೋತ್ಪಾದನೆ ಪ್ರಾಯೋಜಿಸುವ ಮತ್ತು ಭಯೋತ್ಪಾದನಾ ಕೃತ್ಯ ನಡೆಸುವ ರಾಷ್ಟ್ರವಾಗಿ ಪರಿಗಣಿಸಲಾಗಿದೆ’ ಎಂದು ಸಂಸತ್ತು ಹೇಳಿದೆ.

‘ಉಕ್ರೇನ್ ನಾಗರಿಕರ ಮೇಲಿನ ರಷ್ಯಾದ ಉದ್ದೇಶಪೂರ್ವಕ ದಾಳಿಗಳು ಮತ್ತು ದೌರ್ಜನ್ಯಗಳು, ನಾಗರಿಕ ಮೂಲಸೌಕರ್ಯಗಳ ನಾಶ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ಭಯೋತ್ಪಾದನೆಯ ಕೃತ್ಯಗಳಿಗೆ ಸಮನಾಗಿದೆ’ ಎಂದು ಸಂಸದರು ಅನುಮೋದಿಸಿದ ನಿರ್ಣಯ ತಿಳಿಸಿದೆ.

ಒಟ್ಟು 494 ಸಂಸದರ ಪೈಕಿ, 58 ಸಂಸದರು ಮಾತ್ರ ನಿರ್ಣಯ ವಿರೋಧಿಸಿದರು.ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರು ಯುರೋಪ್‌ ಒಕ್ಕೂಟದ ಸಂಸತ್‌ನಿರ್ಣಯವನ್ನು ಸ್ವಾಗತಿಸಿದ್ದಾರೆ.

ಯುರೋಪ್‌ ಒಕ್ಕೂಟದ ಸಂಸತ್ತಿನ ಸದಸ್ಯರ ಈ ಕ್ರಮವು ಯಾವುದೇ ಕಾನೂನು ಪರಿಣಾಮ ಬೀರದ ಸಾಂಕೇತಿಕವಾದ ರಾಜಕೀಯ ಹೆಜ್ಜೆಯಾಗಿದೆ. ಆದರೆ, ಯುರೋಪ್‌ ಸಂಸತ್‌ ಸದಸ್ಯರು (ಎಂಇಪಿ) ತಮ್ಮ ಈ ನಡೆಯನ್ನು27 ರಾಷ್ಟ್ರಗಳ ಯುರೋಪ್‌ ಒಕ್ಕೂಟದ ಸರ್ಕಾರಗಳು ಅನುಸರಿಸಬೇಕು, ಕಾನೂನು ಮಾನ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಕೀವ್‌ ಮೇಲೆ ದಾಳಿ: ನವಜಾತ ಶಿಶು ಬಲಿ

ಉಕ್ರೇನ್‌ ರಾಜಧಾನಿ ಕೀವ್‌ ನಗರದ ಇಂಧನ ಮೂಲಸೌಕರ್ಯಗಳ ಮೇಲೆ ರಷ್ಯಾ ಪಡೆಗಳ ಕ್ಷಿಪಣಿ ದಾಳಿ ಬುಧವಾರ ಕೂಡ ಮುಂದುವರಿಯಿತು. ದಕ್ಷಿಣ ಉಕ್ರೇನ್‌ನಝಪೊರಿಝಿಯಾ ಪ್ರದೇಶದ ವಿಲ್ನಿಯಾನ್‌ಸ್ಕ್‌ ಪಟ್ಟಣದ ಹೆರಿಗೆ ಆಸ್ಪತ್ರೆಗೆ ರಷ್ಯಾದ ಕ್ಷಿಪಣಿ ಅಪ್ಪಳಿಸಿ ನವಜಾತ ಶಿಶುವೊಂದು ಬಲಿಯಾಗಿದೆ. ಕೀವ್‌ ನಗರದಲ್ಲಿ ಮೂವರು ನಾಗರಿಕರು ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.

ಈ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ‘ರಷ್ಯಾ ಭಯೋತ್ಪಾದಕ ಮತ್ತು ಕೊಲೆಗಡುಕ ರಾಷ್ಟ್ರ’ ಎಂದು ಕಿಡಿಕಾರಿದ್ದಾರೆ.

ರಷ್ಯಾದ ವಾಯು ದಾಳಿಯ ನಂತರ ಇಡೀ ಕೀವ್‌ ಪ್ರದೇಶವು ಬುಧವಾರ ವಿದ್ಯುತ್ ಇಲ್ಲದೆ, ಕಗ್ಗತ್ತಲಿನಲ್ಲಿ ಮುಳುಗಿದೆ. ನಗರದಾದ್ಯಂತ ನೀರು ಪೂರೈಕೆ ಸ್ಥಗಿತಗೊಂಡಿದೆ ಎಂದು ಪ್ರಾದೇಶಿಕ ಸೇನಾ ಆಡಳಿತದ ಮುಖ್ಯಸ್ಥ ಒಲೆಕ್ಸಿ ಕುಲೆಬಾ ಮತ್ತುಕೀವ್‌ ಮೇಯರ್‌ ವಿಟಾಲಿ ಕ್ಲಿಚ್‌ಕೊ ತಿಳಿಸಿದ್ದಾರೆ.

ಲುವಿವ್‌ ನಗರದಲ್ಲೂ ಕ್ಷಿಪಣಿ ದಾಳಿಯಾಗಿದ್ದು, ವಿದ್ಯುತ್‌ ಪೂರೈಕೆ ಸ್ಥಗಿತವಾಗಿದೆ. ಹಾರ್ಕಿವ್‌ ನಗರದ ವಸತಿ ಕಟ್ಟಡಗಳು ಮತ್ತು ಕ್ಲೀನಿಕ್‌ ಮೇಲೆ ನಡೆದಿರುವ ಕ್ಷಿಪಣಿ ದಾಳಿಯಲ್ಲಿ ಇಬ್ಬರು ನಾಗರಿಕರು ಹತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT