ನ್ಯೂಯಾರ್ಕ್: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವ ಪಡೆಯಲು ಭಾರತ ನಡೆಸುತ್ತಿರುವ ಪ್ರಯತ್ನಕ್ಕೆ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರು ಬೆಂಬಲ ಸೂಚಿಸಿದ್ದಾರೆ.
ಅಮೆರಿಕದ ನ್ಯೂಯಾರ್ಕ್‌ನಲ್ಲಿ ಬುಧವಾರ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಮ್ಯಾಕ್ರನ್ ಅವರು ‘ಫ್ರಾನ್ಸ್, ಭದ್ರತಾ ಮಂಡಳಿಯ ವಿಸ್ತರಣೆಯ ಪರವಾಗಿದೆ. ಜರ್ಮನಿ, ಜಪಾನ್, ಭಾರತ ಹಾಗೂ ಬ್ರೆಜಿಲ್ ಕಾಯಂ ಸದಸ್ಯತ್ವ ಪಡೆಯಬೇಕು’ ಎಂದು ಹೇಳಿದರು.
ಅಲ್ಲದೇ ‘ಭದ್ರತಾ ಮಂಡಳಿಯ ಸುಧಾರಣೆಗಾಗಿ ಭಾರತವು ಪ್ರಯತ್ನಿಸುತ್ತಿದೆ. ಭದ್ರತಾ ಮಂಡಳಿಯ ಕಾಯಂ ಸದಸ್ಯನಾಗಲು ಭಾರತ ಅರ್ಹವಾಗಿದೆ. 1945ರಲ್ಲಿ ವಿಶ್ವಸಂಸ್ಥೆಯು ಸ್ಥಾಪನೆಯಾದಾಗಿನಿಂದ ಕೇವಲ 15 ರಾಷ್ಟ್ರಗಳು ಮಾತ್ರವೇ ಸದಸ್ಯತ್ವ ಪಡೆದಿವೆ. (5 ಕಾಯಂ ಮತ್ತು 10 ಕಾಯಂ ಅಲ್ಲದ ಸದಸ್ಯ ರಾಷ್ಟ್ರಗಳು) 21ನೇ ಶತಮಾನದಲ್ಲೂ ಇದೇ ರೀತಿ ಮುಂದುವರಿಯುವುದು ಸಮಂಜಸವಲ್ಲ. ಇದು ಸಮಕಾಲೀನ ಭೌಗೋಳಿಕ ಹಾಗೂ ರಾಜಕೀಯ ವಾಸ್ತವಗಳನ್ನು ಪ್ರತಿಬಿಂಬಿಸುವುದಿಲ್ಲ ಎಂದು ಭಾರತ ಪ್ರತಿಪಾದಿಸುತ್ತಿದೆ’ ಎಂದರು.
‘ಭದ್ರತಾ ಮಂಡಳಿಯು ನಿರ್ಬಂಧಿಸಲ್ಪಟ್ಟಿದೆ. ನಾವು ವಿಶ್ವಸಂಸ್ಥೆಯನ್ನು ಹೆಚ್ಚು ಪರಿಣಾಮಕಾರಿ ಹಾಗೂ ಪ್ರಾತಿನಿಧಿಕವನ್ನಾಗಿ ಮಾಡಬೇಕು’ ಎಂದೂ ಅವರು ಪ್ರತಿಪಾದಿಸಿದರು.