ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಡಾನ್‌ ಸಂಘರ್ಷ: 190 ಮಕ್ಕಳು ಸಾವು

Published 5 ಮೇ 2023, 11:47 IST
Last Updated 5 ಮೇ 2023, 11:47 IST
ಅಕ್ಷರ ಗಾತ್ರ

ಜಿನೀವಾ: ಸುಡಾನ್‌ನಲ್ಲಿ ಸೇನೆ ಮತ್ತು ಅರೆಸೇನಾ ಪಡೆಗಳ ನಡುವಣ ಸಂಘರ್ಷದಿಂದ ಮಕ್ಕಳ ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕಿದೆ ಎಂದು ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ.

ಅಧಿಕಾರಕ್ಕಾಗಿನ ಸಂಘರ್ಷ ಮಕ್ಕಳ ಬದುಕನ್ನು ಅಕ್ಷರಶಃ ಕಸಿದುಕೊಂಡಿದೆ. ಪ್ರತಿ ಒಂದು ಗಂಟೆ ಅವಧಿಯಲ್ಲಿ ಏಳು ಮಕ್ಕಳು ಮೃತಪಡುತ್ತಿದ್ದಾರೆ ಅಥವಾ ಗಾಯಗೊಳ್ಳುತ್ತಿರುವ ಬಗ್ಗೆ ವರದಿಯಾಗುತ್ತಿದೆ ಎಂದು ಯುನಿಸೆಫ್‌ನ ಮಕ್ಕಳ ವಿಭಾಗದ ವಕ್ತಾರ ಜೇಮ್ಸ್ ಎಲ್ಡರ್‌ ಕಳವಳ ವ್ಯಕ್ತಪಡಿಸಿದ್ದಾರೆ.

‘ಯುನಿಸೆಫ್‌ ಸ್ವಯಂಪ್ರೇರಿತವಾಗಿ ಸ್ಥಳ ಪರಿಶೀಲಿಸಿಲ್ಲ. ಆದರೆ, ವಿಶ್ವಸನೀಯ ಸಂಸ್ಥೆಗಳಿಂದ ಪಡೆದಿರುವ ಮಾಹಿತಿ ಅನ್ವಯ ಸಂಘರ್ಷ ಆರಂಭಗೊಂಡ ಏಪ್ರಿಲ್‌ 15ರಿಂದ 11 ದಿನಗಳ ಅವಧಿಯಲ್ಲಿ ಒಟ್ಟು 190 ಮಕ್ಕಳು ಅಸುನೀಗಿದ್ದು, 1,700 ಮಕ್ಕಳು ಗಾಯಗೊಂಡಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

ಖಾರ್ಟೂಮ್‌ ಮತ್ತು ಡಾರ್ಫರ್‌ ಪ್ರದೇಶದಲ್ಲಿ ಆರೋಗ್ಯ ಸೇವೆಗಾಗಿ ಜನರು ಆಸ್ಪತ್ರೆಗಳ ಮುಂಭಾಗ ಸಾಲುಗಟ್ಟಿರುವ ದೃಶ್ಯಗಳು ಸಾಮಾನ್ಯವಾಗಿವೆ. ಇದು ಆಘಾತಕಾರಿಯಾದ ಸಂಗತಿ ಎಂದಿದ್ದಾರೆ. 

ಸೇನೆಯ ಮುಖ್ಯಸ್ಥ ಜನರಲ್‌ ಅಬ್ದುಲ್‌ ಫತ್ತಾಹ್‌ ಅಲ್‌ ಬುಹ್ರಾನ್‌ ಹಾಗೂ ಅರೆಸೇನಾ ಪಡೆ ಮುಖ್ಯಸ್ಥ ಮೊಹಮ್ಮದ್‌ ಹಮದಾನ್‌ ದಾಗಲೊ ನಡುವಣ ಸಂಘರ್ಷ 21ನೇ ದಿನಕ್ಕೆ ಕಾಲಿಟ್ಟಿದೆ. ಶುಕ್ರವಾರವೂ ಗುಂಡಿನ ದಾಳಿ ಮುಂದುವರಿಯಿತು.

ನಿರಾಶ್ರಿತರಿಗೆ ಆಶ್ರಯ ನೀಡಿ: ಸುಡಾನ್‌ ನಿರಾಶ್ರಿತರ ಪ್ರವೇಶಕ್ಕೆ ಗಡಿಭಾಗದ ರಾಷ್ಟ್ರಗಳು ಅನುಮತಿ ನೀಡಬೇಕು ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿ ಕೋರಿದೆ.

ಪ್ರಜಾಸತ್ತಾತ್ಮಕ ನೆಲೆಗಟ್ಟಿನಲ್ಲಿ ಸುಡಾನ್‌ ಪ್ರಜೆಗಳಿಗೆ ಆಶ್ರಯ ಕಲ್ಪಿಸಬೇಕು. ಪಾಸ್‌ಪೋರ್ಟ್‌ ಅಥವಾ ದಾಖಲಾತಿ ಇಲ್ಲದ ಇತರ ದೇಶಗಳ ಪ್ರಜೆಗಳಿಗೆ ನೆಲೆ ನೀಡಬೇಕು ಎಂದು ಏಜೆನ್ಸಿ ಮುಖ್ಯಸ್ಥೆ ಎಲಿಜಬೆತ್‌ ಥಾನ್ ಕೋರಿದ್ದಾರೆ.

ಸಾವಿರಾರು ಸಂಖ್ಯೆಯಲ್ಲಿ ಸಂಘರ್ಷಕ್ಕೆ ತುತ್ತಾದ ಜನರು ದೇಶ ತೊರೆಯುತ್ತಿದ್ದಾರೆ. 1.13 ಲಕ್ಷ ಜನರು ನೆರೆಯ ದೇಶಗಳಿಗೆ ತೆರಳಿದ್ದಾರೆ. ಸುಮಾರು 8.60 ಲಕ್ಷ ಜನರು ಇದೇ ಹಾದಿಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT