ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಂಗ್ಲಾದಲ್ಲಿ ಬಿಕ್ಕಟ್ಟು l PM ಹಸೀನಾ ರಾಜೀನಾಮೆ: ಸೇನೆಯಿಂದ ಮಧ್ಯಂತರ ಸರ್ಕಾರ

Published : 6 ಆಗಸ್ಟ್ 2024, 0:31 IST
Last Updated : 6 ಆಗಸ್ಟ್ 2024, 0:31 IST
ಫಾಲೋ ಮಾಡಿ
Comments

ಢಾಕಾ : ಬಾಂಗ್ಲಾ ದೇಶದಲ್ಲಿ ಭಾರಿ ಹಿಂಸಾಚಾರ ನಡೆದ ಬೆನ್ನಲ್ಲೇ ಪ್ರಧಾನಿ ಶೇಖ್‌ ಹಸೀನಾ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ದೇಶ ತೊರೆದಿದ್ದಾರೆ. ಈ ಮೂಲಕ ಅವರ ಸತತ 15 ವರ್ಷಗಳ ಸುದೀರ್ಘ ಆಡಳಿತ ಅಂತ್ಯವಾಗಿದೆ. ಅದಾದ ಬಳಿಕ, ದೇಶದ ಸೇನೆ ‘ಮಧ್ಯಂತರ ಸರ್ಕಾರ’ ರಚಿಸುವುದಾಗಿ ಘೋಷಿಸಿದೆ.

ಹಸೀನಾ ಅವರು ತಮ್ಮ ತಂಗಿ ಶೇಖ್‌ ರೆಹಾನಾ ಅವರೊಂದಿಗೆ ಸೇನಾ ವಿಮಾನದ ಮೂಲಕ ದೇಶ ತೊರೆದ ಸುದ್ದಿ ಬಿತ್ತರವಾದ ಕೂಡಲೇ ಸಾವಿರಾರು ಸಂಖ್ಯೆಯ ಪ್ರತಿಭಟನಕಾರರು ಪ್ರಧಾನಿ ಅವರ ಅಧಿಕೃತ ನಿವಾಸಕ್ಕೆ ‘ಗಾನಾಭವನ್‌'ಗೆ ನುಗ್ಗಿ ಲೂಟಿ ಮಾಡಿದರು. ಮನೆಯ ಆವರಣದಲ್ಲಿದ್ದ ಶೇಖ್‌ ಮುಜಿಬುರ್‌ ರೆಹಮಾನ್‌ ಅವರ ಪ್ರತಿಮೆಯನ್ನು ಪುಡಿಗಟ್ಟಿದರು. 

ಧನ್ಮೋಂಡಿ ಮತ್ತು ಢಾಕಾದಲ್ಲಿನ ಅವಾಮಿ ಲೀಗ್‌ ಪಕ್ಷದ ಕಚೇರಿಗಳಿಗೂ ಬೆಂಕಿ ಹಚ್ಚುವ ಮೂಲಕ ಪ್ರತಿಭಟನ ಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸಾವಿನ ಸಂಖ್ಯೆ 156ಕ್ಕೆ ಏರಿಕೆ
ಬಾಂಗ್ಲಾದೇಶದ ಮೀಸಲು ನಿಯಮವನ್ನು ವಿರೋಧಿಸಿ ಮತ್ತು ಪ್ರಧಾನಿ ಶೇಖ್‌ ಹಸೀನಾ ಅವರ ರಾಜೀನಾಮೆಗೆ ಆಗ್ರಹಿಸಿ ದೇಶದಾದ್ಯಂತ ಸೋಮವಾರವು ಪ್ರತಿಭಟನೆ ಮುಂದುವರಿದಿದ್ದು, 56 ಜನರು ಮೃತಪಟ್ಟಿದ್ದಾರೆ. ಇದರಿಂದ ಎರಡು ದಿನಗಳಿಂದ ನಡೆಯುತ್ತಿರುವ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 156ಕ್ಕೆ ಏರಿಕೆಯಾಗಿದೆ. l ಭಾರತ– ಬಾಂಗ್ಲಾದೇಶದ ಗಡಿಯುದ್ದಕ್ಕೂ (4,096 ಕಿ.ಮೀ) ಬಿಎಸ್‌ಎಫ್‌ ‘ಹೈ ಅಲರ್ಟ್‌’ ಘೋಷಿಸಿದೆ. l‘ಕೋಲ್ಕತ್ತ–ಢಾಕಾ–ಕೋಲ್ಕತ್ತ’ ಮೈತ್ರಿ ಎಕ್ಸ್‌ಪ್ರೆಸ್‌ನ ಮಂಗಳವಾರದ ಸಂಚಾರವನ್ನು ಭಾರತ ಸರ್ಕಾರ ರದ್ದುಗೊಳಿಸಿದೆ.

ಅಲ್ಲದೆ ಢಾಕಾದಲ್ಲಿನ ಗೃಹ ಸಚಿವ ಅಸದುಜ್ಜಮಾನ್‌ ಖಾನ್‌ ಕಮಾಲ್‌ ನಿವಾಸದ ಮೇಲೂ ದಾಳಿ ನಡೆಸಿದ ಪ್ರತಿಭಟನಕಾರರು, ಬೆಂಕಿ ಹಚ್ಚಿ ಧ್ವಂಸಗೊಳಿಸಿದರು. ಸೋಮವಾರ ಸಂಭವಿಸಿದ ಹಿಂಸಾಚಾರದಲ್ಲಿ 56 ಮಂದಿ ಮೃತಪಟ್ಟಿದ್ದಾರೆ.

ದೇಶ ತೊರೆದ ಹಸೀನಾ: 
ಆಶ್ರಯ ಬಯಸಿ ಲಂಡನ್‌ ಅಥವಾ ಫಿನ್ಲೆಂಡ್‌ಗೆ ತೆರಳಲು ಉದ್ದೇಶಿಸಿರುವ ಶೇಖ್‌ ಹಸೀನಾ ಅವರು ಬಾಂಗ್ಲಾದೇಶದ ವಾಯುಪಡೆಯ ಸಿ–130ಜೆ ವಿಮಾನದ ಮೂಲಕ ಭಾರತದ ಗಾಜಿಯಾಬಾದ್‌ ಬಳಿಯ ಹಿಂಡನ್‌ ವಾಯುನೆಲೆಗೆ (ನವದೆಹಲಿ ಸಮೀಪದ) ಬಂದಿಳಿದರು ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ. ಭಾರತದಲ್ಲಿ ಎಷ್ಟು ದಿನ ಇರುತ್ತಾರೆ ಎಂಬುದು ಖಚಿತವಾಗಿಲ್ಲ.

ದೆಹಲಿಯಲ್ಲಿ ನೆಲೆಸಿರುವ ತಮ್ಮ ಮಗಳು ಸೈಮಾ ವಾಝೆದ್‌ ಅವರನ್ನು ಹಸೀನಾ ಭೇಟಿಯಾಗುವ ಸಾಧ್ಯತೆ ಇದೆ. ವಾಝೆದ್‌ ಅವರು ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ಭಾಗದ ಪ್ರಾದೇಶಿಕ ನಿರ್ದೇಶಕರಾಗಿದ್ದಾರೆ.

ಢಾಕಾದ ಕೋರಿಕೆಯ ಮೇರೆಗೆ ಹಸೀನಾ ಅವರ ವಿಮಾನಕ್ಕೆ ಭಾರತೀಯ ವಾಯು ಪ್ರದೇಶದ ಮೂಲಕ ಸುರಕ್ಷಿತ ಮಾರ್ಗ ಒದಗಿಸಲು ಭಾರತ ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ. ಇದರ ನಡುವೆ, ಢಾಕಾದಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ತಿಳಿಸಿವೆ.

ಸೇನೆಯಿಂದ ಮಧ್ಯಂತರ ಸರ್ಕಾರ:
ಈ ಬೆಳವಣಿಗೆಗಳ ಹಿಂದೆಯೇ ದೇಶವನ್ನು ಉದ್ದೇಶಿಸಿ ಮಾತನಾಡಿದ ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ವಕಾರ್‌–ಉಝ್‌–ಝಮಾನ್‌, ‘ಪ್ರಧಾನಿ ಶೇಖ್‌ ಹಸೀನಾ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಸೇನೆ ಮಧ್ಯಂತರ ಸರ್ಕಾರ ರಚಿಸಲಿದೆ. ನಾನು ದೇಶದ ಎಲ್ಲ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿದ್ದೇನೆ. ಅದಕ್ಕೆ ಸಹಕರಿಸಿ’ ಎಂದು ಪ್ರಕಟಿಸಿದರು.

‘ದೇಶದ ರಾಜಕೀಯ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗಿದೆ. ದೇಶದ ಕಾನೂನು ಮತ್ತು ಸುವ್ಯವಸ್ಥೆಯ ಜವಾಬ್ದಾರಿಯನ್ನು ಸೇನೆ ವಹಿಸಿಕೊಳ್ಳುತ್ತದೆ ಎಂಬುದನ್ನು ಅವರಿಗೆ ತಿಳಿಸಲಾಗಿದೆ. ಪ್ರತಿಭಟನೆ ನಡೆಸುತ್ತಿರುವವರ ಮೇಲೆ ಗುಂಡಿನ ದಾಳಿ ನಡೆಸದಂತೆ ಸೇನೆ ಮತ್ತು ಪೊಲೀಸರಿಗೆ ಸೂಚಿಸಲಾಗಿದೆ’ ಎಂದು ಹೇಳಿದರು.

ಹಸೀನಾ ರಾಜೀನಾಮೆ ಕುರಿತು ವಕಾರ್‌ ಘೋಷಿಸಿದ ಬಳಿಕ, ಜನರು ವಿಜಯೋತ್ಸವ ಆಚರಿಸಿ, ಸಂಭ್ರಮಿಸಿದರು.

1971ರ ಬಾಂಗ್ಲಾ ವಿಮೋಚನಾ ಹೋರಾಟದಲ್ಲಿ ಭಾಗಿಯಾಗಿದ್ದ ಯೋಧರ ಕುಟುಂಬದವರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇ 30ರಷ್ಟು ಮೀಸಲಾತಿ ಒದಗಿಸುವ ನೀತಿಯನ್ನು ವಿರೋಧಿಸಿ ಮತ್ತು ಹಸೀನಾ ಅವರ ರಾಜೀನಾಮೆಗೆ ಒತ್ತಾಯಿಸಿ ದೇಶದಾದ್ಯಂತ ಕೆಲ ದಿನಗಳಿಂದ ಭಾರಿ ಪ್ರತಿಭಟನೆಗಳು ನಡೆಯುತ್ತಿವೆ. 

76 ವರ್ಷದ ಶೇಖ್‌ ಹಸೀನಾ ಬಾಂಗ್ಲಾದೇಶದ ಸಂಸ್ಥಾಪಕ ಶೇಖ್‌ ಮುಜಿಬರ್‌ ರೆಹಮಾನ್‌ ಅವರ ಮಗಳು. 2009ರಿಂದ ನಿರಂತರವಾಗಿ ಅಧಿಕಾರದಲ್ಲಿ ದ್ದರು. ಜನವರಿಯಲ್ಲಿ ನಡೆದ 12ನೇ ಚುನಾವಣೆಯಲ್ಲಿ ಸತತ ನಾಲ್ಕನೇ ಬಾರಿ ಮತ್ತು ಒಟ್ಟಾರೆ ಐದನೇ ಅವಧಿಗೆ ಆಯ್ಕೆಯಾಗಿದ್ದರು.

ಪ್ರತಿಭಟನಕಾರರು ಹಮ್ಮಿಕೊಂಡಿರುವ ‘ಢಾಕಾದೆಡೆಗೆ ನಡಿಗೆ’ಯಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ರಸ್ತೆಗಿಳಿದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಕಾರರು ರಾಜಧಾನಿಯ ರಸ್ತೆಗಳಲ್ಲಿ ಜಮಾಯಿಸುತ್ತಿದ್ದಂತೆಯೇ ಪೊಲೀಸರು ಮತ್ತು ಯೋಧರು ಅವರನ್ನು ಚದುರಿಸಲು ಅಶ್ರುವಾಯು ಶೆಲ್‌ ದಾಳಿ ನಡೆಸಿದರು. 

ಜತ್ರಾಬರಿ ಮತ್ತು ಢಾಕಾ ವೈದ್ಯಕೀಯ ಕಾಲೇಜು ಪ್ರದೇಶಗಳಲ್ಲಿ ಪ್ರತಿಭಟನಕಾರರು ಮತ್ತು ಪೊಲೀಸರ ನಡುವೆ ನಡೆದ ಘರ್ಷಣೆಯಲ್ಲಿ ಕನಿಷ್ಠ ಆರು ಮಂದಿ ಮೃತಪಟ್ಟರು ಎಂದು ಡೈಲಿ ಸ್ಟಾರ್‌ ವರದಿ ಮಾಡಿದೆ. ಅಲ್ಲದೆ ವಿವಿಧೆಡೆ ನಡೆದ ಘರ್ಷಣೆಯಲ್ಲಿ 50ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಢಾಕಾದೆಡೆಗಿನ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಪ್ರತಿಭಟನಕಾರರು ದೇಶದ ಸಾರ್ವಜನಿಕರಲ್ಲಿ ಕೋರಿದ್ದ ಬೆನ್ನಲ್ಲೇ ಬಾಂಗ್ಲಾದೇಶ ಸರ್ಕಾರವು ದೇಶದಾದ್ಯಂತ ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಿ ಆದೇಶಿಸಿತ್ತು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ, ಸೋಮವಾರ ಮಧ್ಯಾಹ್ನ 1.15ರ ಬಳಿಕ ದೇಶದಲ್ಲಿ ಇಂಟರ್‌ನೆಟ್‌ ಬ್ರಾಡ್‌ಬ್ಯಾಂಡ್‌ ಸೇವೆ ಆರಂಭಿಸಲು ಮೌಖಿಕ ಆದೇಶ ಹೊರಡಿಸಿತ್ತು.

ವಕಾರ್‌ಗೆ 4 ದಶಕದ ಅನುಭವ
ನಾಲ್ಕು ದಶಕ ಸೇನೆಯಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿರುವ ವಕಾರ್‌–ಉಝ್‌–ಝಮಾನ್‌ (58) ಅವರು ಜೂನ್‌ನಲ್ಲಿ ಬಾಂಗ್ಲಾದೇಶದ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅವರು ವಿಶ್ವಸಂಸ್ಥೆಯ ಶಾಂತಿಪಡೆಯಲ್ಲೂ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಬಾಂಗ್ಲಾದೇಶದ ರಾಷ್ಟ್ರೀಯ ವಿಶ್ವವಿದ್ಯಾಲಯ ಮತ್ತು ಲಂಡನ್‌ ವಿಶ್ವವಿದ್ಯಾಲಯದ ಕಿಂಗ್ಸ್‌ ಕಾಲೇಜಿನಲ್ಲಿ ರಕ್ಷಣಾ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಅವರು ಪಡೆದಿದ್ದಾರೆ.  ಸೇನೆಯನ್ನು ಆಧುನೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ಅವರಿಗೆ ‘ಆರ್ಮಿ ಮೆಡಲ್‌ ಆಫ್‌ ಗ್ಲೋರಿ’ ಮತ್ತು ‘ಎಕ್ಸ್‌ಟ್ರಾ ಆರ್ಡಿನರಿ ಸರ್ವೀಸ್‌ ಮೆಡಲ್‌’ ಸಂದಿವೆ. ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಹೊಂದಿರುವ ಅವರು ಶೇಖ್‌ ಹಸೀನಾ ಅವರ ದೂರದ ಸಂಬಂಧಿಯೂ ಹೌದು. ಹಸೀನಾ ಅವರು 1996–2001ರವರೆಗೆ ಮೊದಲ ಬಾರಿ ಪ್ರಧಾನಿಯಾಗಿದ್ದ ಅವಧಿಯಲ್ಲಿ, ವಕಾರ್‌ ಅವರ ಮಾವ ಸೇನೆಯ ಮುಖ್ಯಸ್ಥರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT