ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇಸ್ರೇಲ್‌ –ಹಮಾಸ್‌ ನಡುವೆ ತೀವ್ರಗೊಂಡ ಕದನ

ಖಾನ್‌ ಯೂನಿಸ್‌: ಇಸ್ರೇಲ್‌ ಪಡೆಗಳ ಭೂ ಕಾರ್ಯಾಚರಣೆ ಚುರುಕು
Published 6 ಡಿಸೆಂಬರ್ 2023, 15:02 IST
Last Updated 6 ಡಿಸೆಂಬರ್ 2023, 15:02 IST
ಅಕ್ಷರ ಗಾತ್ರ

ಡೇರ್ ಅಲ್ ಬಾಲಾಹ್ (ಗಾಜಾ ಪಟ್ಟಿ): ಹಮಾಸ್‌ ಬಂಡುಕೋರರ ವಿರುದ್ಧದ ಕಾರ್ಯಾಚರಣೆಯನ್ನು ಇಸ್ರೇಲ್‌ನ ಪಡೆಗಳು ಬುಧವಾರ ಗಾಜಾದಾದ್ಯಂತ ತೀವ್ರಗೊಳಿಸಿವೆ.

ಗಾಜಾದ ಎರಡನೇ ಅತಿ ದೊಡ್ಡ ನಗರವಾದ ಖಾನ್‌ ಯೂನಿಸ್‌ನಲ್ಲಿ ಭೂ ಕಾರ್ಯಾಚರಣೆಯನ್ನೂ  ಚುರುಕುಗೊಳಿಸಿವೆ. ದಕ್ಷಿಣ ಗಾಜಾದ ಮೇಲೆ ದಾಳಿ ತೀವ್ರಗೊಳ್ಳುತ್ತಿದ್ದಂತೆ ಅಲ್ಲಿನ ನಾಗರಿಕರು ಕರಾವಳಿ ಪ್ರದೇಶಗಳತ್ತ ತೆರಳುತ್ತಿದ್ದಾರೆ.  18 ಲಕ್ಷಕ್ಕೂ ಹೆಚ್ಚು ಜನರು ಈ ಪ್ರದೇಶಕ್ಕೆ ಈಗಾಗಲೇ ಸ್ಥಳಾಂತರಗೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.

ದಕ್ಷಿಣ ಗಾಜಾ ಪಟ್ಟಿಯ ಖಾನ್‌ ಯೂನಿಸ್‌ ನಗರದ ಹೃದಯಭಾಗಕ್ಕೆ ತಲುಪಿದ್ದೇವೆ. ಭೂ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ ಎಂದು ಇಸ್ರೇಲ್‌ನ ಸಶಸ್ತ್ರ ಪಡೆಗಳು ತಿಳಿಸಿವೆ. ಉತ್ತರ ಗಾಜಾದಲ್ಲೂ ಹಮಾಸ್‌ ಬಂಡುಕೋರರು ಮತ್ತು ಇಸ್ರೇಲ್‌ ಪಡೆಗಳ ನಡುವೆ ಭಾರಿ ಯುದ್ಧ ನಡೆಯುತ್ತಿದೆ.

ಮೂರು ದಿವಸಗಳಿಂದ ರಫಾ ನಗರದ ಸುತ್ತಮುತ್ತಲಿನ ಪ್ರದೇಶಕ್ಕೆ ಮಾತ್ರ ಆಹಾರ, ನೀರು ಸರಬರಾಜು ಮಾಡಲು ಸಾಧ್ಯವಾಗಿದೆ. ಇಸ್ರೇಲ್‌ ಪಡೆಗಳು ವಾಹನ ಸಂಚಾರಕ್ಕೆ ತಡೆಯುಂಟು ಮಾಡಿರುವುದರಿಂದ ಬೇರೆಡೆಗೆ ನೆರವು ತಲುಪಿಸಲು ಸಾಧ್ಯವಾಗಿಲ್ಲ ಎಂದು ವಿಶ್ವಸಂಸ್ಥೆಯ ಮೂಲಗಳು ತಿಳಿಸಿವೆ.

ಡೇರ್ ಅಲ್ ಬಾಲಾಹ್ ನಗರದ ಅಲ್–ಅಕ್ಸಾ ಆಸ್ಪತ್ರೆಗೆ ಔಷಧ ಹಾಗೂ ಇತರ ಅಗತ್ಯ ವಸ್ತುಗಳನ್ನು ತಲುಪಿಸಲು ಹರಸಾಹಸ ಪಡಬೇಕಾಗಿದೆ. ಡಿಸೆಂಬರ್‌ 1ರಿಂದ ಈ ಆಸ್ಪತ್ರೆಗೆ ಪ್ರತಿ ದಿನ 200ಕ್ಕೂ ಹೆಚ್ಚು ಗಾಯಾಳುಗಳು ದಾಖಲಾಗುತ್ತಿದ್ದಾರೆ‌ ಎಂದು ತುರ್ತು ಸೇವೆಗಳ ಸಂಯೋಜಕಿ ಮೇರಿ ಔರೆ ಹೇಳಿದ್ದಾರೆ.

‘ಗಾಜಾದಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿರುವ ಕಾರಣ ಜೀವರಕ್ಷಕ ಉಪಕರಣಗಳು ಕಾರ್ಯನಿರ್ವಹಿಸುತ್ತಿಲ್ಲ. ರಕ್ತದಾನ ಕೂಡ ನಿಂತಿದೆ’ ಎಂದಿದ್ದಾರೆ. 

‘ಶಿಕ್ಷಣ ಸಂಸ್ಥೆಗಳ ಉಳಿವು ಅಗತ್ಯ’

ದೋಹಾ (ಕತಾರ್‌): ಗಾಜಾ ಮತ್ತು ಉಕ್ರೇನ್‌ನಲ್ಲಿ ಹಲವು ಶಾಲೆಗಳು ವಿಶ್ವವಿದ್ಯಾಲಯಗಳು ನಾಮಾವಶೇಷಗೊಂಡಿದ್ದು ಯುದ್ಧದ ಪರಿಣಾಮ‌ವನ್ನು ತಗ್ಗಿಸಲು ಶಿಕ್ಷಣ ಸಂಸ್ಥೆಗಳನ್ನು ಉಳಿಸುವ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ತಲೆಮಾರುಗಳು ಸಂಘರ್ಷಗಳಿಂದ ದೂರ ಉಳಿಯಬೇಕಾದರೆ ಅ‌ವರಿಗೆ ಶಿಕ್ಷಣ ಅಗತ್ಯ ಎಂದು ಇಲ್ಲಿ ಈಚೆಗೆ ನಡೆದ ವರ್ಲ್ಡ್‌ ಇನ್ನೋವೇಶನ್‌ ಸಮ್ಮಿಟ್‌ ಫಾರ್‌ ಎಜುಕೇಶನ್‌ನಲ್ಲಿ  (ಡಬ್ಲ್ಯುಐಎಸ್‌ಇ) ತಜ್ಞರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT