ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇಸ್ರೇಲ್ ಮೇಲೆ ಹಿಜ್ಬುಲ್ಲಾ ಡ್ರೋನ್ ದಾಳಿ: ಲೆಬನಾನ್ ಮೇಲೆ ಇಸ್ರೇಲ್ ಪ್ರತಿ ದಾಳಿ

Published : 25 ಆಗಸ್ಟ್ 2024, 13:55 IST
Last Updated : 25 ಆಗಸ್ಟ್ 2024, 13:55 IST
ಫಾಲೋ ಮಾಡಿ
Comments

ಜೆರುಸಲೇಂ: ಹಿಜ್ಬುಲ್ಲಾಗಳು ಪ್ರತೀಕಾರದ ದಾಳಿಯ ಘೋಷಣೆ ಪ್ರಕಟಿಸಿದ ಬೆನ್ನಲ್ಲೇ ದಕ್ಷಿಣ ಲೆಬನಾನ್‌ನ ನಗರಗಳನ್ನು ಗುರಿಯಾಗಿರಿಸಿಕೊಂಡು ಭಾನುವಾರ ಬೆಳಿಗ್ಗೆ ಇಸ್ರೇಲ್‌ ಭಾರಿ ಪ್ರಮಾಣದಲ್ಲಿ ವಾಯುದಾಳಿ ನಡೆಸಿತು.

‘ಭಾನುವಾರ ದಕ್ಷಿಣ ಲೆಬನಾನ್‌ ಮೇಲೆ ನಡೆಸಿದ ವಾಯುದಾಳಿಯಲ್ಲಿ ಇಸ್ರೇಲ್‌ನ 100 ಯುದ್ಧ ವಿಮಾನಗಳು ಭಾಗಿಯಾಗಿದ್ದವು. ಸೇನೆಯು ಹೆಚ್ಚಿನ ನಿಗಾ ವಹಿಸಿದೆ’ ಎಂದು ಇಸ್ರೇಲ್‌ನ ಸೇನಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಶೋಶನಿ ತಿಳಿಸಿದ್ದಾರೆ.

‘ಉತ್ತರ ಇಸ್ರೇಲ್‌ನ ನಗರ, ನಾಗರಿಕರನ್ನು ಗುರಿಯಾಗಿರಿಸಿಕೊಂಡು ದಾಳಿಗೆ ಸಜ್ಜಾಗಿದ್ದ ಹಿಜ್ಬುಲ್ಲಾದ ಸಾವಿರಾರು ರಾಕೆಟ್‌ಗಳನ್ನು ಸೇನೆಯು ಸಂಪೂರ್ಣವಾಗಿ ನಾಶಪಡಿಸಿದೆ’ ಎಂದು ಇಸ್ರೇಲ್‌ನ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ಸಚಿವ ಸಂಪುಟ ಸಭೆಗೂ ಮುನ್ನ ತಿಳಿಸಿದರು.

ಪ್ರತಿದಾಳಿ

ಲೆಬನಾನ್‌ನ ಹಿಜ್ಬುಲ್ಲಾ ಸಂಘಟನೆಯ ಸಂಸ್ಥಾಪಕ, ಕಮಾಂಡರ್‌ ಫೌವಾದ್‌ ಶುಕುರ್‌, ‘ಇಸ್ರೇಲ್‌ ಸೇನೆಯು ಹತ್ಯೆ ಮಾಡಿದ್ದಕ್ಕೆ ಪ್ರತೀಕಾರವಾಗಿ ಇಸ್ರೇಲ್‌ನ ವಿವಿಧ ನಗರಗಳನ್ನು ಗುರಿಯಾಗಿರಿಸಿಕೊಂಡು 320ಕ್ಕೂ ಕತ್ಯುಸಾ ರಾಕೆಟ್‌, ಡ್ರೋನ್‌ ದಾಳಿ ನಡೆಸಿದ್ದೇವೆ. ಅಲ್ಲಿನ ಸೇನೆಯನ್ನು ಗುರಿಯಾಗಿರಿಸಿಕೊಂಡು, ದಾಳಿ ನಡೆಸಿದ್ದು, ಪ್ರತೀಕಾರದ ಮೊದಲ ಹಂತವಾಗಿದೆ’ ಎಂದು ಘೋಷಿಸಿದ್ದಾರೆ.

ಹಿಜ್ಬುಲ್ಲಾಗಳಿಂದ ರಾಕೆಟ್‌ ದಾಳಿ ಆರಂಭವಾಗುತ್ತಿದ್ದಂತೆಯೇ, ಉತ್ತರ ಇಸ್ರೇಲ್‌ನಾದ್ಯಂತ ಎಚ್ಚರಿಕೆ ಸಂದೇಶವಾಗಿ ಸೈರನ್‌ಗಳು ಮೊಳಗಿದವು. ಮುಂಜಾಗ್ರತಾ ಕ್ರಮವಾಗಿ ಒಂದು ಗಂಟೆ ಬೆನ್‌– ಗುರಿಯಾನ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮುಚ್ಚಲಾಗಿತ್ತು. ನಾಗರಿಕರಿಗೂ ಬಾಂಬ್‌ ನಿರೋಧಕ ಅಡಗುತಾಣಗಳಲ್ಲಿ ಇರುವಂತೆ ಇಸ್ರೇಲ್‌ ಸೇನೆ ಸೂಚಿಸಿತ್ತು.

ದಕ್ಷಿಣ ಲೆಬನಾನ್‌ ಮೇಲೆ ಇಸ್ರೇಲ್‌ ವಾಯುದಾಳಿಯಿಂದ ಸಿರಿಯಾದ 17 ವರ್ಷದ ವ್ಯಕ್ತಿಯೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ’ ಎಂದು ಲೆಬನಾನ್‌ನ ಆರೋಗ್ಯ ಇಲಾಖೆ ತಿಳಿಸಿದೆ.

ಎರಡೂ ರಾಷ್ಟ್ರಗಳಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು, ಸಾವು–ನೋವು, ಹಾನಿಯ ಕುರಿತು ಇದುವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಸಂಧಾನ ಮಾತುಕತೆ:

ಮತ್ತೊಂದೆಡೆ, ಇಸ್ರೇಲ್‌ ಹಾಗೂ ಹಮಾಸ್‌ ಬಂಡುಕೋರರ ನಡುವೆ ನಡೆಯುತ್ತಿರುವ ಯುದ್ಧವನ್ನು ಕೊನೆಗಾಣಿಸಲು ಈಜಿಪ್ಟ್‌ ಮತ್ತೊಂದು ಸುತ್ತಿನ ಮಾತುಕತೆ ನಡೆಸಿತು. ಈಜಿಪ್ಟ್‌ ಅಧ್ಯಕ್ಷ ಅಬ್ದೆಲ್‌ ಫತ್ತಾ ಅಲ್‌– ಶಿಸಿ ಹಾಗೂ ಅಮೆರಿಕ ಸೇನೆಯ ಜಂಟಿ ಅಧ್ಯಕ್ಷ ಚಾರ್ಲ್ಸ್‌ ಬ್ರೌನ್‌ ನೇತೃತ್ವದಲ್ಲಿ ಕೈರೊ ನಗರದಲ್ಲಿ ಭಾನುವಾರ ಸಭೆ ನಡೆಯಿತು. ಗಾಜಾದಲ್ಲಿ ಕದನ ವಿರಾಮ ಒಪ್ಪಂದ ಯಶಸ್ವಿಯಾದರೆ, ದಾಳಿಗಳನ್ನು ನಿಲ್ಲಿಸಲಾಗುವುದು ಎಂದು ಲೆಬನಾನ್‌ನ ಹಿಜ್ಬುಲ್ಲಾ ತಿಳಿಸಿದೆ.

ಮತ್ತೊಂದೆಡೆ, ಸಿರಿಯಾ, ಇರಾಕ್‌, ಯೆಮೆನ್‌ನಲ್ಲಿರುವ ಬಂಡುಕೋರ ಗುಂಪುಗಳಿಗೆ ಇರಾನ್‌ ತನ್ನ ಬೆಂಬಲ ಘೋಷಿಸಿದ್ದು, ಹೋರಾಟ ಮತ್ತಷ್ಟು ತೀವ್ರ ಸ್ವರೂಪ ಪಡೆಯುವ ಸಾಧ್ಯತೆಗಳಿವೆ.

ವಿಮಾನ ಸಂಚಾರ ರದ್ದು: ‘ಇಸ್ರೇಲ್‌ನ ಟೆಲ್‌ ಅವೀವ್‌, ಲೆಬನಾನ್‌ನ ಬೈರೂತ್‌ ನಗರಕ್ಕೆ ತೆರಳುವ ಎಲ್ಲ ವಿಮಾನಗಳ ಹಾರಾಟವನ್ನು ಸೋಮವಾರದವರೆಗೆ ರದ್ದುಗೊಳಿಸಲಾಗಿದೆ’ ಎಂದು ಏರ್‌ ಫ್ರಾನ್ಸ್‌ ಕಂಪನಿ ತಿಳಿಸಿದೆ.

‘ಈ ಮಾರ್ಗದಲ್ಲಿ ಮತ್ತೆ ಸಂಚಾರ ಆರಂಭಿಸುವ ಕುರಿತಂತೆ ಹೊಸತಾಗಿ ಭದ್ರತಾ ಪರಿಶೀಲನೆ ನಡೆಸಿದ ನಂತರ ವಿಮಾನಗಳ ಹಾರಾಟದ ಬಗ್ಗೆ ನಿರ್ಧರಿಸಲಾಗುವುದು’ ಎಂದು ಏರ್‌ಲೈನ್ಸ್ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ. ಜರ್ಮನ್‌ನ ಪ್ರಮುಖ ಏರ್‌ಲೈನ್ಸ್‌ ಸಂಸ್ಥೆ ‘ಲುಫ್ತಾನ್ಸಾ’ ಕೂಡ ಸೆಪ್ಟೆಂಬರ್‌ 2ರ ತನಕ ಟೆಲ್‌ ಅವೀವ್‌, ಬೈರೂತ್‌ ನಗರಕ್ಕೆ ವಿಮಾನ ಹಾರಾಟವನ್ನು ರದ್ದುಗೊಳಿಸಿದೆ ಎಂದು ತಿಳಿಸಿದೆ.

ವಾಯುದಾಳಿಗೂ ಮುನ್ನ ಏನಾಯ್ತು?

  • ಜುಲೈ 30ರಂದು ಲೆಬನಾನ್‌ ಹಿಜ್ಬುಲ್ಲಾದ ಸಂಸ್ಥಾಪಕ, ಕಮಾಂಡರ್‌ ಫುವದ್‌ ಶೂಕುರ್‌ನನ್ನು ಹತ್ಯೆ ಮಾಡಿದ್ದ ಇಸ್ರೇಲ್‌ ಸೇನೆ

  • ಕಳೆದೊಂದು ತಿಂಗಳಿನಿಂದ ಎರಡು ರಾಷ್ಟ್ರಗಳ ನಡುವೆ ದಾಳಿ– ಪ್ರತಿದಾಳಿ

  • ಫುವದ್‌ ಹತ್ಯೆಗೆ ಪ್ರತೀಕಾರವಾಗಿ ದಾಳಿಯ ಎಚ್ಚರಿಕೆ ನೀಡಿದ್ದ ಹಿಜ್ಬುಲ್ಲಾ

  • ಭಾನುವಾರ ಬೆಳಿಗ್ಗೆ ಲೆಬನಾನ್‌ನ ಗಡಿಭಾಗ, ದಕ್ಷಿಣ ಲೆಬನಾನ್‌ ನಗರಗಳ ಮೇಲೆ ಇಸ್ರೇಲ್‌ ವಾಯುದಾಳಿ

  • ಇಸ್ರೇಲ್‌ನ 100ಕ್ಕೂ ಅಧಿಕ ಯುದ್ಧವಿಮಾನಗಳಿಂದ ಕಾರ್ಯಾಚರಣೆ

  • ಪ್ರತಿದಾಳಿ ನಡೆಸಿದ ಹಿಜ್ಬುಲ್ಲಾ; 300ಕ್ಕೂ ಅಧಿಕ ರಾಕೆಟ್‌ಗಳ ದಾಳಿ

  • ಇಸ್ರೇಲ್‌, ಲೆಬನಾನ್‌ನಲ್ಲಿ ವಾಯುಸಂಚಾರ ವ್ಯತ್ಯ

ನಮ್ಮ ದೇಶವನ್ನು ರಕ್ಷಿಸಲು ದೇಶದ ಉತ್ತರ ಭಾಗದ ನಿವಾಸಿಗಳು ಮರಳಿ ಮನೆ ಸೇರುವವರೆಗೂ ನಾವು ಎಲ್ಲವನ್ನೂ ಮಾಡಲು ನಿರ್ಧರಿಸಿದ್ದೇವೆ. ಯಾರು ನಮಗೆ ಹಾನಿ ಮಾಡುತ್ತಾರೋ ಅವರಿಗೆ ನಾವು ಹಾನಿ ಮಾಡುತ್ತೇವೆ
ಬೆಂಜಮಿನ್‌ ನೆತಾನ್ಯುಹು ಇಸ್ರೇಲ್‌ ಪ್ರಧಾನಿ

(ವಿವಿಧ ಏಜೆನ್ಸಿಗಳ ಮಾಹಿತಿ ಆಧರಿಸಿದ ಸುದ್ದಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT