ಹಾಂಗ್‌ಕಾಂಗ್: ತಾಲೀಮ್ ಚಂಡಮಾರುತ ಅಪ್ಪಳಿಸಿದ್ದ ಕಾರಣ ಸೋಮವಾರ ಇಲ್ಲಿನ ಶಾಲೆಗಳು ಮತ್ತು ಷೇರುಪೇಟೆಯನ್ನು ಮುಚ್ಚಲಾಗಿತ್ತು.
ಜೋರಾದ ಅಲೆಗಳು ಅಪ್ಪಳಿಸುತ್ತಿರುವುದರಿಂದ ಮತ್ತು ಭೂಕುಸಿತ ಸಂಭವಿಸುತ್ತಿರುವುದರಿಂದ ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಸೂಚಿಸಲಾಗಿತ್ತು. ನಗರದ ಬೀಚ್‌ಗಳಿಗೆ ತೆರಳುವ ನಿವಾಸಿಗಳು ಮತ್ತು ಪ್ರವಾಸಿಗರಿಗೆ ಎಚ್ಚರಿಕೆ ನೀಡಲಾಗಿತ್ತು.
‘ಅಪಾಯದ ಸ್ಥಳಗಳಿಂದ ಸುಮಾರು 9,800 ಕಾರ್ಮಿಕರನ್ನು ಸ್ಥಳಾಂತರಿಸಲಾಗಿದೆ. ಮಕಾವೊದಲ್ಲಿ ನದಿ ತೀರದ ಶಾಲೆಗಳ ತರಗತಿಗಳು ಮತ್ತು ಸಾರ್ವಜನಿಕ ಸಾರಿಗೆ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಮಾಧ್ಯಮವೊಂದು ವರದಿ ಮಾಡಿದೆ.
‘16ಕ್ಕೂ ಹೆಚ್ಚು ವಿಮಾನಗಳ ಸೇವೆ ರದ್ದಾಗಿದೆ’ ಎಂದು ನಗರದ ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾದೇಶಿಕ ವ್ಯವಹಾರ ಮತ್ತು ಪ್ರವಾಸದ ಮುಖ್ಯ ತಾಣವಾಗಿರುವ ಹಾಂಗ್‌ಕಾಂಗ್‌ನಲ್ಲಿ ತೀವ್ರ ಮಳೆ ಮತ್ತು ಬಿರುಗಾಳಿಯಿಂದಾಗಿ ಸಾವಿರಕ್ಕೂ ಹೆಚ್ಚು ಜನರು ಬಾಧಿತರಾಗಿದ್ದು, ತಾತ್ಕಾಲಿಕ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.
ಪ್ರತಿ ಗಂಟೆಗೆ ಸುಮಾರು 140 ಕಿಲೋಮೀಟರ್ ವೇಗದಲ್ಲಿ ಅಪ್ಪಳಿಸಿದ್ದ ಚಂಡಮಾರುತವು ಮಧ್ಯಾಹ್ನದ ನಂತರ ಚೀನಾದತ್ತ ಸಾಗುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.