ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್‌ಕೈದಾ ಮುಖ್ಯಸ್ಥ ಝವಾಹಿರಿ ಹತ್ಯೆ: ಇಲ್ಲಿದೆ ಅಮೆರಿಕ ಕಾರ್ಯಾಚರಣೆಯ ಪೂರ್ಣ ವಿವರ

Last Updated 2 ಆಗಸ್ಟ್ 2022, 6:13 IST
ಅಕ್ಷರ ಗಾತ್ರ

ವಾಷಿಂಗ್ಟನ್: ಮೋಸ್ಟ್ ವಾಂಟೆಡ್ ಭಯೋತ್ಪಾದಕ, ಅಲ್‌ಕೈದಾ ಉಗ್ರ ಸಂಘಟನೆ ಮುಖ್ಯಸ್ಥ ಆಯ್ಮಾನ್ ಅಲ್‌ ಝವಾಹಿರಿಯನ್ನು ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಘೋಷಿಸಿದ್ದಾರೆ.

2011ರಲ್ಲಿ ಅಲ್‌ಕೈದಾ ಉಗ್ರ ಸಂಘಟನೆಯ ಅಂದಿನ ಮುಖ್ಯಸ್ಥ ಒಸಾಮ ಬಿನ್ ಲಾಡೆನ್ ಹತ್ಯೆ ನಂತರ ಅಮೆರಿಕವು ಅಫ್ಗಾನಿಸ್ತಾನದಲ್ಲಿ ಮತ್ತೊಂದು ಪ್ರಮುಖ ಕಾರ್ಯಚರಣೆ ನಡೆಸಿದೆ.

ಹಲವಾರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆಯ್ಮಾನ್ ಅಲ್‌ ಝವಾಹಿರಿಯನ್ನು ಅಮೆರಿಕದ ಕೇಂದ್ರೀಯ ಗುಪ್ತಚರ ದಳ (ಸಿಐಎ) ಪತ್ತೆ ಮಾಡಿದ್ದು ಮತ್ತು ಹತ್ಯೆ ಮಾಡಿದ್ದು ಹೇಗೆ ಎಂಬುದನ್ನು ಅಮೆರಿಕದ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಭಯೋತ್ಪಾದನೆ ನಿಗ್ರಹ ದಳ ಹಾಗೂ ಗಪ್ತಚರ ಇಲಾಖೆಗಳ ನಿರಂತರ ಶ್ರಮ, ಎಚ್ಚರಿಕೆ ಹಾಗೂ ತಾಳ್ಮೆಯ ಕ್ರಮಗಳಿಂದಾಗಿ ಝವಾಹಿರಿಯ ಹತ್ಯೆ ಸಾಧ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಝವಾಹಿರಿಯ ಹತ್ಯೆ ಕಾರ್ಯಾಚರಣೆ ಬಗ್ಗೆ ಅಧಿಕಾರಿ ನೀಡಿದ ವಿವರ ಇಲ್ಲಿದೆ;

* ಕಳೆದ ಕೆಲವು ವರ್ಷಗಳಿಂದ ಝವಾಹಿರಿ ಬೆಂಬಲಿತ ಜಾಲದ ಬಗ್ಗೆ ಅಮೆರಿಕ ನಿಗಾ ಇರಿಸಿತ್ತು. ಕಳೆದ ವರ್ಷ ಅಫ್ಗಾನಿಸ್ತಾನದಿಂದ ಸೇನಾಪಡೆಗಳನ್ನು ವಾಪಸ್ ಕರೆಸಿಕೊಂಡ ಬಳಿಕ ಅಲ್ಲಿ ಅಲ್‌ಕೈದಾದ ಅಸ್ತಿತ್ವದ ಇರುವ ಬಗ್ಗೆ ಸುಳಿವು ದೊರೆತಿತ್ತು.

* ಝವಾಹಿರಿ, ಆತನ ಪತ್ನಿ ಹಾಗೂ ಕುಟುಂಬದವರು ಕಾಬೂಲ್‌ನ ನಿವಾಸದಲ್ಲಿ ಸುರಕ್ಷಿತವಾಗಿ ತಂಗಿರುವುದು ಈ ವರ್ಷ ಗಮನಕ್ಕೆ ಬಂದಿತ್ತು.

* ಕಳೆದ ಕೆಲವು ತಿಂಗಳುಗಳಲ್ಲಿ ಸೂಕ್ಷ್ಮವಾಗಿ ನಿಗಾ ಇರಿಸಿದ ಗುಪ್ತಚರ ಅಧಿಕಾರಿಗಳು ಝವಾಹಿರಿ ಕಾಬೂಲ್‌ನ ನಿವಾಸದಲ್ಲಿರುವುದನ್ನು ಏಪ್ರಿಲ್‌ನಲ್ಲಿ ಖಾತರಿ ಪಡಿಸಿಕೊಂಡರು.

* ಆತನ ಚಲನವಲನಗಳ ಬಗ್ಗೆ ನಿಖರ ಮಾಹಿತಿ ಕಲೆಹಾಕಲಾಯಿತು.

* ಝವಾಹಿರಿ ಎಷ್ಟೊತ್ತಿಗೆ ಮನೆಗೆ ಬರುತ್ತಾನೆ, ಎಷ್ಟೊತ್ತಿಗೆ ಹೊರ ಹೋಗುತ್ತಾನೆ, ಹಾಗೂ ಮನೆಯಲ್ಲಿ ಏನೇನು ಮಾಡುತ್ತಾನೆ ಇತ್ಯಾದಿ ಮಾಹಿತಿಗಳ ಸಹಿತ ಆತನ ಸಂಪೂರ್ಣ ದಿನಚರಿಯ ಬಗ್ಗೆ ಮಾಹಿತಿ ಕಲೆಹಾಕಲಾಯಿತು.

* ಒಮ್ಮೆ ಮನೆ ಸೇರಿದ ಬಳಿಕ ಝವಾಹಿರಿ ಮತ್ತೆ ಹೊರಹೋಗುತ್ತಿರಲಿಲ್ಲ. ಮನೆ ಸೇರಿದ ಬಳಿಕ ಬಾಲ್ಕನಿಯಲ್ಲೇ ಹೆಚ್ಚಾಗಿ ಆತ ಇರುತ್ತಿದ್ದುದನ್ನು ಗುಪ್ತಚರ ದಳ ಗಮನಿಸಿತ್ತು.

* ಝವಾಹಿರಿಯ ಮನೆಯ ವಿನ್ಯಾಸ, ಸಂರಚನೆ ಹಾಗೂ ಸುರಕ್ಷತೆಯ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿದ ಬಳಿಕ ಕಾರ್ಯಾಚರಣೆಗೆ ಯೋಜನೆ ಸಿದ್ಧಪಡಿಸಲಾಯಿತು. ನಾಗರಿಕರು ಹಾಗೂ ಇತರರಿಗೆ ತೊಂದರೆಯಾಗದಂತೆ ಆತನನ್ನು ಹೇಗೆ ಹತ್ಯೆ ಮಾಡಬಹುದು ಎಂಬ ಬಗ್ಗೆ ತಂತ್ರ ರೂಪಿಸಲಾಯಿತು.

* ಇತ್ತೀಚಿನ ವಾರಗಳಲ್ಲಿ ಅಧ್ಯಕ್ಷ ಜೋ ಬೈಡನ್ ಅವರು ಪ್ರಮುಖ ಸಲಹೆಗಾರರು ಹಾಗೂ ಸಚಿವ ಸಂಪುಟ ಸದಸ್ಯರ ಜತೆ ಸಭೆ ನಡೆಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದರು. ಕಾರ್ಯಾಚರಣೆ ಹೇಗಿರಬೇಕು ಎಂಬ ಪ್ರಸ್ತಾವನೆಯನ್ನು ಜುಲೈ 1ರಂದು ಬೈಡನ್ ಅವರು ಪ್ರಮುಖ ಸಲಹೆಗಾರರು ಹಾಗೂ ಸಚಿವ ಸಂಪುಟದ ಮುಂದಿಟ್ಟರು. ಸಿಐಎ ನಿರ್ದೇಶಕ ವಿಲಿಯಮ್ ಬರ್ನ್ಸ್ ಸಹ ಈ ವೇಳೆ ಹಾಜರಿದ್ದರು.

* ಕಾರ್ಯಾಚರಣೆಯ ಅಂತಿಮ ರೂಪು–ರೇಷೆ ಸಿದ್ಧಪಡಿಸಲಾಯಿತು.

* ಗುಪ್ತಚರ ದಳದ ಹಿರಿಯ ಅಧಿಕಾರಿಗಳು ಹಾಗೂ ತಜ್ಞರು ಪರಿಸ್ಥಿತಿಯ ಬಗ್ಗೆ ಹೆಚ್ಚಿನ ಅವಲೋಕನ ನಡೆಸಿದರು.

* ಜುಲೈ 25ರಂದು ಸಚಿವ ಸಂಪುಟ ಸದಸ್ಯರಿಗೆ ಕಾರ್ಯಾಚರಣೆಯ ಬಗ್ಗೆ ಮಾಹಿತಿ ನೀಡಿದ ಬೈಡನ್, ಝವಾಹಿರಿ ಹತ್ಯೆಯು ತಾಲಿಬಾನ್‌ ಜತೆಗಿನ ಅಮೆರಿಕದ ಸಂಬಂಧದ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂದು ಚರ್ಚಿಸಿದರು.

* ಡ್ರೋನ್ ದಾಳಿ ಮೂಲಕ ಝವಾಹಿರಿ ಹತ್ಯೆಗೆ ಅಂತಿಮ ಸಿದ್ಧತೆ ನಡೆಸಲಾಯಿತು.

* ಜುಲೈ 30ರ ರಾತ್ರಿ 9.30ಕ್ಕೆ ಡ್ರೋನ್ ಮೂಲಕ ‘ಹೆಲ್ ಫೈರ್’ ಕ್ಷಿಪಣಿ ದಾಳಿ ನಡೆಸಿ ಝವಾಹಿರಿಯನ್ನು ಹತ್ಯೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT