ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಡೆನ್‌ ಗೆದ್ದರೆ ತಿಂಗಳೊಳಗೆ ‘ಕಮ್ಯುನಿಸ್ಟ್‌ ಕಮಲಾ’ಗೆ ಅಧಿಕಾರ: ಟ್ರಂಪ್‌

Last Updated 9 ಅಕ್ಟೋಬರ್ 2020, 5:08 IST
ಅಕ್ಷರ ಗಾತ್ರ

ವಾಷಿಂಗ್ಟನ್‌ ಡಿಸಿ: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಒಂದು ವೇಳೆ ಡೆಮಾಕ್ರಟಿಕ್‌ ಪಕ್ಷದ ಜೋ ಬೈಡನ್‌ ಅವರೇನಾದರೂ ಗೆದ್ದರೆ, ಒಂದೇ ತಿಂಗಳಲ್ಲಿ ಕಮಲಾ ಹ್ಯಾರಿಸ್‌ ಅವರು ಅಧ್ಯಕ್ಷ ಪದವಿಯನ್ನು ತಮ್ಮದಾಗಿಸಿಕೊಳ್ಳುತ್ತಾರೆ ಎಂದು ಡೊನಾಲ್ಡ್‌ ಟ್ರಂಪ್‌ ಅವರು ಗುರುವಾರ ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕ ಉಪಾಧ್ಯಕ್ಷರ ಸ್ಥಾನದ ಅಭ್ಯರ್ಥಿಗಳಾದ ಡೆಮಾಕ್ರಟಿಕ್‌ ಪಕ್ಷದ ಕಮಲಾ ಹ್ಯಾರಿಸ್‌ ಮತ್ತು ರಿಪಬ್ಲಿಕನ್‌ ಪಕ್ಷದ ಮೈಕ್‌ ಪೆನ್ಸ್‌ ಬುಧವಾರವಷ್ಟೇ ಚರ್ಚೆಯಲ್ಲಿ ಮುಖಾಮುಖಿಯಾಗಿದ್ದರು. ಸರ್ಕಾರ ಕೋವಿಡ್‌ ನಿರ್ವಹಿಸಿದ ರೀತಿ, ದೇಶದ ನಿರುದ್ಯೋಗ ಸಮಸ್ಯೆ, ಚೀನಾದೊಂದಿಗಿನ ಸಂಬಂಧ, ದೇಶದಲ್ಲಿ ಹೊಗೆಯಾಡುತ್ತಿರುವ ಜನಾಂಗೀಯ ಆಕ್ರೋಶ ಮತ್ತು ಹವಾಮಾನ ಬದಲಾವಣೆಗಳ ಕುರಿತು ಕಮಲಾ ಹ್ಯಾರಿಸ್‌ ಅವರು, ಡೊನಾಲ್ಡ್‌ ಟ್ರಂಪ್‌ ಅವರ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ್ದರು.

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಜೋ ಬೈಡೆನ್‌ ಅವರು ಈ ವಿಚಾರವಾಗಿ ಕಮಲಾ ಹ್ಯಾರಿಸ್‌ ಅವರನ್ನು ಪ್ರಶಂಸಿಸಿದ್ದರು. ಚರ್ಚೆಯಲ್ಲಿ ಕಮಲಾ ಅವರಿಗೆ ತಿರುಗೇಟು ನೀಡಿದ ಕಾರಣಕ್ಕಾಗಿ ಡೊನಾಲ್ಡ್‌ ಟ್ರಂಪ್‌ ಅವರು ಉಪಾಧ್ಯಕ್ಷ ಮೈಕ್‌ ಪೆನ್ಸ್‌ ಅವರನ್ನು ಕೊಂಡಾಡಿದ್ದರು.

ಈ ಬೆಳವಣಿಗೆ ಬೆನ್ನಿಗೇ ಟ್ರಂಪ್‌ ಕಮಲಾ ಹ್ಯಾರಿಸ್‌ ಅವರ ವಿರುದ್ಧ ಗುರುವಾರ ವಾಗ್ದಾಳಿ ನಡೆಸಿದ್ದಾರೆ.

‘ಬುಧವಾರ ರಾತ್ರಿ ನಡೆದದ್ದು ಸ್ಪರ್ಧೆಯೇ ಅಲ್ಲ. ಕಮಲಾ ಭಯಾನಕವಾಗಿ ವರ್ತಿಸುತ್ತಿದ್ದರು. ನಿಮಗೆ ಕೆಟ್ಟದಾಬಹುದು ಎಂದು ನನಗೆ ಅಂದುಕೊಂಡಿಲ್ಲ. ಅವರು ಇಷ್ಟವಾಗುವಂಥವರಲ್ಲ. ಆಕೆ ಒಬ್ಬ ಕಮ್ಯುನಿಸ್ಟ್‌. ಸೆನೆಟರ್‌ ಬರ್ನಿ ಸ್ಯಾಂಡರ್ಸ್‌ರಂತೆ ಆಕೆ ಕೂಡ ಎಡಪಂಥದವರು. ಆಕೆ ಕಮ್ಯುನಿಸ್ಟ್‌,’ ಎಂದು ಟ್ರಂಪ್‌ ಫಾಕ್ಸ್‌ ನ್ಯೂಸ್‌ ವಾಹಿನಿಯ ಸಂದರ್ಶನದಲ್ಲಿ ಒತ್ತಿ ಹೇಳಿದರು.

‘ನಾವು ಕಮ್ಯುನಿಸ್ಟ್‌ವೊಬ್ಬರನ್ನು ಪಡೆಯಲಿದ್ದೇವೆ. ನಾನು ಜೋ (ಬೈಡೆನ್‌) ಪಕ್ಕದಲ್ಲಿ ಕುಳಿತು ಅವರನ್ನು ನೋಡಿದ್ದೇನೆ. ಜೋ ಅಧ್ಯಕ್ಷರಾಗಿ ಎರಡು ತಿಂಗಳೂ ಉಳಿಯುವುದಿಲ್ಲ. ಅದು ನನ್ನ ಅಭಿಪ್ರಾಯ,’ ಎಂದು ಸಂದರ್ಶನದಲ್ಲಿ ಅವರು ಹೇಳಿಕೊಂಡಿದ್ದಾರೆ.

‘ಆಕೆ ಕಮ್ಯುನಿಸ್ಟ್. ಆಕೆ ಸಮಾಜವಾದಿಯಲ್ಲ. ಸಮಾಜವಾದವನ್ನು ಮೀರಿದವರು. ಆಕೆಯ ಚಿಂತನೆಗಳನ್ನು ಒಮ್ಮೆ ಗಮನಿಸಿ. ಕೊಲೆಗಾರರು, ಅತ್ಯಾಚಾರಿಗಳು ನಮ್ಮ ದೇಶಕ್ಕೆ ಬಂದು ಸೇರಿಕೊಳ್ಳಲು ಅವರು ಗಡಿಗಳನ್ನು ತೆರೆಯಲಿದ್ದಾರೆ,’ ಎಂದು ಕಮಲಾ ವಿರುದ್ಧ ಟ್ರಂಪ್‌ ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT