ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವರೊಂದಿಗೆ ಮೈತ್ರಿ ಮಾಡಿಕೊಳ್ಳುವುದಕ್ಕಿಂತ, ವಿಪಕ್ಷದಲ್ಲಿ ಕೂರುವುದೇ ಲೇಸು: PTI

Published 12 ಫೆಬ್ರುವರಿ 2024, 13:34 IST
Last Updated 12 ಫೆಬ್ರುವರಿ 2024, 13:36 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ಪಾಕಿಸ್ತಾನ ನ್ಯಾಷನಲ್‌ ಸಂಸತ್ತಿಗೆ ಮತ ಎಣಿಕೆ ಪೂರ್ಣಗೊಂಡು, ಫಲಿತಾಂಶ ಹೊರಬಿದ್ದರೂ ಸರ್ಕಾರ ರಚನೆಯ ಕಸರತ್ತು ಇನ್ನೂ ಮುಂದುವರಿದಿದೆ.

ಈ ನಡುವೆ ಅತಿ ಹೆಚ್ಚು ಕ್ಷೇತ್ರಗಳನ್ನು ಗೆದ್ದಿರುವ ಇಮ್ರಾನ್ ಖಾನ್ ಅವರ ಪಾಕಿಸ್ತಾನ ತೆಹರೀಕ್ ಎ ಇನ್ಸಾಫ್‌ (PTI) ಪಕ್ಷ ಬೆಂಬಲಿತ ಸ್ವತಂತ್ರ ಅಭ್ಯರ್ಥಿಗಳು ಸರ್ಕಾರ ರಚನೆಯ ಕನಸು ಹೊತಿದ್ದರೆ, ಪಕ್ಷದ ಮುಖಂಡ ಬ್ಯಾರಿಸ್ಟರ್ ಗೊಹರ್ ಅಲಿ ಖಾನ್ ಅವರು ಅವರು ವಿರೋಧ ಪಕ್ಷದಲ್ಲಿ ಕೂರುವುದಾಗಿ ಘೋಷಿಸಿದ್ದಾರೆ.

‘266 ಸದಸ್ಯಬಲದ ಪಾಕಿಸ್ತಾನ ನ್ಯಾಷನಲ್ ಅಸೆಂಬ್ಲಿಯಲ್ಲಿ ಯಾರಿಗೂ ಸ್ಪಷ್ಟ ಬಹುಮತ ಲಭಿಸಿಲ್ಲ. ಈ ನಡುವೆ ಪಾಕಿಸ್ತಾನ ಮುಸ್ಲಿಂ ಲೀಗ್‌–ನವಾಜ್ ಹಾಗೂ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಜತೆ ಮೈತ್ರಿ ಮಾಡಿಕೊಳ್ಳುವ ಮನಸ್ಥಿತಿ ಕಷ್ಟಸಾಧ್ಯ. ಈವರೆಗೂ ಯಾವ ಪಕ್ಷದೊಂದಿಗೆ ಪಿಟಿಐ ಯಾವುದೇ ಮಾತುಕತೆಯನ್ನು ನಡೆಸಿಲ್ಲ. ಇವರೊಂದಿಗೆ ಮೈತ್ರಿ ಮಾಡಿಕೊಳ್ಳುವುದಕ್ಕಿಂತ ವಿರೋಧಪಕ್ಷದಲ್ಲಿ ಕೂರುವುದೇ ವಾಸಿ. ಆದರೆ ನಮಗೇ ಬಹುಮತ ಇದೆ ಎಂದೆನಿಸಿದೆ’ ಎಂದಿದ್ದಾರೆ.

ಪಿಟಿಐ ಬೆಂಬಲಿತ 101 ಸ್ವತಂತ್ರ ಅಭ್ಯರ್ಥಿಗಳು ಈ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಪಾಕಿಸ್ತಾನ ಮುಸ್ಲೀಂ ಲೀಗ್–ನವಾಜ್‌ 75 ಸೀಟುಗಳನ್ನು, ಪಾಕಿಸ್ತಾನ ಪೀಪಲ್ಸ್ ಪಾರ್ಟಿ 54 ಕ್ಷೇತ್ರಗಳನ್ನು ಗೆದ್ದಿದೆ. ಎಂಕ್ಯೂಎಂ–ಪಿ 17 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದಾರೆ. ಇತರ ಪಕ್ಷಗಳು 17 ಸೀಟುಗಳನ್ನು ಗೆದ್ದಿವೆ. ಒಂದು ಕ್ಷೇತ್ರದ ಫಲಿತಾಂಶ ತಡೆಹಿಡಿಯಲಾಗಿದೆ.

ಆರಂಭದಲ್ಲಿ ಸರ್ಕಾರ ರಚಿಸುವ ವಿಶ್ವಾಸವನ್ನು ಪಿಟಿಐ ಹೊಂದಿತ್ತು. ಆದರೆ ಸರ್ಕಾರ ರಚನೆಗೆ 336 ಸೀಟುಗಳನ್ನು ಹೊಂದಿರುವ ಪಾಕಿಸ್ತಾನ ನ್ಯಾಷನಲ್ ಅಸೆಂಬ್ಲಿಯಲ್ಲಿ ಅಗತ್ಯವಿರುವ 169 ಸೀಟುಗಳನ್ನು ಹೊಂದಿಸುವುದು ಕಷ್ಟ ಎಂದರಿತ ಪಕ್ಷದ ಮುಖಂಡರು, ತಮ್ಮ ಪ್ರಯತ್ನದಿಂದ ಹಿಂದೆ ಸರಿದರು. ನೇರ ಸ್ಪರ್ಧೆಗೆ 266 ಕ್ಷೇತ್ರಗಳು ಒಳಗೊಂಡಿವೆ. ಇದರಲ್ಲಿ 60 ಮಹಿಳಾ ಮೀಸಲು, 10 ಅಲ್ಪಸಂಖ್ಯಾತರ ಮೀಸಲು ಕ್ಷೇತ್ರಗಳು ಇವೆ. 

ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಒಂದು ಪಕ್ಷವಾಗಿ ಮತ್ತು ಒಂದೇ ರೀತಿಯ ಚಿಹ್ನೆಯೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಚುನಾವಣಾ ಆಯೋಗ ಆದೇಶಿಸಿತು. ಇದು ಪಿಟಿಐಗೆ ತೀವ್ರ ಹಿನ್ನಡೆಯಾಗಿತ್ತು.

'ನಿಷ್ಠೆ ಬದಲಿಸಿದ ಪಕ್ಷದ ಕೆಲವರಿಗೆ ಫೆ. 8ರಂದು ನಡೆದ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಇದರೊಂದಿಗೆ ಪಿಟಿಐ ಬೆಂಬಲಿತ ವಸೀಂ ಖಾದರ್ ಅವರು ಪಿಎಂಎಲ್‌–ಎನ್ ಬೆಂಬಲಿಸಿದ್ದರ ಕುರಿತು ಪಕ್ಷದ ವೇದಿಕೆಯಲ್ಲಿ ಚರ್ಚಿಸಲಾಗುವುದು’ ಎಂದು ಗೊಹರ್ ಅಲಿ ಖಾನ್ ಹೇಳಿದ್ದಾರೆ.

ಕೇಂದ್ರದಲ್ಲಿ, ಖೈಬರ್ ಪಖ್ತುಂಖ್ವಾ ಹಾಗೂ ಪಂಜಾಬ್ ಪ್ರಾಂತ್ಯದಲ್ಲಿ ಸರ್ಕಾರ ರಚಿಸುವಂತೆ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಸೂಚನೆ ನೀಡಿದ್ದರು. ಆದರೆ ನಾವು ಸಂಸತ್ತಿನ ಹೊರಗೆ ಇರುವುದಿಲ್ಲ. ಬದಲಿಗೆ ಸಂಸತ್ ಒಳಗೆ ಕುಳಿತು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತೇವೆ’ ಎಂದಿದ್ದಾರೆ.

ಈ ನಡುವೆ ಪಿಎಂಎಲ್‌–ಎನ್ ಹಾಗೂ ಪಿಪಿಪಿ ನಡುವೆ ಹಲವು ಸುತ್ತಿನ ಮಾತುಕತೆಗಳು ನಡೆದಿವೆ ಎಂದೆನ್ನಲಾಗಿದೆ. ಬಿಲಾವಲ್ ಭುಟೊ ಝರ್ದಾರಿ ಅವರೇ ಪ್ರಧಾನಿಯಾಗಬೇಕು ಎಂದು ಪಿಪಿಪಿ ಪಟ್ಟು ಹಿಡಿದಿದೆ. ಆದರೆ ಎರಡೂ ಪಕ್ಷಗಳು ಐದು ವರ್ಷಗಳಲ್ಲಿ ಸಮನಾಗಿ ಅಧಿಕಾರ ಹಂಚಿಕೊಳ್ಳುವ ಸೂತ್ರದ ಕುರಿತೂ ಚರ್ಚೆ ನಡೆಸಿವೆ. ಆದರೆ ಯಾರು ಮೊದಲು ಎನ್ನುವುದು ಇನ್ನಷ್ಟೇ ನಿರ್ಧಾರವಾಗಬೇಕಿದೆ ಎಂದೆನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT