ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ | ಅತಂತ್ರ ಫಲಿತಾಂಶ, ಮೈತ್ರಿಗೆ ಕಸರತ್ತು

ಅತಿದೊಡ್ಡ ಪಕ್ಷವಾಗಿ ಪಿಎಂಎಲ್–ಎನ್‌, ‘ಒಕ್ಕೂಟ ಸರ್ಕಾರ’ ರಚನೆಗೆ ಪ್ರಸ್ತಾವ
Published 12 ಫೆಬ್ರುವರಿ 2024, 13:18 IST
Last Updated 12 ಫೆಬ್ರುವರಿ 2024, 13:18 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ : ಪಾಕಿಸ್ತಾನ ಚುನಾವಣೆ ಆಯೋಗ ಸಾರ್ವತ್ರಿಕ ಚುನಾವಣೆಯ ಪೂರ್ಣ ಫಲಿತಾಂಶವನ್ನು ಮತದಾನ ನಡೆದ ಮೂರು ದಿನದ ಬಳಿಕ ಪ್ರಕಟಿಸಿದೆ. ಆ ಪ್ರಕಾರ, ಯಾವ ಪಕ್ಷಕ್ಕೂ ಸರಳ ಬಹುಮತ ಲಭಿಸಿಲ್ಲ. 

ಅತಂತ್ರ ಸಂಸತ್ತು ರಚನೆಯಾಗಿದೆ. ಮೈತ್ರಿ ಸರ್ಕಾರ ರಚನೆ ಅನಿವಾರ್ಯ ಎಂಬ ಚಿತ್ರಣ ಸ್ಪಷ್ಟವಾಗಿದೆ. ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪಾಕಿಸ್ತಾನ ಮುಸ್ಲಿಂ ಲೀಗ್ ನವಾಜ್‌ (ಪಿಎಂಎಲ್‌–ಎನ್‌) ರಾಷ್ಟ್ರೀಯ ಸಂಸತ್ತಿನಲ್ಲಿ 75 ಸ್ಥಾನಗಳನ್ನು ಗೆದ್ದಿದ್ದು, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ವಿವಾದಗಳೇ ಚುನಾವಣೆಯನ್ನು ಆವರಿಸಿದ್ದವು. ಆರಂಭಿಕ ಫಲಿತಾಂಶದ ಹಿಂದೆಯೇ ಮಾಜಿ ಪ್ರಧಾನಿಗಳಾದ ಇಮ್ರಾನ್‌ ಖಾನ್‌ ನೇತೃತ್ವದ ಪಾಕಿಸ್ತಾನ್‌ ತೆಹ್ರೀಕ್‌–ಇ–ಇನ್ಸಾಫ್‌ (ಪಿಟಿಐ) ಮತ್ತು ನವಾಜ್ ಷರೀಫ್‌ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್ –ನವಾಜ್‌ (ಪಿಎಂಎಲ್–ಎನ್), ಚುನಾವಣೆಯಲ್ಲಿ ಗೆದ್ದಿರುವುದಾಗಿ ಪ್ರತಿಪಾದಿಸಿದ್ದವು. 

ರಾಷ್ಟ್ರೀಯ ಮತ್ತು ಪ್ರಾಂತ್ಯವಾರು ವಿಧಾನಸಭಾ ಕ್ಷೇತ್ರಗಳು ಸೇರಿ 854 ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು. ಫಲಿತಾಂಶದ ಪ್ರಕಾರ, 348 ಕ್ಷೇತ್ರಗಳಲ್ಲಿ ಪಕ್ಷೇತರರು ಜಯಗಳಿಸಿದ್ದಾರೆ. ಪಿಟಿಐ ಪಕ್ಷಕ್ಕೆ ಕ್ರಿಕೆಟ್‌ ಬ್ಯಾಟ್‌ ಚಿಹ್ನೆಯಾಗಿ ಸಿಗದ ಕಾರಣ, ಪಕ್ಷೇತರರಾಗಿ ಗೆದ್ದಿರುವವರಲ್ಲಿ ಹೆಚ್ಚಿನವರು ಆ ಪಕ್ಷದ ಬೆಂಬಲದಲ್ಲಿಯೇ ಕಣಕ್ಕಿಳಿದವರಾಗಿದ್ದಾರೆ.

ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) 160 ಸ್ಥಾನ ಗೆದ್ದುಕೊಂಡು ಎರಡನೇ ಸ್ಥಾನದಲ್ಲಿದ್ದರೆ, ಮುಟ್ಟಾಹಿದಾ ಖೌಮಿ ಮೂವ್‌ಮೆಂಟ್ ಪಾಕಿಸ್ತಾನ್ (ಎಂಕ್ಯೂಎಂ–ಪಿ) 45 ಸ್ಥಾನ ಗೆದ್ದಿದ್ದು, ಮೂರನೇ ಸ್ಥಾನದಲ್ಲಿದೆ. 

ಫಲಿತಾಂಶದ ಪ್ರಕಾರ, ರಾಷ್ಟ್ರೀಯ ಸಂಸತ್ತಿಗೆ 101 ಪಕ್ಷೇತರರು ಆಯ್ಕೆಯಾಗಿದ್ದಾರೆ. ಪಿಎಂಎಲ್–ಎನ್‌ –75,  ಪಿಪಿಪಿ –54, ಎಂಕ್ಯುಎಂ–ಪಿ–17, ಜಮಿಯಾತ್ ಉಲೆಮಾ-ಇ-ಇಸ್ಲಾಂ (ಜೆಯುಐ) –4, ಪಿಎಂಎಲ್–ಕ್ವಾಯಿದ್ –3, ಇಷ್ತೆಹ್ಖಾಂ–ಇ–ಪಾಕಿಸ್ತಾನ್ ಪಾರ್ಟಿ (ಐಪಿಪಿ) –2, ಬಲೂಚಿಸ್ತಾನ ನ್ಯಾಷನಲ್‌ ಪಾರ್ಟಿ (ಬಿಎನ್‌ಪಿ) –2 ಕಡೆ ಗೆದ್ದಿವೆ.

ಸಂಸತ್ತಿನ 265 ಸ್ಥಾನಗಳಿಗೆ ನೇರ ಚುನಾವಣೆ ನಡೆದಿದೆ. ಸರ್ಕಾರ ರಚನೆಗೆ ಹಕ್ಕು ಪ್ರತಿಪಾದಿಸಲು ಕನಿಷ್ಠ 133 ಸದಸ್ಯರ ಬೆಂಬಲ ಅಗತ್ಯ. ಮಹಿಳೆಯರು ಮತ್ತು ಅಲ್ಪಸಂಖ್ಯಾತರಿಗೆ ಮೀಸಲಾದ ಸ್ಥಾನಗಳು ಸೇರಿದಂತೆ ಸಂಸತ್ತಿನ ಒಟ್ಟು ಬಲ 336 ಆಗಿದೆ. ಸರ್ಕಾರ ರಚನೆಗೆ ಈ ಪೈಕಿ ಸರಳ ಬಹುಮತವಾಗಿ 169 ಸ್ಥಾನ ಅಗತ್ಯವಾಗಿದೆ. ಚುನಾವಣೆಯಲ್ಲಿ ಒಟ್ಟು 6.05 ಕೋಟಿ ಜನರು ಮತದಾನದ ಹಕ್ಕು ಚಲಾಯಿಸಿದ್ದರು.

ಸ್ಥಳೀಯ ಮಾಧ್ಯಮ ವರದಿ ಮಾಡಿರುವಂತೆ, ಸಂವಿಧಾನದ ಪ್ರಕಾರ ಅಧ್ಯಕ್ಷ ಆರಿಫ್‌ ಅಲ್ವಿ ಅವರು, ಫೆಬ್ರುವರಿ 29ರ ಒಳಗೆ ರಾಷ್ಟ್ರೀಯ ಸಂಸತ್ತಿನ ಅಧಿವೇಶನ ಕರೆಯಬೇಕಾಗಿದೆ. ಚುನಾವಣಾ ಫಲಿತಾಂಶ ಪ್ರಕಟವಾದ ಅಥವಾ ಈ ಸಂಬಂಧ ಅಧಿಸೂಚನೆ ಹೊರಬಿದ್ದ 21 ದಿನದಲ್ಲಿ ಅಧಿವೇಶನ ಕರೆಯಬೇಕು ಎಂಬ ನಿಯಮವಿದೆ.

ಸಹಭಾಗಿ ಮೈತ್ರಿ ಸರ್ಕಾರ
ನವಾಜ್‌ ಷರೀಫ್‌ ಪ್ರಸ್ತಾವ ಇಸ್ಲಾಮಾಬಾದ್ (ಪಿಟಿಐ): ಸಂಸತ್ತಿನಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಪಾಕಿಸ್ತಾನ್‌ ಮುಸ್ಲಿಂ ಲೀಗ್ –ನವಾಜ್‌ (ಪಿಎಂಎಲ್–ಎನ್‌) ಮುಖ್ಯಸ್ಥ ಮಾಜಿ ಪ್ರಧಾನಿ ನವಾಜ್‌ ಷರೀಫ್ ಅವರು ‘ಸಹಭಾಗಿ ಮೈತ್ರಿ ಸರ್ಕಾರ’ ರಚಿಸುವ ಪ್ರಸ್ತಾವವನ್ನು ಮುಂದಿಟ್ಟಿದ್ದಾರೆ. ಚಿಹ್ನೆ ಕುರಿತ ವಿವಾದದಿಂದಾಗಿ ಇಮ್ರಾನ್‌ ಖಾನ್‌ ನೇತೃತ್ವದ ಪಾಕಿಸ್ತಾನ್‌ ತೆಹ್ರೀಕ್‌–ಇ–ಇನ್ಸಾಫ್‌ (ಪಿಟಿಐ) ಪಕ್ಷದ ಅಭ್ಯರ್ಥಿಗಳು ಪಕ್ಷೇತರರಾಗಿ ಸ್ಪರ್ಧಿಸಿದ್ದು ಒಟ್ಟು 101 ಕಡೆ ಗೆದ್ದಿದ್ದಾರೆ. ‘ಸಹಭಾಗಿ ಮೈತ್ರಿ ಸರ್ಕಾರ ರಚನೆ ಈಗಿನ ಏಕೈಕ ಸಾಧ್ಯತೆ. ಒಕ್ಕೂಟ ಸರ್ಕಾರ ರಚಿಸಲು ಮಾಜಿ ಮೈತ್ರಿಪಕ್ಷಗಳ ಜೊತೆಗೆ ಪಕ್ಷವು ಚರ್ಚೆ ಆರಂಭಿಸಿದೆ. ದೇಶದ ಹಿತಾಸಕ್ತಿ ದೃಷ್ಟಿಯಿಂದ ಪಿಟಿಐ ಹೊರತುಪಡಿಸಿ ಉಳಿದೆಲ್ಲ ಪಕ್ಷಗಳು ಕೈಜೋಡಿಸಬೇಕು‘ ಎಂದು ನವಾಜ್‌ ಷರೀಫ್‌ ಕೋರಿದ್ದಾರೆ.

‘ಗೆಲುವಿನ ಅಂತರಕ್ಕಿಂತ ತಿರಸ್ಕೃತ ಮತಗಳೇ ಹೆಚ್ಚು’

ಅಂತಿಮ ಫಲಿತಾಂಶದ ಪ್ರಕಾರ ಸಂಸತ್ತಿನ 24 ಕ್ಷೇತ್ರಗಳಲ್ಲಿ ಗೆಲುವಿನ ಅಂತರಕ್ಕಿಂತಲೂ ತಿರಸ್ಕೃತವಾದ ಮತಗಳೇ ಅಧಿಕವಾಗಿವೆ. ಈ ಅಂಶವೇ ಕಾನೂನು ಹೋರಾಟಕ್ಕೆ ಎಡೆಮಾಡಿಕೊಟ್ಟಿದ್ದು ಪರಾಭವಗೊಂಡಿರುವ ಅನೇಕ ಅಭ್ಯರ್ಥಿಗಳು ಫಲಿತಾಂಶದ ಮರುಪರಿಶೀಲನೆ ಕೋರಿ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಎನ್‌ಎ–59 ವಲಯ (ತಲಗಾಂಗ್–ಚಕ್ವಾಲ್‌) ಕ್ಷೇತ್ರದಲ್ಲಿ ಗರಿಷ್ಠ ಅಂದರೆ 24547 ಮತಗಳು ತಿರಸ್ಕೃತಗೊಂಡಿವೆ. ಇಲ್ಲಿ ಗೆಲುವಿನ ಅಂತರ 11964 ಮತಗಳು. ಅಂತೆಯೇ ಎನ್‌ಎ–236 (ಕರಾಚಿ ಪೂರ್ವ02) ಕ್ಷೇತ್ರದಲ್ಲಿ ಅತಿ ಕಡಿಮೆ ಅಂದರೆ 51 ಮತಗಳು ತಿರಸ್ಕೃತಗೊಂಡಿವೆ. ಮತದಾನ ನಡೆದ 265 ಕ್ಷೇತ್ರಗಳಲ್ಲಿ ಒಟ್ಟಾಗಿ ಸುಮಾರು 20 ಲಕ್ಷ ಮತಗಳು ತಿರಸ್ಕೃತಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT