ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಫಿಲಿಪ್ಪೀನ್ಸ್ ಜೊತೆಗೆ ಸಹಭಾಗಿತ್ವ ಸಾಧ್ಯತೆಗಳ ಪರಿಶೀಲನೆ –ಜೈಶಂಕರ್

Published : 26 ಮಾರ್ಚ್ 2024, 14:08 IST
Last Updated : 26 ಮಾರ್ಚ್ 2024, 14:08 IST
ಫಾಲೋ ಮಾಡಿ
Comments

ಮನಿಲಾ : ‘ದೇಶದ ಸಾರ್ವಭೌಮತ್ವ ಎತ್ತಿಹಿಡಿಯಲು ಭಾರತ ಎಂದಿಗೂ ಫಿಲಿಪ್ಪೀನ್ಸ್‌ಗೆ ನೆರವಾಗಲಿದೆ. ವಿವಿಧ ಕ್ಷೇತ್ರಗಳಲ್ಲಿ ಉಭಯ ದೇಶಗಳು ಸಹಭಾಗಿತ್ವ ಹೊಂದುವ ಸಾಧ್ಯತೆಗಳನ್ನು ಪರಿಶೀಲಿಸುತ್ತಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಹೇಳಿದ್ದಾರೆ.

ದಕ್ಷಿಣ ಚೀನಾ ಸಮುದ್ರ ವ್ಯಾಪ್ತಿಯಲ್ಲಿ ಜಲಗಡಿ ಕುರಿತಂತೆ ಚೀನಾದ ಜತೆಗೆ ವಿವಾದ ಇರುವ ಸಂದರ್ಭದಲ್ಲಿಯೇ ಅವರು ಈ ಮಾತು ಹೇಳಿದ್ದಾರೆ.

ಫಿಲಿಪ್ಪೀನ್ಸ್ ಜತೆಗೆ ಉತ್ಪಾದಕತೆಗೆ ಪೂರಕವಾದ ಚರ್ಚೆ ನಡೆದಿದೆ. ರಾಜಕೀಯ, ರಕ್ಷಣೆ, ನೌಕಾನೆಲೆ, ವಾಣಿಜ್ಯ ಮತ್ತು ಹೂಡಿಕೆ, ಮೂಲಸೌಕರ್ಯ, ಅಭಿವೃದ್ಧಿಗೆ ಸಹಕಾರ–ಈ ಕ್ಷೇತ್ರಗಳಲ್ಲಿ ಪರಸ್ಪರ ಬೆಂಬಲ ನೀಡುವ ಕುರಿತು ವಿಸ್ತೃತ ಚರ್ಚೆ ನಡೆಯಿತು ಎಂದು ತಿಳಿಸಿದರು.

ಜಾಗತಿಕ, ಪ್ರಾದೇಶಿಕ ನೆಲೆಯ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯಿತು. ಉಭಯ ದೇಶಗಳು ನಿಯಮಗಳಿಗೆ ಅನುಗುಣವಾಗಿ ಪರಸ್ಪರ ಸಹಕಾರ ವಿಸ್ತರಿಸಲು ಬದ್ಧವಾಗಿವೆ ಎಂದು ಅವರು ಹೇಳಿದ್ದಾರೆ. 

ದಕ್ಷಿಣ ಚೀನಾ ವಿವಾದದ ನಡುವೆಯೂ ಫಿಲಿಪ್ಪೀನ್ಸ್‌ ಜತೆಗೆ ರಕ್ಷಣಾ ಸಹಕಾರ ಹೊಂದುವ ಚಿಂತನೆ ಕುರಿತ ಪ್ರಶ್ನೆಗೆ, ‘ನಮ್ಮ ಅರ್ಹತೆಗಳ ಆಧಾರದಲ್ಲಿಯೇ ಸಹಕಾರ ಸಾಧ್ಯತೆಯನ್ನು ಪರಿಶೀಲಿಸಬೇಕು. ನಿರ್ದಿಷ್ಟ ಸ್ಥಿತಿಗೆ, ಸಂದರ್ಭವನ್ನು ತಾಳೆಹಾಕುವ ಅಗತ್ಯವಿಲ್ಲ’ ಎಂದರು.

‘ಉಭಯ ದೇಶಗಳ ನಡುವೆ ಈಗ ವಿಶ್ವಾಸ ಗಟ್ಟಿಯಾಗುತ್ತಿದೆ. ಹಲವು ಕ್ಷೇತ್ರಗಳಲ್ಲಿ ಸಹಭಾಗಿತ್ವದ ಸಾಧ್ಯತೆಗಳು ಹೆಚ್ಚಿವೆ. ರಕ್ಷಣಾ ಕ್ಷೇತ್ರ ಕೂಡ ಅದರಲ್ಲಿ ಒಂದು’ ಎಂದು ಹೇಳಿದರು. 

ಜೈಶಂಕರ್ ಭೇಟಿ ಫಲಪ್ರದ–ಸಿಂಗಪುರ ಸರ್ಕಾರ: 

ಸಿಂಗಪುರ ವರದಿ: ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್ ಅವರ ಉನ್ನತ ನಾಯಕರ ಜತೆಗಿನ ಭೇಟಿ ವಿವಿಧ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಹೊಂದಲು ಇರುವ ಸಾಧ್ಯತೆಗಳನ್ನು ಅರಿಯಲು ನೆರವಾಗಿದೆ ಎಂದು ಸರ್ಕಾರ ತಿಳಿಸಿದೆ.

ಕೇಂದ್ರ ಸರ್ಕಾರ ಈ ಕುರಿತು ಅಧಿಕೃತ ಹೇಳಿಕೆ ನೀಡಿದೆ. ಜೈಶಂಕರ್ ಅವರು ಮಾರ್ಚ್‌ 23 ರಿಂದ 25ರವರೆಗೆ ಸಿಂಗಪುರ ಪ್ರವಾಸ ಕೈಗೊಂಡಿದ್ದು, ಪ್ರಧಾನಿ ಲಿ ಸಿಯೆನ್‌ ಲೂಂಗ್, ಉಪ ಪ್ರಧಾನಿ ಲಾರೆನ್ಸ್‌ ವೊಂಗ್ ಅವರ ಜತೆಗೆ ಮಾತುಕತೆ ನಡೆಸಿದ್ದರು. 

ಸಾರ್ವಭೌಮತ್ವ ಗೌರವಿಸಲು ಭಾರತಕ್ಕೆ ಚೀನಾ ಆಗ್ರಹ

‘ದಕ್ಷಿಣ ಚೀನಾ ಸಾಗರದಲ್ಲಿನ ಜಲಗಡಿ ಕುರಿತ ವಿವಾದ ಎರಡು ದೇಶಗಳಿಗೆ ಸಂಬಂಧಿಸಿದ ವಿಷಯವಾಗಿದೆ. ಈ ಬಗ್ಗೆ ಮೂರನೆಯವರ ಹಸ್ತಕ್ಷೇಪ ಅನಗತ್ಯ’ ಎಂದು ಚೀನಾ ಮಂಗಳವಾರ ಪ್ರತಿಕ್ರಿಯಿಸಿದೆ. ‘ದಕ್ಷಿಣ ಚೀನಾ ಸಾಗರ ಕುರಿತು ತನ್ನ ಹಕ್ಕು ಪ್ರತಿಪಾದಿಸಿರುವ ಚೀನಾದ ನಿಲುವನ್ನು ಭಾರತ ಗೌರವಸಬೇಕು’ ಎಂದೂ ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಲಿನ್‌ ಜಿಯಾನ್ ಹೇಳಿದ್ದಾರೆ.  ದಕ್ಷಿಣ ಚೀನಾ ಸಾಗರ ಕುರಿತ ವಾಸ್ತವಾಂಶಗಳನ್ನು ಪರಿಶೀಲಿಸಬೇಕು. ಚೀನಾದ ಸಾರ್ವಭೌಮತ್ವವನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಭಾರತವು ಫಿಲಿಪ್ಪೀನ್ಸ್‌ನ ಸಾರ್ವಭೌಮತ್ವವನ್ನು ಬೆಂಬಲಿಸಲಿದೆ ಎಂಬ ಸಚಿವ ಎಸ್‌.ಜೈಶಂಕರ್ ಹೇಳಿಕೆಗೆ ಈ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT