ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ| ಭಾರತ ಮೂಲದ ವಿದ್ಯಾರ್ಥಿಯನ್ನು ಜೀವಂತ ಸಮಾಧಿ ಮಾಡಿದ ಮಾಜಿ ಪ್ರಿಯಕರ

ಪ್ರೀತಿ ವಂಚನೆಗೆ ಮಾಜಿ ಪ್ರಿಯಕರನಿಂದ ಪ್ರತೀಕಾರ
Published 6 ಜುಲೈ 2023, 13:20 IST
Last Updated 6 ಜುಲೈ 2023, 13:20 IST
ಅಕ್ಷರ ಗಾತ್ರ

ಮೆಲ್ಬೋರ್ನ್‌ : ಪ್ರೀತಿ ವಂಚಿತನಾಗಿದ್ದ ಮಾಜಿ ಪ್ರಿಯಕರನೊಬ್ಬ ಪ್ರತೀಕಾರದ ಕ್ರಮವಾಗಿ ಭಾರತ ಮೂಲದ, 21 ವರ್ಷದ ನರ್ಸಿಂಗ್ ವಿದ್ಯಾರ್ಥಿನಿಯನ್ನು ಅಪಹರಿಸಿ, ಸುಮಾರು 644 ಕಿ.ಮೀ ದೂರ ಕರೆದೊಯ್ದಿದ್ದು, ಜೀವಂತವಾಗಿ ಹೂತು ಹಾಕಿದ್ದಾನೆ.

ಈ ಬರ್ಬರ ಕೃತ್ಯ ಮಾರ್ಚ್‌ 5, 2021ರಲ್ಲಿ ದಕ್ಷಿಣ ಆಸ್ಟ್ರೇಲಿಯದ ಫ್ಲಿಂಡರ್ಸ್ ವಲಯದಲ್ಲಿ ನಡೆದಿದೆ. ತಾರಿಕ್‌ಜೊತ್ ಸಿಂಗ್ ಕೃತ್ಯ ಎಸಗಿದ್ದ ಆರೋಪಿ. ಮೃತ ನರ್ಸಿಂಗ್ ವಿದ್ಯಾರ್ಥಿನಿಯನ್ನು, ಆಡಿಲೇಡ್‌ನ ನಿವಾಸಿ ಜಾಸ್ಮೀನ್‌ ಕೌರ್ ಎಂದು ಗುರುತಿಸಲಾಗಿದೆ.

‘ಕೆಲಸ ಮಾಡುತ್ತಿದ್ದ ಸ್ಥಳದಿಂದ ಆಕೆಯನ್ನು ಅಪಹರಿಸಿದ್ದ ಆರೋಪಿ, ಕಾರಿನ ಡಿಕ್ಕಿಯಲ್ಲಿ ಹಗ್ಗದಿಂದ ಕಟ್ಟಿಹಾಕಿದ್ದ. ಬಳಿಕ ಸುಮಾರು 644 ಕಿ.ಮೀ ದೂರದವರೆಗೂ ಕಾರಿನಲ್ಲಿ ತೆರಳಿದ್ದ’ ಎಂದು ಪ್ರಕರಣದ ಕೋರ್ಟ್‌ ವಿಚಾರಣೆ ಆಧರಿಸಿ ಸ್ಥಳೀಯ ವೆಬ್‌ಗಳು ವರದಿ ಮಾಡಿವೆ.

ವಿದ್ಯಾರ್ಥಿನಿಯ ಕತ್ತು ಕೊಯ್ದಿದ್ದು, ಬಳಿಕ ಆಕೆಯನ್ನು ಜೀವಂತವಿರುವಂತೆಯೇ ಹೂತು ಹಾಕಿದ್ದ. ಬಹುಶಃ ಆಕೆ ಮಾರ್ಚ್‌ 6, 2021ರಂದು ಸತ್ತಿರಬಹುದು ಎನ್ನಲಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆಗೆ ಬಂದಾಗ ಕೃತ್ಯದ ವಿವರಗಳು ಬಹಿರಂಗವಾಗಿವೆ.

ವಕೀಲ ಕಾರ್ಮೆನ್ ಮ್ಯಾಟ್ಟೆಯೊ ಅವರು, ‘ಆಕೆಯ ಕೊಲೆಯಷ್ಟೇ ಅಲ್ಲ. ನರಳಿ ಪ್ರಾಣ ಬಿಡುವಂತೆ ಹತ್ಯೆ ಮಾಡಲಾಗಿದೆ. ಆಕೆಯ ಕೊಲೆ ಕಲ್ಪನೆಗೂ ಸಿಗದ ಕ್ರೂರತನವಾಗಿದೆ’ ಎಂದರು. ಜಾಸ್ಮೀನ್ ಅವರ ತಾಯಿ ಸೇರಿ ಕುಟುಂಬದ ಸದಸ್ಯರು ವಿಚಾರಣೆ ವೇಳೆ ಹಾಜರಿದ್ದರು.

ಮೊದಲು ಕೃತ್ಯ ನಿರಾಕರಿಸಿದ್ದ ಆರೋಪಿ, ‘ವಿದ್ಯಾರ್ಥಿನಿಯೇ ಆತ್ಮಹತ್ಯೆ ಮಾಡಿಕೊಂಡಿದ್ದು, ನಾನು ಹೂತು ಹಾಕಿದ್ದೆ’ ಎಂದಿದ್ದ. ಆದರೆ, ಕೃತ್ಯಕ್ಕೆ ಮೊದಲು ಆತ ಗ್ಲೋವ್ಸ್‌, ಹಗ್ಗ ಖರೀದಿ ಮಾಡಿದ್ದು ಸಿಸಿಟಿವಿ ಕ್ಯಾಮೆರಾವೊಂದರಲ್ಲಿ ಸೆರೆ ಆಗಿದ್ದು, ಕೃತ್ಯ ಸಾಬೀತಾಗಲು ನೆರವಾಯಿತು.

ಜೀವಾವಧಿ ಶಿಕ್ಷೆಗೆ ಒಳಗಾಗುವ ಸಂಭವವಿದ್ದು, ಕೋರ್ಟ್ ಮುಂದಿನ ತಿಂಗಳು ತೀರ್ಪು ಪ್ರಕಟಿಸುವ ಸಂಭವವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT