ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿವಾಹೇತರ ಸಂಬಂಧ: ಭಾರತೀಯ ಮೂಲದ ಸಂಸದ ರಾಜೀನಾಮೆ

Published : 19 ಜುಲೈ 2023, 14:00 IST
Last Updated : 19 ಜುಲೈ 2023, 14:00 IST
ಫಾಲೋ ಮಾಡಿ
Comments

ಸಿಂಗಪುರ: ಸಿಂಗಪುರದ ಅತಿದೊಡ್ಡ ವಿರೋಧ ಪಕ್ಷವಾದ ‘ವರ್ಕರ್ಸ್‌ ಪಾರ್ಟಿ’ಯ (ಡಬ್ಲ್ಯುಪಿ) ಸಂಸದ, ಭಾರತೀಯ ಮೂಲದ ಲಿಯಾನ್‌ ಪೆರೇರಾ ಅವರು ಸಂಸದೆಯೊಬ್ಬರ ಜತೆ ವಿವಾಹೇತರ ಸಂಬಂಧ ಹೊಂದಿದ್ದ ಕಾರಣಕ್ಕೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಪಕ್ಷ ಬುಧವಾರ ಪ್ರಕಟಿಸಿದೆ.

ಪರೇರಾ (53) ಅವರು ತಮ್ಮದೇ ಪಕ್ಷದ ಸಂಸದೆ ನಿಕೋಲ್‌ ಸಿಹಾ (36) ಅವರೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರು. ಈ ಇಬ್ಬರೂ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರೀತಮ್‌ ಸಿಂಗ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಸಂಸತ್ತಿನ ಸ್ಪೀಕರ್‌ ತಾನ್‌ ಚುವಾನ್‌ ಜಿನ್‌ ಮತ್ತು ಪೀಪಲ್ಸ್‌ ಆ್ಯಕ್ಷನ್‌ ಪಾರ್ಟಿಯ (ಪಿಎಪಿ) ಸಂಸದೆ ಚೆಂಗ್‌ ಲಿ ಹುಯಿ ಅವರೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಸೋಮವಾರ ರಾಜೀನಾಮೆ ನೀಡಿದ್ದರು. ತಾಜ್‌ ಮತ್ತು ಚೆಂಗ್‌ ಇಬ್ಬರೂ ಸಂಸದ ಸ್ಥಾನದ ಜತೆಗೆ ಪಕ್ಷಕ್ಕೂ ರಾಜೀನಾಮೆ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. 

ಪರೇರಾ ಮತ್ತು ಸಿಹಾ ಇಬ್ಬರೂ ಬೇರೆಯವರೊಂದಿಗೆ ವಿವಾಹಿತರಾಗಿದ್ದು, ಮಕ್ಕಳನ್ನು ಹೊಂದಿದ್ದಾರೆ.

‘ಪರೇರಾ ಮತ್ತು ಸಿಹಾ ಅವರು 2020ರ ಸಾರ್ವತ್ರಿಕ ಚುನಾವಣೆಯ ಬಳಿಕ ತಮ್ಮ ನಡುವೆ ಸಂಬಂಧ ಬೆಳೆದಿತ್ತು ಎಂಬುದನ್ನು ಒಪ್ಪಿಕೊಂಡಿದ್ದಾರೆ. ಆದರೆ ಕೆಲ ಕಾಲದ ಬಳಿಕ ಆ ಸಂಬಂಧ ನಿಂತು ಹೋಯಿತು’ ಎಂದೂ ತಿಳಿಸಿರುವುದಾಗಿ ಸಿಂಗ್‌ ವಿವರಿಸಿದರು. 2021ರಲ್ಲಿ ಈ ರೀತಿಯ ಆರೋಪಗಳು ಕೇಳಿಬಂದಾಗ, ಅದರಲ್ಲಿ ಹುರುಳಿಲ್ಲ ಎಂದು ಈ ಇಬ್ಬರು ಆರೋಪಗಳನ್ನು ನಿರಾಕರಿಸಿದ್ದರು ಎಂದು ಅವರು ಸ್ಮರಿಸಿದರು. 

ಈ ಇಬ್ಬರ ವಿಡಿಯೊ ಕ್ಲಿಪ್‌ ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಹಂಚಿಕೆಯಾಗಿದ್ದು, ಅದಾದ ಎರಡೇ ದಿನಗಳಲ್ಲಿಯೇ ಈ ಬೆಳವಣಿಗೆ ನಡೆದಿದೆ. ಇಬ್ಬರು ಹಿರಿಯ ಸದಸ್ಯರ ನಡುವಿನ ಅನುಚಿತ ಸಂಬಂಧದ ಕುರಿತು ಪರಿಶೀಲಿಸಲಾಗುವುದು ಎಂದು ಪಕ್ಷ ತಿಳಿಸಿದೆ.

2020ರ ಚನಾವಣೆ ಸಂದರ್ಭದಲ್ಲಿ ಊಟ ಮಾಡುವಾಗ ಅಭ್ಯರ್ಥಿಯಾದ ಸಿಹಾ ಅವರ ಕೈಯನ್ನು ಪರೇರಾ  ಸವರುತ್ತಿರುವ 15 ಸೆಕೆಂಡ್‌ಗಳ ವಿಡಿಯೊ ಫೆಸ್‌ಬುಕ್‌ನಲ್ಲಿ ಹಂಚಿಕೆಯಾಗಿದೆ. ಆದರೆ ಈ ವಿಡಿಯೊ ಎಲ್ಲಿ ಮತ್ತು ಯಾವಾಗ ಚಿತ್ರಿಸಲಾಗಿದೆ ಎಂಬುದು ಗೊತ್ತಾಗಿಲ್ಲ.

ಪರೇರಾ 2015ರಲ್ಲಿ ರಾಜಕೀಯ ಜೀವನ ಆರಂಭಿಸಿದರು. ರಾಜಕೀಯಕ್ಕೆ ಬರುವ ಮೊದಲು ಅವರು ನಾಗರಿಕ ಸೇವೆಯಲ್ಲಿದ್ದರು. ನಂತರ ‘ಬ್ಯುಸಿನೆಸ್‌ ರಿಸರ್ಚ್‌ ಅಂಡ್‌  ಕನ್ಸಲ್ಟಿಂಗ್‌ ಏಜೆನ್ಸಿ’ಯ ಸಹ ಸ್ಥಾಪಕ ಮತ್ತು ಸಿಇಒ ಆಗಿ ಕಾರ್ಯ ನಿರ್ವಹಿಸಿದ್ದರು. ಸಿಹಾ ಅವರು 2015ರಲ್ಲಿ ವರ್ಕರ್ಸ್‌ ಪಾರ್ಟಿ ಸೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT