ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಕುನಾಯಿಯನ್ನು ಬಿಟ್ಟು ಬರಲಾರೆ: ಉಕ್ರೇನ್‌‌ನಲ್ಲಿ ಸಿಲುಕಿರುವ ಭಾರತದ ವಿದ್ಯಾರ್ಥಿ

ನವದೆಹಲಿ: ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತದ ಮೂರನೇ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ತನ್ನ ಸಾಕು ನಾಯಿಯನ್ನು ಬಿಟ್ಟು ದೇಶ ತೊರೆಯುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ.

ಪೂರ್ವ ಉಕ್ರೇನ್‌ನ ಹಾರ್ಕಿವ್ ರಾಷ್ಟ್ರೀಯ ವಿಶ್ವವಿದ್ಯಾನಿಲಯದಲ್ಲಿ ರೇಡಿಯೊ ಎಲೆಕ್ಟ್ರಾನಿಕ್ಸ್‌ ಓದುತ್ತಿರುವ ರಿಷಬ್ ಕೌಶಿಕ್, 'ನಾನು ವಿಮಾನದಲ್ಲಿ ತೆರಳುವಾಗ ನನ್ನ ನಾಯಿಯು ನನ್ನೊಂದಿಗೆ ಬರಲು ಎಲ್ಲ ದಾಖಲೆಗಳು ಮತ್ತು ಕ್ಲಿಯರೆನ್ಸ್‌ಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದೇನೆ. ಆದರೆ ಹೆಚ್ಚು ಹೆಚ್ಚು ದಾಖಲೆಗಳನ್ನು ಕೇಳುತ್ತಿರುವ ಅಧಿಕಾರಿಗಳಿಂದಾಗಿ ಇದು ಅಸಾಧ್ಯ ಎನ್ನುವಂತಾಗಿದೆ' ಎಂದಿದ್ದಾರೆ.

'ಅವರು ನನ್ನ ವಿಮಾನಯಾನದ ಟಿಕೆಟ್ ಕೇಳುತ್ತಿದ್ದಾರೆ. ಉಕ್ರೇನ್ ವಾಯುಮಾರ್ಗವನ್ನು ಮುಚ್ಚಿರುವಾಗ ನಾನು ವಿಮಾನದ ಟಿಕೆಟ್ ಅನ್ನು ಹೇಗೆ ಹೊಂದಿರುತ್ತೇನೆ?. ದೆಹಲಿಯ ಭಾರತ ಸರ್ಕಾರದ ಅನಿಮಲ್ ಕ್ವಾರಂಟೈನ್ ಮತ್ತು ಪ್ರಮಾಣೀಕರಣ ಸೇವೆ (ಎಕ್ಯೂಸಿಎಸ್) ಹಾಗೂ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ' ಎಂದು ದೂರಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ, ನನ್ನ ಪರಿಸ್ಥಿತಿಯ ಕುರಿತು ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಿಬ್ಬಂದಿಯೊಬ್ಬರಿಗೆ ಕರೆ ಮಾಡಿದೆ. ಆದರೆ ಅವರು ನನ್ನನ್ನು ನಿಂದಿಸಿದರು. ಸಹಕಾರ ನೀಡಲಿಲ್ಲ' ಎಂದು ಆರೋಪಿಸಿದ್ದಾರೆ.

'ಕಾನೂನಿನ ಪ್ರಕಾರ ಭಾರತ ಸರ್ಕಾರವು ನನಗೆ ಅಗತ್ಯವಿರುವ ಎನ್‌ಒಸಿ (ನಿರಾಕ್ಷೇಪಣಾ ಪತ್ರ) ನೀಡಿದ್ದರೆ, ಇಷ್ಟೊತ್ತಿಗಾಗಲೇ ನಾನು ಭಾರತದಲ್ಲಿರುತ್ತಿದ್ದೆ' ಎಂದಿದ್ದಾರೆ.

ರಷ್ಯಾ ಪಡೆಗಳು ಉಕ್ರೇನ್ ರಾಜಧಾನಿ ಕೀವ್ ನಗರದ ಮೇಲೆ ದಾಳಿ ನಡೆಸುತ್ತಿರುವಾಗ ಕೌಶಿಕ್, ಬಂಕರ್‌ನಲ್ಲಿ ಅಡಗಿಕೊಂಡಿದ್ದರಂತೆ. ಸೈರನ್, ಗುಂಡೇಟು ಮತ್ತು ಬಾಂಬ್‌ಗಳ ಸದ್ದಿನ ನಡುವೆ ನಲುಗಿದ್ದ ತನ್ನ ನಾಯಿಯನ್ನು ಸಂತೈಸಲು ಅವರು ಬಂಕರ್‌‌ನಿಂದ ಹೊರಬರಬೇಕಾಯಿತು.

ಕಳೆದ ತಿಂಗಳು ಹಾರ್ಕಿವ್‌ನಲ್ಲಿ ನಾಯಿಮರಿ ದೊರಕಿತ್ತು ಎಂದು ವಿದ್ಯಾರ್ಥಿ ತಿಳಿಸಿದ್ದಾರೆ.

ವಿಡಿಯೊದಲ್ಲಿ ಪಪ್ಪಿಯನ್ನು ಪರಿಚಯಿಸಿದ ಅವರು, 'ಇಲ್ಲಿ ಕೇಳಿಬರುತ್ತಿರುವ ಬಾಂಬ್ ಶಬ್ದದಿಂದಾಗಿ ನಾಯಿಮರಿ 'ಗಾಬರಿಗೊಂಡಿದ್ದು, ಕಣ್ಣೀರು ಸುರಿಸುತ್ತಿದೆ'. ನಿಮಗೆ ಸಾಧ್ಯವಾದರೆ ನಮಗೆ ಸಹಾಯ ಮಾಡಿ. ಫೆ.27ಕ್ಕೆ ಭಾರತಕ್ಕೆ ಹಿಂತಿರುಗಲು ನನಗೆ ವಿಮಾನ ನಿಗಧಿಯಾಗಿತ್ತು. ಆದರೂ ನಾನಿಲ್ಲೇ ಸಿಲುಕಿಕೊಂಡಿದ್ದೇನೆ. ಕೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಕೂಡ ಸಹಾಯ ಮಾಡಲಿಲ್ಲ. ಯಾರೊಬ್ಬರಿಂದಲೂ ನಮಗೆ ಸೂಕ್ತ ಪ್ರತಿಕ್ರಿಯೆ ದೊರಕುತ್ತಿಲ್ಲ' ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT