ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

100ನೇ ದಿನಕ್ಕೆ ಇಸ್ರೇಲ್–ಹಮಾಸ್ ಸಂಘರ್ಷ

ಹಮಾಸ್‌ ನಾಶಪಡಿಸುವುದನ್ನು ಯಾರೂ ತಡೆಯಲಾಗದು: ನೆತನ್ಯಾಹು
Published 14 ಜನವರಿ 2024, 14:03 IST
Last Updated 14 ಜನವರಿ 2024, 14:03 IST
ಅಕ್ಷರ ಗಾತ್ರ

ಗಾಜಾ ಪಟ್ಟಿ (ಎಎಫ್‌ಪಿ): ಗಾಜಾಪಟ್ಟಿಯಲ್ಲಿ ಇಸ್ರೇಲ್‌, ಹಮಾಸ್ ಬಂಡುಕೋರರ ನಡುವಿನ ಸಂಘರ್ಷವು ಭಾನುವಾರ 100 ದಿನಕ್ಕೆ ಕಾಲಿಟ್ಟಿತು. ಹಮಾಸ್‌ನ ಅಪ್ರಚೋದಿತ ದಾಳಿ ಬಳಿಕ ಅಕ್ಟೋಬರ್ 7ರಂದು ಸಂಘರ್ಷ ಆರಂಭವಾಗಿತ್ತು. 

ಈ ಸಂಘರ್ಷದಿಂದಾಗಿ ಹಮಾಸ್‌ನ ನಿಯಂತ್ರಣದಲ್ಲಿರುವ ಗಾಜಾದಲ್ಲಿ ಅಂದಾಜು 24 ಲಕ್ಷ ಜನರು ತೀವ್ರ ಸಂಕಷ್ಟದಲ್ಲಿದ್ದಾರೆ. ವಿಶ್ವಸಂಸ್ಥೆ ಮತ್ತು ಇತರೆ ನೆರವು ತಂಡಗಳ ಸಹಾಯದಿಂದಾಗಿ ಇವರ ಸಂಕಷ್ಟವು ತುಸು ತಗ್ಗಿದೆ.  

ಹಮಾಸ್‌ ಬಂಡುಕೋರರನ್ನು ಹತ್ತಿಕ್ಕುವ ಗುರಿಯೊಂದಿಗೆ ಇಸ್ರೇಲ್‌ ನಿರಂತರ ದಾಳಿ ನಡೆಸುತ್ತಿದೆ. ಇದು, ನಾಗರಿಕರ ಸಾವಿಗೆ ಕಾರಣವಾಗಿದೆ ಎಂದು ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮೇಲೆ ಅಂತರರಾಷ್ಟ್ರೀಯ ಒತ್ತಡ ಹೆಚ್ಚಿದೆ. ‘ಆದರೆ, ಹಮಾಸ್‌ ನಾಶಪಡಿಸುವುದನ್ನು ಯಾರೂ ತಡೆಯಲಾಗದು’ ಎಂದು ನೆತನ್ಯಾಹು ಘೋಷಿಸಿದ್ದಾರೆ.

ಗಾಜಾದ ಹಮಾಸ್‌ ಸರ್ಕಾರದ ಮಾಧ್ಯಮ ಕಚೇರಿಯು ಭಾನುವಾರ ಹೇಳಿಕೆ ನೀಡಿದ್ದು, ‘ಗಾಜಾ ಪಟ್ಟಿಯ ವಿವಿಧೆಡೆ ಶನಿವಾರ ರಾತ್ರಿ ನಡೆದ ದಾಳಿಯಲ್ಲಿ 100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ’ ಎಂದು ತಿಳಿಸಿದೆ.

ಅತ್ತ, ಯೆಮೆನ್‌ನಲ್ಲಿ ಇರಾನ್‌ ಬೆಂಬಲಿತ ಹುತಿ ಬಂಡುಕೋರರ ನೆಲೆಯನ್ನು ಗುರಿಯಾಗಿಸಿ ಶನಿವಾರ ದಾಳಿ ನಡೆದಿದೆ. ಇದು, ಸಂಘರ್ಷವು ಗಾಜಾದ ಇನ್ನಷ್ಟು ಪ್ರದೇಶಕ್ಕೆ ವ್ಯಾಪಿಸಬಹುದು ಎಂಬ ಆತಂಕವನ್ನು ಮೂಡಿಸಿದೆ.  

ಸಾಗರದ ಮಾರ್ಗವನ್ನು ಗುರಿಯಾಗಿಸಿ ಹುತಿ ಬಂಡುಕೋರರು ನಡೆಸುತ್ತಿರುವ ಡ್ರೋನ್‌ ಮತ್ತು ಕ್ಷಿಪಣಿ ದಾಳಿಯನ್ನು ತಡೆಯಲು ಅಮೆರಿಕ ಮತ್ತು ಬ್ರಿಟಿಷ್ ಪಡೆಗಳು ಸಹ ಪ್ರತಿದಾಳಿಯನ್ನು ತೀವ್ರಗೊಳಿಸಿವೆ.

ಇಸ್ರೇಲ್‌–ಲೆಬನಾನ್‌ ಗಡಿಯಲ್ಲಿ ಹಮಾಸ್‌ ಜೊತೆಗೆ ಸಹಯೋಗ ಹೊಂದಿರುವ ಹಿಜ್ಬುಲ್ಲಾ ಜೊತೆಗೆ ಇಸ್ರೇಲ್‌ ಸೇನೆಯ ಚಕಮಕಿ ಮುಂದುವರಿದಿದೆ. ನಾಲ್ವರು ಬಂದೂಕುಧಾರಿಗಳನ್ನು ಹತ್ಯೆ ಮಾಡಿದ್ದಾಗಿ ಇಸ್ರೇಲ್‌ ಸೇನೆ ಹೇಳಿಕೊಂಡಿದೆ.

ಸಂಘರ್ಷ ಆರಂಭವಾದ ಬಳಿಕ ಇಲ್ಲಿಯವರೆಗೂ ಇಸ್ರೇಲ್‌ನಲ್ಲಿ ಬಹುತೇಕ ನಾಗರಿಕರು ಸೇರಿದಂತೆ 1,140 ಜನರು ಮೃತಪಟ್ಟಿದ್ದಾರೆ. ಹಮಾಸ್ ಬಂಡುಕೋರರು 250 ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದರು, ಇವರಲ್ಲಿ 132 ಮಂದಿ ಇನ್ನೂ ಹಮಾಸ್‌ ವಶದಲ್ಲಿದ್ದಾರೆ. ಕನಿಷ್ಠ 25 ಒತ್ತೆಯಾಳುಗಳ ಹತ್ಯೆಯಾಗಿರುವ ಶಂಕೆ ಇದೆ.

ಇಸ್ರೇಲ್‌ ಸೇನೆಯ ಸತತ ದಾಳಿಯ ಪರಿಣಾಮ ಹಮಾಸ್‌ ಪ್ರಾಬಲ್ಯವುಳ್ಳ ಪ್ಯಾಲೆಸ್ತೀನ್ ವಲಯದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಇದುವರೆಗೂ ಸುಮಾರು 23,843 ಜನರು ಮೃತಪಟ್ಟಿದ್ದಾರೆ.

100 ದಿನಗಳಿಂದ ಹಮಾಸ್‌ ವಶದಲ್ಲಿರುವ ಒತ್ತೆಯಾಳುಗಳ ಬಿಡುಗಡೆಗೆ ಆಗ್ರಹಿಸಿ ಇಸ್ರೇಲ್‌ ಸರ್ಕಾರದ ಮೇಲೆ ಒತ್ತಡ ಹೆಚ್ಚಿದೆ. ಇಸ್ರೇಲ್‌ನಲ್ಲಿ ಶನಿವಾರವೂ ಬೃಹತ್‌ ರ‍್ಯಾಲಿ ನಡೆದಿದ್ದು, ಸಾವಿರಕ್ಕೂ ಅಧಿಕ ಜನರು ಭಾಗವಹಿಸಿದ್ದರು.

’ಟ್ಯಾಗ್‌‘ ಧರಿಸಿ ಒಗ್ಗಟ್ಟು ಪ್ರದರ್ಶನ

ಜೆರುಸಲೇಂ: ಹಮಾಸ್‌ ವಶದಲ್ಲಿರುವ ಒತ್ತೆಯಾಳುಗಳ ಪರ ಒಗ್ಗಟ್ಟು ಪ್ರದರ್ಶನದ ಕ್ರಮವಾಗಿ ಇಸ್ರೇಲಿಯನ್ನರು ಡಾಗ್ ಟ್ಯಾಗ್ (ನಾಯಿಗೆ ಕಟ್ಟುವ ಬಿಲ್ಲೆ) ಧರಿಸಿದ್ದಾರೆ. ಅಲ್ಲದೆ ಇಸ್ರೇಲ್‌ ನಗರದ ವಿವಿಧ ಅಂಗಡಿ ಕೆಫೆಗಳು ಟಿ.ವಿಗಳಲ್ಲೂ ಇಂಥದೇ ಟ್ಯಾಗ್ ಅನ್ನು ಪ್ರದರ್ಶಿಸಲಾಗಿದೆ. ಮಿಲಿಟರಿ ಶೈಲಿಯ ಇಂತಹ ಟ್ಯಾಗ್‌ ಅನ್ನು ಕತ್ತಿನ ಚೈನ್‌ಗೆ ಹೊಂದಿಸಿಕೊಂಡಿದ್ದಾರೆ. ಇಂಥ ಟ್ಯಾಗ್‌ಗಳಲ್ಲಿ ‘ನಮ್ಮ ಹೃದಯಗಳನ್ನು ಗಾಜಾದಲ್ಲಿ ಒತ್ತೆ ಇರಿಸಿಕೊಳ್ಳಲಾಗಿದೆ’ ‘ಒಗ್ಗಟ್ಟಿನಿಂದಲೇ ಗೆಲುವು’ ಎಂಬ ಘೋಷಣೆಗಳಿವೆ. ಒತ್ತೆಯಾಳುಗಳ ಪರವಾಗಿ ಎಲ್ಲರೂ ಒಂದಲ್ಲ ಒಂದು ರೀತಿ ಬೆಂಬಲ ತೋರುತ್ತಿದ್ದಾರೆ. ಇದು  ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಮೂಡಿಸುತ್ತಿದೆ ಎಂದು 36 ವರ್ಷದ ಶಾಯ್ನಾ ರೊತ್‌ ಅವರು ಟೆಲ್‌ ಅವಿವ್‌ನಲ್ಲಿ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT