ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಾಲದಲ್ಲಿ ಪ್ರತ್ಯುತ್ತರ –ಇಸ್ರೇಲ್‌ ಇಂಗಿತ

ಪ್ರತಿರೋಧ ಬೇಡ, ಸಂಯಮ ಇರಲಿ –ವಿವಿಧ ರಾಷ್ಟ್ರ ನಾಯಕರ ಸಲಹೆ
Published 16 ಏಪ್ರಿಲ್ 2024, 14:35 IST
Last Updated 16 ಏಪ್ರಿಲ್ 2024, 14:35 IST
ಅಕ್ಷರ ಗಾತ್ರ

ಜೆರುಸಲೇಂ: ‘ಇರಾನ್‌ ಸೇನೆ ಕಳೆದ ವಾರ ನಡೆಸಿದ ದಾಳಿಗೆ ಸಕಾಲದಲ್ಲಿ ಪ್ರತ್ಯುತ್ತರ ನೀಡುತ್ತೇವೆ’ ಎಂದು ಇಸ್ರೇಲ್‌ ಸೇನೆಯ ಮುಖ್ಯಸ್ಥರು ಹೇಳಿದ್ದಾರೆ. ಆದರೆ, ದಾಳಿಯ ಸ್ವರೂಪದ ಕುರಿತು ವಿವರ ನೀಡಿಲ್ಲ.

ಮಧ್ಯಪ್ರಾಚ್ಯದಲ್ಲಿ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣ ಆಗದಂತೆ ತಡೆಯುವ ಕ್ರಮಕ್ಕೆ ಪ್ರತಿರೋಧ ತೋರಬಾರದು ಎಂದು ವಿಶ್ವ ನಾಯಕರು ಮನವಿ ಮಾಡಿದ ನಂತರವೂ ಅವರು ಈ ರೀತಿ ಹೇಳಿದ್ದಾರೆ.

ಸಿರಿಯಾದ ರಾಜಧಾನಿಯಲ್ಲಿ ಇರಾನ್‌ನ ದೂತಾವಾಸದ ಕಟ್ಟಡದ ಮೇಲೆ ಎರಡು ವಾರಗಳ ಹಿಂದೆ ಇಸ್ರೇಲ್‌ ನಡೆಸಿತ್ತು ಎನ್ನಲಾದ ದಾಳಿಗೆ ಪ್ರತಿಯಾಗಿ ಇರಾನ್‌ ಸೇನೆ ಕಳೆದ ವಾರಾಂತ್ಯ ದಾಳಿ ನಡೆಸಿತ್ತು. ಈ ಬೆಳವಣಿಗೆಗೆ ಹಲವು ರಾಷ್ಟ್ರಗಳು ಆತಂಕ ವ್ಯಕ್ತಪಡಿಸಿದ್ದವು. ಸಹಜ ಸ್ಥಿತಿ ಕಾಯ್ದುಕೊಳ್ಳುವಂತೆ ಕೋರಿದ್ದವು.

ದಾಳಿ ಕುರಿತು ಪ್ರತಿಕ್ರಿಯಿಸಿರುವ ಇಸ್ರೇಲ್‌ ಸೇನೆ ಮುಖ್ಯಸ್ಥ ಲೆಫ್ಟಿನಂಟ್‌ ಜನರಲ್ ಹೆರ್ಜಿ ಹಲೆವಿ ಅವರು, ‘ಇರಾನ್‌ ದಾಳಿ ಹಿನ್ನೆಲೆಯಲ್ಲಿ ಅನುಸರಿಸಬೇಕಾದ ಮುಂದಿನ ನಡೆ ಕುರಿತು ಚಿಂತನೆ ನಡೆದಿದೆ’ ಎಂದರು.

ಸೇನೆಯ ವಕ್ತಾರ ಅಡ್ಮಿರಲ್ ಡೇನಿಯಲ್ ಹಗರಿ ಅವರು, ಸಕಾಲದಲ್ಲಿ ಇಸ್ರೇಲ್‌ ಪ್ರತ್ಯುತ್ತರ ನೀಡಲಿದೆ ಎಂದು ತಿಳಿಸಿದರು. ಇರಾನ್‌ ದಾಳಿಯಿಂದ ಭಾಗಶಃ ಹಾನಿಗೊಂಡಿರುವ ದಕ್ಷಿಣ ಇಸ್ರೇಲ್‌ನಲ್ಲಿನ ವಾಯುನೆಲೆಯ ಬಳಿ ಈ ಇಬ್ಬರೂ ಮಾತನಾಡಿದರು.

ಸಂಭವನೀಯ ಪ್ರತಿರೋಧ ಕುರಿತು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೂ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿದರು. ಆದರೆ, ಮುಂದಿನ ನಡೆ ಕುರಿತು ಸರ್ಕಾರ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿಲ್ಲ.

ಅಮೆರಿಕದ ಜನಪ್ರತಿನಿಧಿ ಸ್ಟೀವ್ ಸ್ಕ್ಯಾಲೈಸ್‌ ಜೊತೆಗೆ ಮಾತನಾಡಿದ ನೆತನ್ಯಾಹು ಅವರು, ‘ಇಸ್ರೇಲ್‌ ತನ್ನನ್ನು ತಾನು ರಕ್ಷಿಸಿಕೊಳ್ಳಲು ಏನು ಬೇಕೋ ಅದನ್ನು ಮಾಡಲಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರತಿದಾಳಿ ನಡೆಸುವ ಇಂಗಿತವನ್ನು ಇಸ್ರೇಲ್‌ ಸರ್ಕಾರ ವ್ಯಕ್ತಪಡಿಸುತ್ತಿದ್ದಂತೆ, ಪ್ರತಿರೋಧ ತೋರದಿರುವಂತೆ ಇಸ್ರೇಲ್ ಮೇಲೆ ಅಮೆರಿಕ ಸೇರಿದಂತೆ ಅಂತರರಾಷ್ಟ್ರೀಯಮಟ್ಟದ ಒತ್ತಡ ಹೆಚ್ಚಾಗಿದೆ.

ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು, ಮಧ್ಯಪ್ರಾಚ್ಯದಲ್ಲಿ ಹಿಂಸಾಚಾರ ತಡೆಯಲು ಉಭಯ ಬಣಗಳು ಸಂಯಮ ತೋರಬೇಕು ಎಂದು ಸಲಹೆ ನೀಡಿದ್ದಾರೆ.

ಅಮೆರಿಕದ ರಾಷ್ಟ್ರೀಯ ಭದ್ರತಾ ಮಂಡಳಿ ವಕ್ತಾರ ಜಾನ್‌ ಕಿರ್ಬಿ ಅವರು, ‘ಪ್ರತಿದಾಳಿ ಕುರಿತಂತೆ ಇಸ್ರೇಲ್‌ನ ನೀತಿ, ತಿರ್ಮಾನಗಳಲ್ಲಿ ನಾವು ಭಾಗಿಯಾಗಿಲ್ಲ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT