ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾನ್ಮಾರ್‌ ಸೇನಾ ದಂಗೆಯ ಕುರಿತು ಚರ್ಚೆ ನಡೆಸಿದ ಭಾರತ- ಅಮೆರಿಕ

Last Updated 10 ಫೆಬ್ರುವರಿ 2021, 4:09 IST
ಅಕ್ಷರ ಗಾತ್ರ

ನವದೆಹಲಿ: ಮ್ಯಾನ್ಮಾರ್‌ನಲ್ಲಿ ತಲೆದೋರಿರುವ ಬಿಕ್ಕಟ್ಟಿನ ವಿಚಾರವಾಗಿ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್‌ ಮತ್ತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟೊನಿ ಬ್ಲಿಂಕೆನ್‌ ಮಂಗಳವಾರ ಮಾತುಕತೆ ನಡೆಸಿದ್ದಾರೆ.

'ಮ್ಯಾನ್ಮಾರ್‌ನಲ್ಲಿ ತಲೆದೋರಿರುವ ಬಿಕ್ಕಟ್ಟು, ಅಮೆರಿಕ- ಭಾರತದ ನಡುವಿನ ಪಾಲುದಾರಿಕೆಯ ಬಲವನ್ನು ಗಟ್ಟಿಗಳಿಸುವುದು ಸೇರಿದಂತೆ ಹಲವು ಪ್ರಮುಖ ವಿಚಾರಗಳ ಬಗ್ಗೆ ಇಬ್ಬರು ನಾಯಕರು ಚರ್ಚಿಸಿದ್ದಾರೆ' ಎಂದು ಅಮೆರಿಕ ವಿದೇಶಾಂಗ ಸಚಿವಾಲಯದ ವಕ್ತಾರ ನೆಡ್‌ ಪ್ರೈಸ್ ಮಾಹಿತಿ ನೀಡಿದ್ದಾರೆ.

'ದೂರವಾಣಿ ಮೂಲಕ ಮಾತನಾಡಿರುವ ಇಬ್ಬರು ನಾಯಕರು ಮ್ಯಾನ್ಮಾರ್‌ನ ಸೇನಾ ದಂಗೆ, ಹದಗೆಟ್ಟ ಕಾನೂನು ಮತ್ತು ಪ್ರಜಾತಾಂತ್ರಿಕ ಪ್ರಕ್ರಿಯೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ' ಎಂದು ಪ್ರೈಸ್ ಹೇಳಿದ್ದಾರೆ.

'ಪ್ರಚಲಿತ ಪ್ರಾದೇಶಿಕ ವಿದ್ಯಮಾನ, ಕೋವಿಡ್‌ ಮತ್ತು ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸುವುದರ ಬಗ್ಗೆಯೂ ಚರ್ಚೆ ನಡೆಸಲಾಯಿತು' ಎಂದು ನೆಡ್‌ ಪ್ರೈಸ್ ತಿಳಿಸಿದ್ದಾರೆ.

ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಮೇಲೆ ಮ್ಯಾನ್ಮಾರ್‌ನಲ್ಲಿ ಕಳೆದ ವಾರ ಸೇನಾ ಆಡಳಿತ, ಜನರಿಂದ ಆಯ್ಕೆಯಾದ ಸರ್ಕಾರವನ್ನು ಉರುಳಿಸಿ, ದೇಶದಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿದೆ. ಆಡಳಿತಾರೂಢ ಸರ್ಕಾರದ ನಾಯಕಿ ಆಂಗ್ ಸಾನ್ ಸೂಕಿ ಸೇರಿದಂತೆ ಉನ್ನತ ರಾಜಕೀಯ ವ್ಯಕ್ತಿಗಳನ್ನು ಬಂಧಿಸಿದೆ.

ಮ್ಯಾನ್ಮಾರ್‌ನ ರಾಜಧಾನಿ ನೈಪಿತಾವ್‌ನಲ್ಲಿ ಮಿಲಿಟರಿ ಆಡಳಿತದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಂಡಿದೆ. ಪ್ರತಿಭಟನಕಾರರನ್ನು ನಿಯಂತ್ರಿಸಲು ಪೊಲೀಸರು ಸೋಮವಾರ ಜಲಫಿರಂಗಿ ಪ್ರಯೋಗ ಮಾಡಿದ್ದಾರೆ.

ಮ್ಯಾನ್ಮಾರ್‌ನಲ್ಲಿ ಐದು ದಶಕಗಳಿಂದ ಮಿಲಿಟರಿ ಆಡಳಿತವಿತ್ತು. ಆದರೆ, 2012ರಿಂದ ದೇಶದಲ್ಲಿ ಮಿಲಿಟರಿ ಹಿಡಿತ ಕಡಿಮೆಯಾಗುತ್ತಾ ಬಂತು. 2015ರಲ್ಲಿ ಸಾನ್ ಸೂಕಿ ಅವರ ಪಕ್ಷವು ಗೆದ್ದು, ಮ್ಯಾನ್ಮಾರ್‌ನಲ್ಲಿ ಸರ್ಕಾರವನ್ನು ರಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT