ಮಾಸ್ಕೊ, ರಷ್ಯಾ (ಎಪಿ): ಕಳೆದ ವಾರ ಹಿಂಸಾರೂಪ ಪಡೆದ ಪ್ರತಿಭಟನೆಗಳಿಗೆ ಸಂಬಂಧಿಸಿದ ಸುಮಾರು 5,800 ಮಂದಿಯನ್ನು ಬಂಧಿಸಲಾಗಿದೆ ಎಂದು ಕಜಕಿಸ್ತಾನದ ಅಧ್ಯಕ್ಷರ ಕಚೇರಿ ಭಾನುವಾರ ಹೇಳಿದೆ.
ಕಜಕಿಸ್ತಾನದಲ್ಲಿ ಕಳೆದ ವಾರ ನಡೆದ ಪ್ರತಿಭಟನೆಗಳು ಕ್ರಮೇಣ ಹಿಂಸಾಚಾರಕ್ಕೆ ತಿರುಗಿದ್ದವು. ಇದರಿಂದ 164 ಮಂದಿ ಅಸುನೀಗಿದ್ದರು. ಅಲ್ಮಾಟಿ ನಗರದಲ್ಲಿ 163 ಮಂದಿ ಮೃತಪಟ್ಟಿದ್ದರು. ಪ್ರತಿಭಟನೆಗಳ ಶಮನಕ್ಕೆ ರಷ್ಯಾ ತನ್ನ ಸೇನೆಯನ್ನು ಕಳುಹಿಸಿತ್ತು.
ದೇಶದಲ್ಲಿ ಆಡಳಿತ ಈಗ ಸ್ಥಿರವಾಗಿದ್ದು ಪ್ರತಿಭಟನಾಕಾರರು ವಶಪಡಿಸಿಕೊಂಡಿದ್ದ ಆಡಳಿತ ಕಚೇರಿಗಳನ್ನು ಆಡಳಿತಾಧಿಕಾರಿಗಳು ಮರಳಿ ಪಡೆದಿದ್ದಾರೆ. ಕೆಲವು ಕಚೇರಿಗಳು ಸುಟ್ಟು ಹೋಗಿವೆ ಎಂದು ಅಧ್ಯಕ್ಷ ಕಾಸಿಮ್ ಜೋಮಾರ್ಟ್ ಟೋಕೇವ್ ಕಚೇರಿ ಭಾನುವಾರ ಹೇಳಿದೆ.
ದೇಶದ ದೊಡ್ಡ ನಗರ ಆಲ್ಮಾಟಿಯಲ್ಲಿ ಭಾನುವಾರ ಸಹ ಆಗಾಗ್ಗೆ ಗುಂಡಿನ ಸದ್ದು ಕೇಳಿ ಬಂದವು. ಸ್ಥಳದಲ್ಲಿ ಕಟ್ಟುನಿಟ್ಟಿನ ಕಾನೂನು ಜಾರಿಗಾಗಿ ಸೇನೆಯು ಗುಂಡು ಹಾರಿಸಿತೇ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ. ಆದರೆ ಶಾಂತಿ ಸುವ್ಯವಸ್ಥೆ ಕಾಪಾಡಲು ತಾವು ಪೊಲೀಸ್ ಮತ್ತು ಸೇನೆಗೆ ಅಧಿಕಾರ ನೀಡಿರುವುದಾಗಿ ಟೋಕೇವ್ ಶುಕ್ರವಾರ ಹೇಳಿದ್ದರು.
ಪ್ರತಿಭಟನಾಕಾರರು ಕಳೆದ ವಾರ ವಶಪಡಿಸಿಕೊಂಡಿದ್ದ ಆಲ್ಮಾಟಿ ವಿಮಾನ ನಿಲ್ದಾಣವನ್ನು ಮತ್ತೆ ವಶಪಡಿಸಿಕೊಳ್ಳಲಾಗಿದ್ದು ಸೋಮವಾರ ಕಾರ್ಯಾರಂಭ ಮಾಡುವ ಸಾಧ್ಯತೆಯಿದೆ.