ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Helicopter Crash: ಕೀನ್ಯಾ ಸೇನಾ ಮುಖ್ಯಸ್ಥ ಸೇರಿ 10 ಮಂದಿ ಸಾವು

Published 19 ಏಪ್ರಿಲ್ 2024, 4:39 IST
Last Updated 19 ಏಪ್ರಿಲ್ 2024, 4:39 IST
ಅಕ್ಷರ ಗಾತ್ರ

ನೈರೋಬಿ: ಗುರುವಾರ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಕೀನ್ಯಾ ರಕ್ಷಣಾ ಪಡೆಗಳ (CDF) ಮುಖ್ಯಸ್ಥ ಜನರಲ್ ಫ್ರಾನ್ಸಿಸ್ ಒಮೊಂಡಿ ಒಗೊಲ್ಲಾ ಸೇರಿ 10 ಮಂದಿ ಮಿಲಿಟರಿ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಕೀನ್ಯಾ ಅಧ್ಯಕ್ಷ ವಿಲಿಯಂ ರುಟೊ ತಿಳಿಸಿದ್ದಾರೆ.

ರಾಜಧಾನಿ ನೈರೋಬಿಯದಿಂದ ವಾಯುವ್ಯಕ್ಕೆ 400 ಕಿಲೋಮೀಟರ್ ದೂರದಲ್ಲಿರುವ ಎಲ್ಜಿಯೊ ಮರಕ್ವೆಟ್ ಕೌಂಟಿಯಲ್ಲಿ ಅಪಘಾತ ಸಂಭವಿಸಿದೆ. ಸ್ಥಳೀಯ ಕಾಲಮಾನ ಗುರುವಾರ ಮಧ್ಯಾಹ್ನ  2:20ಕ್ಕೆ ಹೆಲಿಕಾಪ್ಟರ್ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ. ದುರಂತದಲ್ಲಿ ಇಬ್ಬರು ಪಾರಾಗಿದ್ದಾರೆ ಎಂದು ವರದಿಯಾಗಿದೆ.

ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಅಧ್ಯಕ್ಷ ವಿಲಿಯಂ ರುಟೊ, ‘ಕೀನ್ಯಾ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಫ್ರಾನ್ಸಿಸ್ ಒಮೊಂಡಿ ಒಗೊಲ್ಲಾ ಅವರ ನಿಧನದ ಸುದ್ದಿಯನ್ನು ಘೋಷಿಸಲು ನನಗೆ ತೀವ್ರ ದುಃಖವಾಗಿದೆ. ದುರಂತದ ಬಗ್ಗೆ ತನಿಖೆ ನಡೆಸಲು ಘಟನಾ ಸ್ಥಳಕ್ಕೆ ತನಿಖಾಧಿಕಾರಿಗಳನ್ನು ಕಳುಹಿಸಲಾಗಿದೆ. ಕೀನ್ಯಾದ ನಾರ್ತ್ ರಿಫ್ಟ್ ಪ್ರದೇಶದಲ್ಲಿನ ಸೈನಿಕರನ್ನು ಭೇಟಿ ಮಾಡಲು ಜನರಲ್ ಒಗೊಲ್ಲಾ ನೈರೋಬಿಯಿಂದ ಹೊರಟಿದ್ದರು' ಎಂದು ತಿಳಿಸಿದ್ದಾರೆ.

‘ ಇಂದು ನನಗೆ ಮತ್ತು ರಾಷ್ಟ್ರಕ್ಕೆ ಅತ್ಯಂತ ದುರದೃಷ್ಟಕರ ದಿನವಾಗಿದೆ. ನಮ್ಮ ತಾಯಿನಾಡು ತನ್ನ ಅತ್ಯಂತ ಧೀರ ಜನರಲ್‌ಗಳಲ್ಲಿ ಒಬ್ಬರನ್ನು ಕಳೆದುಕೊಂಡಿದೆ. ಜತೆಗೆ ಈ ದುರಂತದಲ್ಲಿ ನಾವು ವೀರ ಅಧಿಕಾರಿಗಳು ಮತ್ತು ಸೈನಿಕರನ್ನೂ ಕಳೆದುಕೊಂಡಿದ್ದೇವೆ. ದೇಶವು ಶುಕ್ರವಾರದಿಂದ ಮೂರು ದಿನಗಳ ಶೋಕಾಚರಣೆ ಆಚರಿಸಲಿದೆ'
ವಿಲಿಯಂ ರುಟೊ, ಕೀನ್ಯಾ ಅಧ್ಯಕ್ಷ

ಹೆಲಿಕಾಪ್ಟರ್ ದುರಂತದ ಬಳಿಕ ಕೀನ್ಯಾ ಅಧ್ಯಕ್ಷ ನೈರೋಬಿಯದಲ್ಲಿ ರಾಷ್ಟ್ರೀಯ ಭದ್ರತಾ ಮಂಡಳಿಯ ತುರ್ತು ಸಭೆ ಕರೆದಿದ್ದಾರೆ ಎಂದು ಅಧ್ಯಕ್ಷರ ವಕ್ತಾರ ಹುಸೇನ್ ಮೊಹಮ್ಮದ್ ಮಾಹಿತಿ ನೀಡಿದ್ದಾರೆ.

ಮೃತ ಸೇನಾ ಮುಖ್ಯಸ್ಥ ಜನರಲ್ ಫ್ರಾನ್ಸಿಸ್ ಒಮೊಂಡಿ ಒಗೊಲ್ಲಾ ಅವರು ಈ ಹಿಂದೆ ಕೀನ್ಯಾ ವಾಯುಪಡೆಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು. ಉಪ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಅವರು ಮಿಲಿಟರಿ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು.

ಕಳೆದ ವರ್ಷ ಒಗೊಲ್ಲಾ ಅವರನ್ನು ರಕ್ಷಣಾ ಮುಖ್ಯಸ್ಥ ಜನರಲ್ ಆಗಿ ಬಡ್ತಿ ನೀಡಲಾಗಿತ್ತು. ರಕ್ಷಣಾ ಸಚಿವಾಲಯದ ಮಾಹಿತಿ ಪ್ರಕಾರ ಒಗೊಲ್ಲಾ 1984 ರಲ್ಲಿ ಕೀನ್ಯಾ ರಕ್ಷಣಾ ಪಡೆಗೆ ಸೇರಿದ್ದರು. ಅಲ್ಲದೇ ಕೀನ್ಯಾ ಏರ್ ಫೋರ್ಸ್ (ಕೆಎಎಫ್) ನಲ್ಲಿ ಬೋಧಕ ಪೈಲಟ್ ಆಗಿ ತರಬೇತಿ ಪಡೆದು, 40 ವರ್ಷಗಳಿಂದ ಮಿಲಿಟರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ಕೀನ್ಯಾದ ಮಾಧ್ಯಮ ವರದಿಗಳ ಪ್ರಕಾರ ಕಳೆದ 12 ತಿಂಗಳುಗಳಲ್ಲಿ ದೇಶದಲ್ಲಿ ಸಂಭವಿಸಿದ 5ನೇ ಮಿಲಿಟರಿ ಹೆಲಿಕಾಪ್ಟರ್ ಅಪಘಾತ ಇದಾಗಿದೆ.

2021ರ ಜೂನ್‌ನಲ್ಲಿ, ದಕ್ಷಿಣ ನೈರೋಬಿಯದಲ್ಲಿ ತರಬೇತಿ ಸಮಯದಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ, ಕನಿಷ್ಠ 10 ಸೈನಿಕರು ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT