ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾರ್ಕ್ಸ್‌ವಾದಿ ಅನುರಾ ಕುಮಾರ ದಿಸ್ಸನಾಯಕೆ ಶ್ರೀಲಂಕಾದ ಹೊಸ ಅಧ್ಯಕ್ಷ

ಇಂದು ಪ್ರಮಾಣ ವಚನ * ಹಾಲಿ ಅಧ್ಯಕ್ಷ ರನಿಲ್‌ ವಿಕ್ರಮಸಿಂಘೆಗೆ ಸೋಲು
Published : 22 ಸೆಪ್ಟೆಂಬರ್ 2024, 16:13 IST
Last Updated : 22 ಸೆಪ್ಟೆಂಬರ್ 2024, 16:13 IST
ಫಾಲೋ ಮಾಡಿ
Comments

ಕೊಲಂಬೊ: ದ್ವೀಪ ರಾಷ್ಟ್ರ ಶ್ರೀಲಂಕಾದ ಹೊಸ ಅಧ್ಯಕ್ಷರಾಗಿ ಮಾರ್ಕ್ಸ್‌ವಾದಿ ರಾಜಕಾರಣಿ ಅನುರಾ ಕುಮಾರ ದಿಸ್ಸನಾಯಕೆ (56) ಆಯ್ಕೆಯಾಗಿದ್ದು, ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ದಿಸ್ಸನಾಯಕೆ ಅವರು ಶೇ 42.31ರಷ್ಟು ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರೆ, ಮರು ಆಯ್ಕೆ ಬಯಸಿದ್ದ ಹಾಲಿ ಅಧ್ಯಕ್ಷ ರನಿಲ್‌ ವಿಕ್ರಮಸಿಂಘೆ ಕೇವಲ ಶೇ 17.27ರಷ್ಟು ಮತಗಳನ್ನು ಪಡೆದು, ಮೂರನೇ ಸ್ಥಾನಗಳಿಸಿ ಸೋಲು ಅನುಭವಿಸಿದ್ದಾರೆ.

ವಿರೋಧ ಪಕ್ಷವಾದ ಸಮಗಿ ಜನ ಬಲವೇಗಯ (ಎಸ್‌ಜೆಬಿ) ಅಭ್ಯರ್ಥಿ ಸಜಿತ್‌ ಪ್ರೇಮದಾಸ್‌ ಅವರು ಶೇ 32.76ರಷ್ಟು ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದಾರೆ ಎಂದು ಶ್ರೀಲಂಕಾ ಚುನಾವಣಾ ಆಯೋಗ ತಿಳಿಸಿದೆ. 

ಆರ್ಥಿಕ ಬಿಕಟ್ಟಿನಿಂದ ಸುಧಾರಿಸಿಕೊಳ್ಳುತ್ತಿರುವ ದೇಶದಲ್ಲಿ ಹೊಸ ಅಧ್ಯಕ್ಷರ ಆಯ್ಕೆ ಸಂಬಂಧ ಶನಿವಾರ ಮತದಾನ ನಡೆದಿತ್ತು. 1.7 ಕೋಟಿ ಮತದಾರರ ಪೈಕಿ ಶೇ 75ರಷ್ಟು ಜನರು ಮತ ಚಲಾಯಿಸಿದ್ದರು.

ಮಾರ್ಕ್ಸಿಸ್ಟ್‌– ಲೆನಿನಿಸ್ಟ್‌ ಸಿದ್ಧಾಂತದ ಅಡಿಯಲ್ಲಿ ಸ್ಥಾಪನೆಗೊಂಡಿರುವ ಜನತಾ ವಿಮುಕ್ತಿ ಪೆರಮುನದ (ಪೀ‍ಪಲ್ಸ್‌ ಲಿಬರೇಷನ್‌ ಫ್ರಂಟ್‌) ನಾಯಕ ಅನುರಾ ಕುಮಾರ ದಿಸ್ಸನಾಯಕೆ ಅವರನ್ನು ನ್ಯಾಷನಲ್‌ ಪೀಪಲ್ಸ್‌ ಪವರ್‌ (ಎನ್‌ಪಿಪಿ) ಪಕ್ಷ ಚುನಾವಣಾ ಅಖಾಡಕ್ಕೆ ಇಳಿಸಿತ್ತು.

‘ಅಧ್ಯಕ್ಷ ವಿಕ್ರಮಸಿಂಘೆ ಅವರ ಪರವಾಗಿ ನಾನು ಚುನಾವಣಾ ಪ್ರಚಾರ ಮಾಡಿದ್ದೆ. ಆದರೆ, ಶ್ರೀಲಂಕಾದ ಜನರು ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ದಿಸ್ಸನಾಯಕೆ ಅವರನ್ನು ಆಯ್ಕೆ ಮಾಡಿದ ಮತದಾರ ತೀರ್ಪನ್ನು ಗೌರವಿಸುತ್ತೇನೆ’ ಎಂದು ವಿದೇಶಾಂಗ ಸಚಿವ ಅಲಿ ಸಬ್ರಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ.

ಅನುರಾ ಕುಮಾರ ದಿಸ್ಸನಾಯಕೆ
ಅನುರಾ ಕುಮಾರ ದಿಸ್ಸನಾಯಕೆ

2ನೇ ಪ್ರಾಶಸ್ತ್ಯದ ಮತ ಎಣಿಕೆ ಇದೆ ಮೊದಲು

ಚುನಾವಣೆಗೆ ಸ್ಪರ್ಧಿಸಿದ್ದ ಯಾವುದೇ ಅಭ್ಯರ್ಥಿಯು ಶೇ 50ಕ್ಕಿಂತ ಹೆಚ್ಚು ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆಯುವಲ್ಲಿ ವಿಫಲರಾದ ಕಾರಣ ಎರಡನೇ ಪ್ರಾಶಸ್ತ್ಯದ ಮತಗಳನ್ನು ಎಣಿಕೆ ಮಾಡಬೇಕಾಯಿತು. ಎರಡನೇ ಪ್ರಾಶಸ್ತ್ಯದ ಮತಗಳ ಎಣಿಕೆ ನಡೆದದ್ದು ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯ ಇತಿಹಾಸದಲ್ಲಿ ಇದೇ ಮೊದಲು. ಈ ಹಿಂದಿನ ಎಲ್ಲ ಚುನಾವಣೆಗಳಲ್ಲೂ ಮೊದಲ ಪ್ರಾಶಸ್ತ್ಯದ ಮತದ ಸುತ್ತಿನಲ್ಲೇ ಅಭ್ಯರ್ಥಿಗಳು ಸರಳ ಬಹುಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಎರಡನೇ ಮತ್ತು ಮೂರನೇ ಪ್ರಾಶಸ್ತ್ಯದ ಮತಗಳನ್ನು ಎಣಿಸುವ ಪ್ರಮೇಯವೇ ಇಲ್ಲಿಯವರೆಗೆ ಬಂದಿರಲಿಲ್ಲ. ಆದರೆ ಈ ಬಾರಿ ಪರಿಸ್ಥಿತಿ ಭಿನ್ನವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT