ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪನ್ನೂ ಹತ್ಯೆಗೆ ಸಂಚು: ಭಾರತೀಯನ ವಿರುದ್ಧ ಆರೋಪ ಕಳವಳಕಾರಿ– ಬಾಗ್ಚಿ

Published 30 ನವೆಂಬರ್ 2023, 10:28 IST
Last Updated 30 ನವೆಂಬರ್ 2023, 10:28 IST
ಅಕ್ಷರ ಗಾತ್ರ

ನವದೆಹಲಿ: ಸಿಖ್‌ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್‌ ಸಿಂಗ್‌ ಪನ್ನೂ ಹತ್ಯೆಗೆ ಸಂಚು ರೂಪಿಸಿದ್ದಾಗಿ ಭಾರತೀಯ ಪ್ರಜೆ ವಿರುದ್ಧ ಅಮೆರಿಕ ಆರೋಪ ಹೊರಿಸಿರುವುದು ‘ಕಳವಳಕಾರಿ’ ಎಂದು ಭಾರತ ಗುರುವಾರ ಪ್ರತಿಕ್ರಿಯಿಸಿದೆ.

‘ಪನ್ನೂ ಹತ್ಯೆಗೆ ಯತ್ನಿಸಿದ್ದ ಎನ್ನಲಾದ ವ್ಯಕ್ತಿ ವಿರುದ್ಧ ಅಮೆರಿಕದ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ, ಭಾರತೀಯ ಅಧಿಕಾರಿ ಹಾಗೂ ಈ ವ್ಯಕ್ತಿಗೂ ನಂಟಿದೆ ಎಂದು ಆರೋಪಿಸಿರುವುದು ಕಳವಳಕಾರಿ. ಇಂಥ ಕ್ರಮ ಸರ್ಕಾರದ ನೀತಿಗೆ ವಿರುದ್ಧವಾದುದು. ಈ ಹಿಂದೆಯೂ ಭಾರತ ಈ ಮಾತನ್ನು ಹೇಳಿತ್ತು. ಈಗಲೂ ಪುನರುಚ್ಚರಿಸುತ್ತದೆ’ ಎಂದು ವಿದೇಶಾಂಗ ಸಚಿವಾಲಯ ವಕ್ತಾರ ಅರಿಂದಮ್‌ ಬಾಗ್ಚಿ ಹೇಳಿದ್ದಾರೆ. 

ಸರ್ಕಾರ ರಚಿಸಿರುವ ಉನ್ನತ ಮಟ್ಟದ ಸಮಿತಿಯು ಈ ವಿಚಾರವಾಗಿ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಿದೆ ಎಂದೂ ಹೇಳಿದ್ದಾರೆ.

ಪನ್ನೂ ಹತ್ಯೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಪ್ರಜೆ ನಿಖಿಲ್‌ ಗುಪ್ತಾ (52) ವಿರುದ್ಧ ನ್ಯೂಯಾರ್ಕ್‌ನ ದಕ್ಷಿಣ ಜಿಲ್ಲೆಯ ನ್ಯಾಯಾಲಯದಲ್ಲಿ ಬುಧವಾರ ಆರೋಪ ಪಟ್ಟಿ ಸಲ್ಲಿಸಲಾಗಿದೆ.

ಪನ್ನೂ ಹತ್ಯೆಗೆ ಭಾರತೀಯ ಅಧಿಕಾರಿಯೊಬ್ಬರು ಸಂಚು ರೂಪಿಸಿದ್ದರು. ಈ ಅಧಿಕಾರಿ ಬಳಿ ನಿಖಿಲ್‌ ಗುಪ್ತಾ ಕೆಲಸ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.

ನಿಖಲ್‌ ಗುಪ್ತಾ ಅವರನ್ನು ಜೆಕ್‌ ರಿಪಬ್ಲಿಕ್‌ನಲ್ಲಿ ಬುಧವಾರ ಬಂಧಿಸಲಾಗಿದೆ. ಆತನ ಹಸ್ತಾಂತರ ಪ್ರಕ್ರಿಯೆ ನಡೆಯುತ್ತಿದೆ ಎಂದೂ ಅಮೆರಿಕ ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಗಂಭೀರ ವಿಷಯ

‘ಸಂಘಟಿತ ಅಪರಾಧ, ಕಳ್ಳಸಾಗಣೆ, ಶಸ್ತ್ರಾಸ್ತ್ರಗಳ ಮಾರಾಟ ಹಾಗೂ ಉಗ್ರರ ನಡುವೆ ಅಂತರರಾಷ್ಟ್ರೀಯ ಮಟ್ಟದಲ್ಲಿ ನಂಟಿದೆ. ಕಾನೂನು ಜಾರಿ ಸಂಸ್ಥೆಗಳ ಪಾಲಿಗೆ ಇದು ಗಂಭೀರವಾದ ವಿಷಯ. ಈ ಕಾರಣಕ್ಕಾಗಿಯೇ, ಅಮೆರಿಕ ನೀಡಿರುವ ಮಾಹಿತಿ ಕುರಿತು ತನಿಖೆ ನಡೆಸುವುದಕ್ಕಾಗಿ ಭಾರತ ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸಿದೆ’ ಎಂದು ಬಾಗ್ಚಿ ಹೇಳಿದ್ದಾರೆ.

‘ಇದು ಭದ್ರತೆಗೆ ಸಂಬಂಧಪಟ್ಟ ವಿಷಯವಾಗಿರುವ ಕಾರಣ ಹೆಚ್ಚಿನ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲ’ ಎಂದೂ ಸ್ಪಷ್ಟಪಡಿಸಿದ್ದಾರೆ.

‘ಸಿಖ್ಸ್‌ ಫಾರ್‌ ಜಸ್ಟಿಸ್‌’ ಎಂಬ ಸಂಘಟನೆ ನಾಯಕನಾಗಿರುವ ಪನ್ನೂ ವಿರುದ್ಧ ಭಯೋತ್ಪಾದಕ ಕೃತ್ಯಗಳಿಗೆ ಸಂಬಂಧಿಸಿ ಆರೋಪಗಳಿದ್ದು, ಭಾರತದ ತನಿಖಾ ಸಂಸ್ಥೆಗಳಿಗೆ ಬೇಕಾಗಿದ್ದಾನೆ.

ಭಾರತಕ್ಕೆ ಅಧಿಕಾರಿಗಳ ಕಳುಹಿಸಿದ್ದ ಅಮೆರಿಕ

ಪನ್ನೂ ಹತ್ಯೆಗೆ ಯತ್ನಿಸಲಾಗಿತ್ತು ಎಂಬುದು ಗೊತ್ತಾದ ನಂತರ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಆಡಳಿತವು ತನ್ನ ಇಬ್ಬರು ಉನ್ನತ ಅಧಿಕಾರಿಗಳನ್ನು ಭಾರತಕ್ಕೆ ಕಳುಹಿಸಿತ್ತು ಎಂದು ವಾಷಿಂಗ್ಟನ್‌ ಪೋಸ್ಟ್‌ ಬುಧವಾರ ವರದಿ ಪ್ರಕಟಿಸಿತ್ತು.

ಸಿಐಎ ನಿರ್ದೇಶಕ ವಿಲಿಯಮ್ಸ್‌ ಜೆ.ಬರ್ನ್ಸ್‌ ಅವರನ್ನು ಆಗಸ್ಟ್‌ನಲ್ಲಿ ಹಾಗೂ ನ್ಯಾಷನಲ್‌ ಇಂಟೆಲಿಜೆನ್ಸ್‌ನ ನಿರ್ದೇಶಕ ಅವ್ರಿಲ್ ಹೇನ್ಸ್‌ ಅವರನ್ನು ಅಕ್ಟೋಬರ್‌ನಲ್ಲಿ ಕಳುಹಿಸಿತ್ತು. ಈ ಪ್ರಕರಣ ಕುರಿತು ತನಿಖೆ ನಡೆಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಭಾರತವನ್ನು ಒತ್ತಾಯಿಸುವ ಉದ್ದೇಶದಿಂದ ಈ ಇಬ್ಬರು ಅಧಿಕಾರಿಗಳನ್ನು ಕಳುಹಿಸಲಾಗಿತ್ತು ಎಂದು ವರದಿ ಮಾಡಿದೆ.

ಖಾಲಿಸ್ತಾನ ಪ್ರತ್ಯೇಕತಾವಾದಿ ಹರ್‌ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯಲ್ಲಿ ಭಾರತದ ಕೈವಾಡ ಇದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರೂಡೊ ಆರೋಪ ಮಾಡಿದ್ದರು. ಇದಾದ ಕೆಲವು ವಾರಗಳ ನಂತರ, ತನ್ನ ನೆಲದಲ್ಲಿ ಪನ್ನೂ ಹತ್ಯೆಗೆ ಭಾರತೀಯ ವ್ಯಕ್ತಿ ಯತ್ನಿಸಿದ್ದನ್ನು ವಿಫಲಗೊಳಿಸಲಾಗಿತ್ತು ಎಂದು ಅಮೆರಿಕ ಆರೋಪಿಸಿದೆ.

ಕೆನಡಾ ಆರೋಪಗಳನ್ನು ಭಾರತ ಬಲವಾಗಿ ತಳ್ಳಿಹಾಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT