ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಸಳೆಯನ್ನು ಮದುವೆಯಾದ ಮೆಕ್ಸಿಕನ್‌ ಮೇಯರ್‌!

Published 3 ಜುಲೈ 2023, 6:33 IST
Last Updated 3 ಜುಲೈ 2023, 6:33 IST
ಅಕ್ಷರ ಗಾತ್ರ

ಮೆಕ್ಸಿಕೊ: ತನ್ನ ಜನರಿಗೆ ಒಳಿತನ್ನು ತರುವ ಉದ್ದೇಶದಿಂದ ಮೆಕ್ಸಿಕೊದ ಮೇಯರ್‌ರೊಬ್ಬರು ಸಂಪ್ರದಾಯಿಕ ವಿಧಿ ವಿಧಾನದ ಪ್ರಕಾರ ಹೆಣ್ಣು ಮೊಸಳೆಯನ್ನು ಮದುವೆಯಾಗಿದ್ದಾರೆ.

ಹೌದು... ಈ ಮದುವೆ ನಡೆದದ್ದು ದಕ್ಷಿಣ ಮೆಕ್ಸಿಕೊದ ಸಣ್ಣ ಪಟ್ಟಣ ಸ್ಯಾನ್ ಪೆಡ್ರೊ ಹುವಾಮೆಲುಲಾದಲ್ಲಿ. ಚೊಂಟಲ್ ಸಮುದಾಯಕ್ಕೆ ಸೇರಿದ ಜನರು ಈ ಪ್ರದೇಶದಲ್ಲಿ ವಾಸಿಸುತ್ತಾರೆ. ಈ ಪಟ್ಟಣದ ಮೇಯರ್‌ ವಿಕ್ಟರ್ ಹ್ಯೂಗೋ ಸೋಸಾ ಅವರು ಸಂಪ್ರದಾಯದಂತೆ ‘ಅಲಿಸಿಯಾ ಆಡ್ರಿಯಾನಾ‘ ಎಂಬ ಹೆಸರಿನ ಹೆಣ್ಣು ಮೊಸಳೆ ಜೊತೆ ಹಸೆಮಣೆ ಏರಿದ್ದಾರೆ. ಆ ಮೂಲಕ ತಮ್ಮ ಪೂರ್ವಜರ ಆಚರಣೆಯನ್ನು ಮತ್ತೆ ಮುನ್ನೆಲೆಗೆ ತಂದಿದ್ದಾರೆ.

‘ನಾವು ಒಬ್ಬರೊನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದು, ಈ ಮದುವೆಯ ಜವಾಬ್ದಾರಿಯನ್ನು ಸ್ವೀಕರಿಸುತ್ತೇನೆ. ಪ್ರೀತಿ ಇಲ್ಲದೆ ಮದುವೆಯಾಗಲು ಸಾಧ್ಯವಿಲ್ಲ. ನಾನು ರಾಜಕುಮಾರಿಯೊಂದಿಗೆ (ಕೇಮನ್‌ ಪ್ರಭೇದಕ್ಕೆ ಸೇರಿದ ಈ ಮೊಸಳೆಗಳು ರಾಜಕುಮಾರಿಯನ್ನು ಪ್ರತಿನಿಧಿಸುತ್ತವೆ) ಮದುವೆಯಾಗಲು ಒಪ್ಪುತ್ತೇನೆ‘ ಎಂದು ಮದುವೆಯ ಆಚರಣೆ ವೇಳೆ ಮೇಯರ್‌ ವಿಕ್ಟರ್‌ ಹೇಳುತ್ತಾರೆ.

ಮದುವೆ ನಡೆಯುವ ವೇಳೆ ಮೊಸಳೆಯ ಬಾಯಿಯನ್ನು ದಾರದಿಂದ ಕಟ್ಟಲಾಗಿತ್ತು. ಮೊಸಳೆಗೆ ಹಸಿರು ಉಡುಗೆ ತೊಡಿಸಿ ಮದುವೆ ಹೆಣ್ಣಿನ ಹಾಗೆ ಶೃಂಗರಿಸಲಾಗಿತ್ತು. ಮದುವೆಗೂ ಮುನ್ನ ಪ್ರತಿ ಮನೆಗೂ ಮೊಸಳೆಯನ್ನು ಕರೆದುಕೊಂಡು ಹೋಗಲಾಗುತ್ತದೆ. ಮದುವೆ ದಿನ ಮೊಸಳೆಗೆ ಬಿಳಿ ಉಡುಗೆ ತೊಡಿಸುತ್ತಾರೆ.

ಸಂಪ್ರದಾಯದಂತೆ ಮದುವೆ ನಡೆಯುವ ಸಂದರ್ಭ ಸ್ಥಳೀಯ ಮೀನುಗಾರರೊಬ್ಬರು ತಮ್ಮ ಬಲೆಯನ್ನು ಬೀಸುತ್ತಾರೆ. ‘ಮೀನುಗಾರಿಕೆ ಸಂಪನ್ನವಾಗಿರಲಿ, ಜನರ ನಡುವೆ ಶಾಂತಿ– ಸೌಹಾರ್ದತೆ ತರಲಿ‘ ಎಂದು ಪ್ರಾರ್ಥಿಸುತ್ತಾರೆ.

ಮದುವೆಯ ನಂತರ ವರನು ವಧುವಿನೊಂದಿಗೆ (ಮೊಸಳೆ) ನೃತ್ಯ ಮಾಡುತ್ತಾನೆ. ಕೊನೆಯಲ್ಲಿ ವಧುವಿಗೆ ಮುತ್ತು ಕೊಡುತ್ತಾನೆ. ನೆರೆದಿದ್ದವರು ಚಪ್ಪಾಳೆ ತಟ್ಟುವ ಮೂಲಕ ವಧು–ವರನಿಗೆ ಶುಭಾಶಯ ತಿಳಿಸುತ್ತಾರೆ.

‘ಎರಡೂ ಸಮುದಾಯಗಳ ಸಂಪ್ರದಾಯವನ್ನು ನಡೆಸಿಕೊಂಡು ಹೋಗುತ್ತಿದ್ದೇವೆ. ಇದರಿಂದ ಜನರು ಸಂತೋಷಗೊಂಡಿದ್ದಾರೆ‘ ಎಂದು ಮೇಯರ್ ವಿಕ್ಟರ್‌ ಸ್ಥಳೀಯ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.

ಮೇಯರ್‌ ಮದುವೆಯಾದ ಮೊಸಳೆಯು ‘ಕೇಮನ್‌‘ ಪ್ರಭೇದಕ್ಕೆ ಸೇರಿದ್ದು, ಇತರ ಮೊಸಳೆಗಳ ಹಾಗೆ ಜೌಗು ಪ್ರದೇಶದಲ್ಲಿ ಬದುಕುತ್ತದೆ. ಮಧ್ಯ ಅಮೆರಿಕ, ಮೆಕ್ಸಿಕೊದಲ್ಲಿ ಕೇಮನ್‌ ಮೊಸಳೆ ಹೆಚ್ಚು ಕಾಣ ಸಿಗುತ್ತದೆ.

ಆಚರಣೆಯ ಹಿನ್ನಲೆ?

230 ವರ್ಷಗಳ ಹಿಂದೆ ಇಲ್ಲಿನ ಎರಡು ಸ್ಥಳೀಯ ಸಮುದಾಯಗಳ (ಚೊಂಟಲ್‌ ಮತ್ತು ಹುವಾವ್‌) ನಡುವೆ ಕಲಹ ಏರ್ಪಟ್ಟಿತ್ತು. ಆ ವೇಳೆ ಚೊಂಟಲ್‌ ಸಮುದಾಯದ ರಾಜ, ಹುವಾವ್‌ ಸಮುದಾಯದ ರಾಣಿಯನ್ನು ಮದುವೆಯಾಗುತ್ತಾನೆ. ಆ ಮೂಲಕ ಈ ಕಲಹ ಅಂತ್ಯವಾಗುತ್ತದೆ. ಇದರ ನೆನಪಿಗಾಗಿ ಪ್ರತಿ ವರ್ಷ ಪುರುಷ ಮತ್ತು ರಾಜಕುಮಾರಿಯನ್ನು ಪ್ರತಿನಿಧಿಸುವ ಹೆಣ್ಣು ಮೊಸಳೆಗೆ ಮದುವೆ ಮಾಡಿಸಲಾಗುತಿತ್ತು. ಇತ್ತೀಚೆಗೆ ಈ ಆಚರಣೆ ಮರೆಯಾಗಿದ್ದು, ಇದೀಗ ಮರು ಜೀವ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT