ಜೆರುಸಲೇಂ: ಇಸ್ರೇಲ್-ಹಮಾಸ್ ಬಂಡುಕೋರರ ನಡುವಿನ ಸಂಘರ್ಷ ಮಕ್ಕಳ ಮೇಲೆ ಗಾಢ ಪರಿಣಾಮ ಬೀರಿದೆ. ಕೆಲವರು ಬಂಡುಕೋರರ ಒತ್ತೆಯಲ್ಲಿದ್ದಾರೆ. ಮತ್ತೆ ಕೆಲವರು ಅನಾಥರಾಗಿದ್ದಾರೆ. ಇನ್ನೂ ಕೆಲವರು ತಮ್ಮ ಪ್ರೀತಪಾತ್ರರನ್ನು ಕಣ್ಮುಂದೆಯೇ ಹತ್ಯೆಗೀಡಾಗುವುದನ್ನು ನೋಡಿ ಆಘಾತಕ್ಕೆ ಒಳಗಾಗಿದ್ದಾರೆ.
ಇಂಥಹುದೇ ಒಂದು ಘಟನೆ ಹೀಗಿದೆ. ಬಾಲಕಿ ದರಿಯಾ ಎದುರೇ ಆಕೆಯ ತಂದೆ ಹಾಗೂ ಅವರ ಜತೆಯಲ್ಲಿದ್ದ ಗೆಳತಿಯನ್ನು ಹಮಾಸ್ ಬಂಡುಕೋರರು ಗುಂಡಿಕ್ಕಿ ಕೊಂದಿದ್ದಾರೆ.
ಇಸ್ರೇಲ್ ಸರ್ಕಾರ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ವಿಡಿಯೊದಲ್ಲಿ ಘಟನೆ ಬಗ್ಗೆ ದರಿಯಾ ವಿವರಿಸಿದ್ದಾಳೆ. ಹಮಾಸ್ ಬಂಡುಕೋರರು ಇಸ್ರೇಲ್ ಮೇಲೆ ದಾಳಿ ನಡೆಸಿದ ವೇಳೆ ದರಿಯಾ ತನ್ನ ಸಹೋದರ ಲಾವಿ ಜತೆ ಗಾಜಾ ಗಡಿ ಸಮೀಪವಿರುವ ಕಿಬ್ಬುಟ್ಸ್‌ನಲ್ಲಿರುವ ತನ್ನ ತಂದೆಯನ್ನು ಭೇಟಿ ಮಾಡಲು ಹೋಗಿದ್ದಳು.
‘ನಾನು ನಿದ್ದೆಯಿಂದ ಎಚ್ಚರಗೊಂಡು ಕಣ್ಣು ಬಿಟ್ಟಾಗ ತಂದೆ ದ್ವಿರ್ ಕರಪ್ ಅವರು ಕೈಯಲ್ಲಿ ಮಚ್ಚು ಮತ್ತು ಚಾಕು ಹಿಡಿದು ಬಂಡುಕೋರರತ್ತ ಓಡುವುದನ್ನು ನೋಡಿದೆ. ಅವರು ಅಪ್ಪ ಮತ್ತು ಅವರ ಗೆಳತಿ ಸ್ಟಾವಳನ್ನು ಗುಂಡಿಟ್ಟು ಕೊಂದರು. ಇದು ನನ್ನ ಕಣ್ಮುಂದೆಯೇ ನಡೆಯಿತು’ ಎಂದು ದರಿಯಾ ಹೇಳಿದ್ದಾಳೆ.
‘ಭಯಗೊಂಡು ಕಂಬಳಿಯಲ್ಲಿ ಬಚ್ಚಿಟ್ಟುಕೊಂಡಿದ್ದೆ. ಅವರು ಅದನ್ನು ತೆಗೆದು, ನನ್ನನ್ನು ನೋಡಿ ಹೊರಟು ಹೋದರು. ನಾನು ಅಮ್ಮನಿಗೆ ಸಂದೇಶ ಕಳುಹಿಸಿದೆ’ ಎಂದಳು.
‘ಅಮ್ಮಾ, ಇದು ದರಿಯಾ, ಅವರು ತಂದೆ ಮತ್ತು ಸ್ಟಾವ್ ಅವರನ್ನು ಕೊಲೆ ಮಾಡಿದ್ದಾರೆ. ಸಹಾಯ ಮಾಡಿ!’ ಎಂದು ಮಗಳು ಕಳುಹಿಸಿರುವ ಸಂದೇಶವನ್ನು ತಾಯಿ ರೆಯುತ್ ಓದಿರುವ ದೃಶ್ಯವೂ ವಿಡಿಯೊದಲ್ಲಿದೆ.
ಆ ದಿನವನ್ನು ತನ್ನ ಜೀವನದ ಅತ್ಯಂತ ಕೆಟ್ಟ ದಿನ ಎಂದು ವಿವರಿಸಿದ ದರಿಯಾ, ‘ನನ್ನ ತಾಯಿ ಹಾಗೂ ಯಾರನ್ನೂ ಮತ್ತೆ ನೋಡುವುದಿಲ್ಲವೇನೊ ಎಂದು ಭೀತಳಾಗಿದ್ದೆ’ ಎಂದಳು.
‘ಅಲ್-ಖಸ್ಸಾಮ್ ಜನರು ಚಿಕ್ಕ ಮಕ್ಕಳನ್ನು ಕೊಲ್ಲುವುದಿಲ್ಲ’ ಎಂದು ಸ್ಟಾವ್ ಅವರ ಲಿಪ್‌ಸ್ಟಿಕ್ ಬಳಸಿ ಗೋಡೆ ಮೇಲೆ ಬಂಡುಕೋರರು ಬರೆದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.